1,650 ಕಿ.ಮೀ. ಅವಳಿ ನಗರದಲ್ಲಿ ನೆಲದಾಳದಲ್ಲಿ ಅಳವಡಿಸುತ್ತಿರುವ ಪೈಪ್ ಉದ್ದ
700 ಕಿ.ಮೀ. ಸದ್ಯ ಪೂರ್ಣಗೊಂಡಿರುವ ಕಾರ್ಯ
300 ಕಿ.ಮೀ. ಪೈಪ್ ಬದಲಾವಣೆ ಆಗಬೇಕಿರುವ ಉದ್ದ
ಹುಬ್ಬಳ್ಳಿ: ಅವಳಿ ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆಯು ಒಂದಿಲ್ಲೊಂದು ಕಾರಣಕ್ಕೆ ತಡವಾಗುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ, ಎಚ್‌ಡಿಪಿಇ ಪೈಪ್‌ನಲ್ಲಿನ ದೋಷ.
ಹುಬ್ವಳ್ಳಿ– ಧಾರವಾಡದಾದ್ಯಂತ 24/7 ನೀರು ಪೂರೈಸುವ ಯೋಜನೆಯಡಿ ನೆಲದಾಳದಲ್ಲಿ ಹಾಕಲಾದ ಅಧಿಕ ಸಾಂದ್ರತೆಯ (ಎಚ್‌ಡಿಪಿಇ) ಪೈಪ್‌ಗಳ ಗುಣಮಟ್ಟದಲ್ಲಿ ದೋಷವಿದೆ ಎಂದು ಒಂದೂವರೆ ವರ್ಷದ ಹಿಂದೆ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ನಡೆಸಿದ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಿತ್ತು.
ಒಟ್ಟು 300 ಕಿ.ಮೀ. ಉದ್ದ ಟೆಕ್ಸ್‌ಮೋ ಕಂಪನಿಯ ಪೈಪ್‌ಗಳನ್ನು ಹಾಕಲಾಗಿದೆ. ಈ ಪೈಪ್‌ಗಳು ನಿರೀಕ್ಷಿತ ನೀರಿನ ಒತ್ತಡ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂದು ವರದಿ ತಿಳಿಸಿದೆ. ಆದ್ದರಿಂದ ಈ ಕಂಪನಿಯ ಪೈಪ್‌ಗಳನ್ನು ಕಿತ್ತು, ಮತ್ತೆ ಹೊಸದಾಗಿ ಸುಪ್ರೀಂ ಕಂಪನಿಯ ಪೈಪ್ ಅಳವಡಿಸುವ ಕಾರ್ಯ ವಿವಿಧ ಬಡಾವಣೆಗಳಲ್ಲಿ ಪ್ರಗತಿಯಲ್ಲಿದೆ. ಹೀಗೆ ಕಿತ್ತಿರುವ ಪೈಪ್‌ಗಳನ್ನು ಸದ್ಯ ರಸ್ತೆ ಪಕ್ಕ ಹಾಗೆಯೇ ಬಿಡಲಾಗಿದೆ.
‘ಹಲವು ಮಾನದಂಡಗಳನ್ನು ಅನುಸರಿಸಿ ಹೈಡ್ರೊ ಟೆಸ್ಟ್ (ನೀರಿನ ಒತ್ತಡ) ನಡೆಸಲಾಗಿದೆ. ಈ ಪೈಕಿ ಒಂದು ಕಡೆ ಮಾತ್ರ ಮಾನದಂಡವನ್ನು ಪೂರೈಸುವಲ್ಲಿ ಪೈಪ್ ವಿಫಲವಾಗಿದೆ. ಈ ಪೈಪ್‌ಗಳ ವೆಚ್ಚವನ್ನು ಈಗಾಗಲೇ ಸಂಸ್ಥೆಯವರಿಂದ ವಸೂಲಿ ಮಾಡಲಾಗಿದೆ. ಹೊಸದಾಗಿ ಅಳವಡಿಸುವ ಪೈಪ್‌ಗಳನ್ನೂ ಹೈಡ್ರೊ ಟೆಸ್ಟ್‌ಗೆ ಒಳಪಡಿಸಿದ ನಂತರವೇ ಒಪ್ಪಿಗೆ ನೀಡಲಾಗುತ್ತದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ ಹುಬ್ಬಳ್ಳಿ– ಧಾರವಾಡ ಯೋಜನಾ ಅನುಷ್ಠಾನ ಘಟಕದ (ಕೆಯುಡಬ್ಲುಎಸ್‌ಎಂಪಿ–ಪಿಐಯು) ಸೂಪರಿಂಟೆಂಡಿಂಗ್ ಎಂಜಿನಿಯರ್ ಎಚ್.ಎನ್. ಮಂಜುನಾಥ ಅವರು ತಿಳಿಸಿದ್ದಾರೆ.
ಪರೀಕ್ಷೆಯ ಮಾನದಂಡ ಪೂರೈಸಲು ವಿಫಲವಾದ ಕಾರಣ ಪೈಪ್‌ಗಳನ್ನು ಬದಲಾಯಿಸುವಂತೆ ಸರ್ಕಾರದ ಸಮಿತಿ ತಿಳಿಸಿತ್ತು. ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಅವುಗಳನ್ನು ಬದಲಿಸುವ ಕಾರ್ಯ ಪ್ರಗತಿಯಲ್ಲಿದೆಎಚ್.ಎನ್. ಮಂಜುನಾಥ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆಯುಡಬ್ಲುಎಸ್‌ಎಂಪಿ–ಪಿಐಯು
ಇನ್ನಷ್ಟು ಸಮಯ ಬೇಕು
ನೀರು ಪೂರೈಕೆಗಾಗಿ ಮೇಲ್ಮಟ್ಟದ ಹಾಗೂ ನೆಲ ಮಟ್ಟದ ಒಟ್ಟು 23 ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಪೈಕಿ ಎರಡು ಟ್ಯಾಂಕ್‌ಗಳ ನಿರ್ಮಾಣ ಕಾರ್ಯವಷ್ಟೇ ಬಾಕಿ ಇದೆ. ಒಟ್ಟು 1.20 ಲಕ್ಷ ನಳಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಇದ್ದು ಸದ್ಯ ಪೂರ್ಣಗೊಂಡಿರುವುದು 15 ಸಾವಿರ ಮಾತ್ರ. ಆದ್ದರಿಂದ ನೀರು ಸಂಗ್ರಹಿಸುವ ಟ್ಯಾಂಕ್‌ಗಳು ಸಿದ್ಧವಾದರೂ ಮನೆಮನೆಗೆ ಸಂಪರ್ಕ ಪೂರ್ಣಗೊಳ್ಳಲು ಇನ್ನಷ್ಟು ಸಮಯ ಹಿಡಿಯುವುದರಲ್ಲಿ ಅನುಮಾನವಿಲ್ಲ. ಮಲಪ್ರಭಾ ನದಿಯಿಂದ ಅಮ್ಮಿನಬಾವಿ ಜಲ ಶುದ್ಧೀಕರಣ ಘಟಕಕ್ಕೆ ನೀರು ಪೂರೈಸುವ ಕೊಳವೆ ಮಾರ್ಗ ಪೂರ್ಣಗೊಂಡಿದ್ದರೂ ಅಲ್ಲಿಂದ ಶುದ್ಧ ನೀರನ್ನು ರಾಯಾಪುರ ಜಲ ಸಂಗ್ರಹಾಗಾರಕ್ಕೆ ಸರಬರಾಜು ಮಾಡುವ ಕೊಳವೆ ಮಾರ್ಗ ಇನ್ನೂ 2 ಕಿ.ಮೀ. ಬಾಕಿ ಇದೆ. ಈ ಎಲ್ಲ ಕಾರಣಗಳಿಂದ ಬರುವ ಜೂನ್‌ಗೆ ಮುಗಿಯಬೇಕಿದ್ದ ಕಾಮಗಾರಿ ಅವಧಿಯನ್ನು ಡಿಸೆಂಬರ್‌ವರೆಗೂ ವಿಸ್ತರಿಲಾಗಿದೆ. ಸದ್ಯ ನವಲೂರು ಸನ್ ಸಿಟಿ ಮೊರಾರ್ಜಿ ನಗರ ಡಿ.ಸಿ. ಕಾಂಪೌಂಡ್ ಪ್ರದೇಶಗಳಿಗೆ ಪರೀಕ್ಷಾರ್ಥವಾಗಿ ನೀರು ಪೂರೈಕೆ ಪ್ರಾರಂಭವಾಗಿದೆ. ಇಡೀ ನಗರದ ಜನರು ನಿರಂತರ ನೀರು ಸೌಲಭ್ಯ ಪಡೆಯಲು ಇನ್ನಷ್ಟು ಕಾಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.