ADVERTISEMENT

‘ಹೆಚ್ಚುವರಿ ಶಿಕ್ಷಕರ’ ವರ್ಗಾವಣೆ|ಅವೈಜ್ಞಾನಿಕ ಆದೇಶ, ಸರ್ಕಾರಕ್ಕೆ ಪತ್ರ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 5:42 IST
Last Updated 21 ಜುಲೈ 2025, 5:42 IST
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹುಬ್ಬಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹುಬ್ಬಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ‘ದೈಹಿಕ ಶಿಕ್ಷಣ, ಚಿತ್ರಕಲೆ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ಗುರುತಿಸಿ, 240ಕ್ಕಿಂತಲೂ ಹೆಚ್ಚು ಮಕ್ಕಳಿರುವ ಶಾಲೆಗೆ ವರ್ಗಾವಣೆ ಮಾಡುವಂಥ ಅವೈಜ್ಞಾನಿಕ ಆದೇಶ ಸರ್ಕಾರ ಹೊರಡಿಸಿದ್ದು, ಇದನ್ನು ತೀವ್ರವಾಗಿ ಖಂಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಅಧಿಕಾರಿಗಳು ಜನಪ್ರತಿನಿಧಿಗಳನ್ನು ದಿಕ್ಕು ತಪ್ಪಿಸುತ್ತಾರೆ. ಆಡಳಿತ ಹಾಗೂ ಕಾನೂನಿನ ಬಗ್ಗೆ ಏನೂ ಅರಿವಿಲ್ಲದಿದ್ದರೆ ತಮಗೆ ಹೇಗೆ ಬೇಕೋ ಹಾಗೆ ಮಾಡಿಬಿಡುತ್ತಾರೆ. ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ ವರ್ಗಾವಣೆ ಮಾಡಲು ಮುಂದಾಗಿದ್ದರು. ಯಾವ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ, ಸದ್ಯ ವರ್ಗಾವಣೆ ಸ್ಥಗಿತಗೊಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಿ ಎಚ್ಚರಿಕೆ ನೀಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಶಿಕ್ಷಕರ ಕ್ಷೇತ್ರದಿಂದಲೇ ಜನಪ್ರತಿನಿಧಿಯಾಗಿ, ಅವರಿಗಾಗಿಯೇ ಶ್ರಮಿಸಿದ್ದೇನೆ. ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡಿದ್ದು, ಇನ್ನೂ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಿದೆ. ವೃಂದ ಮತ್ತು ನೇಮಕಾತಿ(ಸಿ ಆ್ಯಂಡ್‌ ಆರ್‌) 2017ರ ನಿಯಮದ ತಿದ್ದುಪಡಿ, ಸೇವಾ ಜ್ಯೇಷ್ಠತೆಯ ಮೇಲೆ ಬಡ್ತಿ ನೀಡಬೇಕು ಎನ್ನುವುದು ಶಿಕ್ಷಕರ ಪ್ರಮುಖ ಬೇಡಿಕೆಯಾಗಿದೆ. ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳುವ ಕಾರ್ಯಗಳು ನಡೆಯುತ್ತಿವೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ‘ವಿಧಾನ ಪರಿಷತ್‌ನಲ್ಲಿ 45 ವರ್ಷ ಕರ್ತವ್ಯ ನಿರ್ವಹಿಸುವುದು ಎಂದರೆ, ದೊಡ್ಡ ಸಾಧನೆ. ಶಿಕ್ಷಕರ ಸೇವೆಗೆ ಹೊರಟ್ಟಿ ಅವರು ಇನ್ನಷ್ಟು ಶ್ರಮಿಸುವಂತಾಗಲಿ, ಅವರ ದಾಖಲೆಗಳನ್ನು ಅವರೇ ಮುರಿದು 50 ವರ್ಷದ ಮೈಲಿಗಲ್ಲು ಸ್ಥಾಪಿಸಲಿ.  ಮುಂದಿನ ಬಾರಿ ಹೊರಟ್ಟಿ ಅವರನ್ನು ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ, ಅವಿರೋಧವಾಗಿ ಆಯ್ಕೆ ಮಾಡಬೇಕು. ವೈದ್ಯನಾಥ ಆಯೋಗದ ವರದಿಯಲ್ಲಿ ಹನ್ನೊಂದು ಬೇಡಿಕೆ ಈಡೇರಿದ್ದು, ಸಿ ಆ್ಯಂಡ್‌ ಆರ್‌ ಬೇಡಿಕೆ ಮಾತ್ರ ಬಾಕಿಯಿದೆ’ ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ರವಿ ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೌಡಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ಹೋಟೆಲ್‌ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿದರು. ಪಿ.ಡಿ. ಕಾಲವಾಡ, ಬಾಲರಾಜ, ತ್ಯಾಗಂ, ಪ್ರಮೋದ ರೋಣದ, ಶಾಹಿನ್ ಬೇಗಂ, ಉಷಾ ಹೊಸಮನಿ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ದೈಹಿಕ ಶಿಕ್ಷಣ ಶಿಕ್ಷರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.