ಧಾರವಾಡ: ‘ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ವತಿಯಿಂದ ತಾಲ್ಲೂಕಿನ ರಾಮಾಪುರದಲ್ಲಿ ಆಗಸ್ಟ್ 1ರಂದು ಎಚ್‌ಪಿವಿ ಲಸಿಕೆ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದು ಯೋಜನೆ ಸಂಯೋಜಕ ಡಾ.ಕವನ್ ದೇಶಪಾಂಡೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗರ್ಭಪಾಶಿ ಕ್ಯಾನ್ಸರ್ ತಡೆ ನಿಟ್ಟಿನಲ್ಲಿ ರೋಟರಿ ಸೆಂಟ್ರಲ್ ವತಿಯಿಂದ ₹36 ಲಕ್ಷ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ 2,500 ಬಾಲಕಿಯರಿಗೆ (9 ರಿಂದ 14 ವರ್ಷದವರು) ಎಚ್‌ಪಿವಿ ಲಸಿಕೆ ನೀಡುವ ಯೋಜನೆ ಘೋಷಿಸಲಾಗಿದೆ. ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಫ್ಯಾಮಿಲಿ ಫ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‌ಪಿಎಐ) ನಿರ್ವಹಿಸಲಿದೆ. ಟಾಟಾ ಮೋಟಾರ್ಸ್‌ನವರು ಯೋಜನೆಗೆ ಕೈಜೋಡಿಸಿದ್ಧಾರೆ’ ಎಂದು ತಿಳಿಸಿದರು.
‘ಗರ್ಭಪಾಶಿ ಕ್ಯಾನ್ಸರ್ ಮತ್ತು ಅದರ ಅಪಾಯದ ಬಗ್ಗೆ ಹಾಗೂ ಎಚ್‍ಪಿವಿ ಲಸಿಕೆ ಕುರಿತು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಮುದಾಯದ ನಾಯಕರುಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಆರೋಗ್ಯ ಸೇವಾ ವೃತ್ತಿಪರರು, ಶಾಲಾಧಿಕಾರಿಗಳು ಹಾಗೂ ಸ್ಥಳೀಯ ಪಾಲುದಾರರೊಂದಿಗೆ ಸಂವಾದ ನಡೆಸಿ ಒಪ್ಪಿಗೆ ಪಡೆಯುವುದು ಹಾಗೂ ಕೊನೆಯ ಹಂತದಲ್ಲಿ ಎಚ್‍ವಿಪಿ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.
ಎಫ್‌ಪಿಎಐ ಅಧ್ಯಕ್ಷೆ ಡಾ. ರತ್ನಮಾಲಾ ದೇಸಾಯಿ ಮಾತನಾಡಿ, ‘ಜಾಗತಿಕವಾಗಿ ಗರ್ಭಪಾಶಿ ಕ್ಯಾನ್ಸರ್ ಹೆಚ್ಚಾಗುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು 2030ರೊಳಗೆ ಶೇ 90ರಷ್ಟು ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ಹಾಕಬೇಕು ಎಂದು ತಿಳಿಸಿದೆ. ಲಸಿಕೆಗೆ ₹1400 ವೆಚ್ಚವಾಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳು,ರೋಟರಿ ಹಾಗೂ ಸಂಸ್ಥೆಗಳ ಸಿಎಸ್‍ಆರ್ ನಿಧಿ ನೆರವು ಪಡೆಯಲಾಗುತ್ತಿದೆ’ ಎಂದರು.
ಎಫ್‌ಪಿಎಐ ಪ್ರಧಾನ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ, ಡಾ.ಪಲ್ಲವಿ ದೇಶಪಾಂಡೆ, ವಾಮನ್ ಮಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.