ADVERTISEMENT

ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರು

11 ದಿನ ನಡೆಯುವ ಅದ್ದೂರಿ ಗಣೇಶೊತ್ಸವ, ಬೀದಿ–ಬೀದಿಗಳಲ್ಲಿ ಪೆಂಡಾಲ್‌ ನಿರ್ಮಾಣ

ನಾಗರಾಜ ಬಿ.ಎನ್‌.
Published 25 ಆಗಸ್ಟ್ 2025, 6:03 IST
Last Updated 25 ಆಗಸ್ಟ್ 2025, 6:03 IST
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ದುರ್ಗದಬೈಲ್‌ ಗಣೇಶೋತ್ಸವ ಸಮಿತಿ ನಿರ್ಮಿಸಿರುವ ಗಣೇಶ ಪೆಂಡಾಲ್‌
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ದುರ್ಗದಬೈಲ್‌ ಗಣೇಶೋತ್ಸವ ಸಮಿತಿ ನಿರ್ಮಿಸಿರುವ ಗಣೇಶ ಪೆಂಡಾಲ್‌ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಗಣೇಶೋತ್ಸವದ ಸಂಭ್ರಮ. ನಗರದ ಬೀದಿ–ಬೀದಿಗಳಲ್ಲಿ ಹಬ್ಬದ  ಕಳೆ. ಹೂವುಗಳ ಗಂಧ, ಮಣ್ಣಿನ ಮೂರ್ತಿಯ ಸುಗಂಧ; ಭಕ್ತರ ಹೃದಯದಲ್ಲಿ ಭಕ್ತಿಯ ನಿನಾದ...

ಗಣೇಶ ಹಬ್ಬದ ಸಿದ್ಧತೆ ನೋಡಿದರೆ, ಮಂಗಳವಾರ ಕಳೆದು ಬುಧವಾರದ ನಸುಕಿನ ವೇಳೆಗೆ ನಗರವೇ ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಕಂಗೊಳಿಸಲಿದೆ. ಓಣಿಗಳಲ್ಲಿಯ ದೀಪಾಲಂಕಾರ, ವೈವಿಧ್ಯಮಯ ಅಲಂಕಾರದ ಹೂ–ಬಳ್ಳಿಗಳು, ಬಗೆಬಗೆಯ ಮಂಟಪಗಳು ಹನ್ನೊಂದು ದಿನ ನಡೆಯುವ ಉತ್ಸವಕ್ಕೆ ಮೆರಗು ನೀಡಲಿವೆ.

ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರ ಗಣೇಶ ಪೆಂಡಾಲ್‌ಗಳು ನಿರ್ಮಾಣದ ಅಂತಿಮ ಹಂತದಲ್ಲಿವೆ. ಹಬ್ಬಕ್ಕೆ ಇನ್ನೂ ಎರಡೂ ದಿನ ಬಾಕಿಯಿದ್ದು, ಮಾರುಕಟ್ಟೆ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿಗಳ ಮಾರಾಟ ಹಾಗೂ ಕಾಯ್ದಿರಿಸುವಿಕೆ ಜೋರಾಗಿದೆ.

ADVERTISEMENT

ಸಾರ್ವಜನಿಕರು ಸಹ ಮನೆ–ಮನೆಗಳಲ್ಲಿ ಗಣಪ ಮೂರ್ತಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಗಣೇಶ ಬಾವಿಗಳನ್ನು ಶುಚಿಗೊಳಿಸಿ, ಮೂರ್ತಿಗಳು ಮೆರವಣಿಗೆ ಸಾಗುವ ಮಾರ್ಗಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ಏಕಗವಾಕ್ಷಿ ವ್ಯವಸ್ಥೆಯಡಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸಮಿತಿಯವರಿಗೆ ಅನುಮತಿಯನ್ನು ನೀಡಲಾಗಿದೆ. ನೆಹರೂ ಮೈದಾನದಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ.

ಪಿಒಪಿ ಮೂರ್ತಿ ವಶ: ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗಾಗಲೇ ಕೆಲ ಕಡೆ ದಾಳಿ ನಡೆಸಿ 300ಕ್ಕೂ ಹೆಚ್ಚು ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಂಡಿದೆ. ಪಿಒಪಿ ಮೂರ್ತಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು, ಮೂರ್ತಿ ತಯಾರಕರಿಂದ ಅಥವಾ ಮಾರಾಟಗಾರಿಂದ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂಬ ಷರತ್ತು ವಿಧಿಸಿದೆ.

ದರ್ಶನಕ್ಕೆ ಶುಲ್ಕ, ಆಕ್ಷೇಪ: ಹುಬ್ಬಳ್ಳಿಯ ಗಣೇಶೋತ್ಸವ ನೋಡಲು ಜನರು ತಂಡೋಪ ತಂಡವಾಗಿ ಬರುತ್ತಾರೆ. ಕೆಲ ಸಾರ್ವಜನಿಕ ಗಣೇಶ ಸಮಿತಿಗಳು, ದರ್ಶನಕ್ಕೆ ಶುಲ್ಕ ನಿಗದಿಪಡಿಸುವುದನ್ನು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ವಿರೋಧ ವ್ಯಕ್ತಪಡಿಸಿದೆ. ಆದರೆ, ಮೂರ್ತಿ ಪ್ರತಿಷ್ಠಾಪನೆಯ ಸಮಿತಿಗಳು ಯಾವ ನಿರ್ಧಾರ ಕೈಗೊಳ್ಳುತ್ತವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

900ಕ್ಕೂ ಹೆಚ್ಚು ಸಾರ್ವಜನಿಕ ಗಣಪ: ಹಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ 940 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 662, ಧಾರವಾಡದಲ್ಲಿ 278 ಸ್ಥಳಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಬಹುತೇಕ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಇಡಲಾಗುತ್ತದೆ.

ವೈವಿಧ್ಯಮಯ ರೂಪಕ, ಮಾದರಿ: ನಗರದ ದುರ್ಗದ ಬೈಲ್‌, ಸ್ಟೇಷನ್‌ ರಸ್ತೆ, ಶೀಲವಂತರ ಓಣಿ, ಬಾಬಾಸಾನ್‌ ಗಲ್ಲಿ, ವಿದ್ಯಾನಗರ, ನವನಗರ, ಸ್ಟೇಷನ್‌ ರಸ್ತೆ ಸೇರಿದಂತೆ ವಿವಿಧೆಡೆಯಲ್ಲಿ ವೈವಿಧ್ಯಮಯ ಮಾದರಿಯಲ್ಲಿ ಗಣೇಶ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಪೌರಾಣಿಕ ಹಾಗೂ ಸಾಮಾಜಿಕ ರೂಪಕಗಳು ಇರಲಿವೆ. ಸರಾಫ್‌ ಗಟ್ಟಿ ಗಣೇಶೋತ್ಸವ ಮಂಡಳಿ 121 ಕೆಜಿ. ಬೆಳ್ಳಿ ಗಣಪ ಮೂರ್ತಿ ಪ್ರತಿಷ್ಠಾಪಿಸಲಾಗುವುದು.

ಅದ್ದೂರಿ ಮೆರವಣಿಗೆ: ದಾಜೀಬಾನ್‌ ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’, ಮರಾಠಗಲ್ಲಿಯ ‘ಹುಬ್ಬಳ್ಳಿ ಕಾ ಮಹಾರಾಜ’ ಹಾಗೂ ಮೇದಾರ ಓಣಿಯ ‘ಸಪ್ತ ಸಾಮ್ರಾಟ್‌’ ಗಣಪ ಮೂರ್ತಿ 25 ಅಡಿ ಎತ್ತರವಿದೆ. ಪ್ರತಿವರ್ಷವೂ ಈ ಮೂರ್ತಿಗಳ ವಿಸರ್ಜನಾ ಮೆರವಣಿ ನಗದ ಬೀದಿಬೀದಿಗಳಲ್ಲಿ ಅದ್ದೂರಿಯಾಗಿ ನಡೆಯುತ್ತವೆ. 

ವಿಸರ್ಜನಾ ಬಾವಿಗಳು: ಇಂದಿರಾ ಗಾಜಿನ ಮನೆ ಉದ್ಯಾನದ ಹಿಂಭಾಗದ ಬಾವಿ ಹಾಗೂ ಹೊಸೂರು ಬಾವಿಗಳಲ್ಲಿ ಬಹುತೇಕ ಸಾರ್ವಜನಿಕ ಗಣೇಶಮೂರ್ತಿಗಳು ವಿಸರ್ಜನೆಯಾಗುತ್ತವೆ. ಹಳೇಹುಬ್ಬಳ್ಳಿ, ಉಣಕಲ್‌, ಗೋಕುಲ ರಸ್ತೆಗಳ ವಿವಿಧ ಬಡಾವಣೆಗಳಲ್ಲಿರುವ ಬಾವಿಗಳಲ್ಲೂ ಮೂರ್ತಿ ವಿಸರ್ಜನೆ ನಡೆಯುತ್ತದೆ. ಬಾವಿಗಳನ್ನು ಶೂಚಿಗೊಳಿಸಿ, ವಿದ್ಯುತ್‌ ದೀಪ, ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಹೈಡ್ರೋಲಿಕ್‌ ಯಂತ್ರ ಹಾಗೂ ಕ್ರೇನ್‌ ಮೂಲಕ ಮೂರ್ತಿ ವಿಸರ್ಜನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹುಬ್ಬಳ್ಳಿಯ ಹೊಸ ಮೇದಾರ ಒಣಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗಣೇಶ ಪೆಂಡಾಲ್‌
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ನಿರ್ಮಿಸಿರುವ ಪೆಂಡಾಲ್‌ನಲ್ಲಿಯೇ 25 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಲಾಗುತ್ತಿದೆ
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ಕಲಾವಿದ ಗಣೇಶಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು
ಹಳೇ ಹುಬ್ಬಳ್ಳಿಯ ಅರವಿಂದನಗರದ ಭೈರನಾಥ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶನ ನೀಡಿದ ಕಲಾವಿದ ಮಚಂದ್ರನಾಥ ಹಣಗಿ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಪರಿಸರ ಸ್ನೇಹಿ ಗಣಪನ ಹಬ್ಬ ಆಚರಿಸಲು ಸಿದ್ಧತೆ ನಡೆದಿದೆ. ಬಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಸೂಚಿಸಲಾಗಿದೆ.
–ದಿವ್ಯಪ್ರಭು ಜಿಲ್ಲಾಧಿಕಾರಿ

Quote - ಶಾಂತಿಯಿಂದ ಹಬ್ಬ ಆಚರಿಸಲು ತಿಳಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ನಿಶ್ಚಿತ. –ಎನ್‌. ಶಶಿಕುಮಾರ್‌ ಕಮಿಷನರ್‌ ಹುಬ್ಬಳ್ಳಿ ಧಾರವಾಡ ಮಹಾನಗರ

ಗಣೇಶ ಬಾವಿಗಳನ್ನು ಶುಚಿಗೊಳಿಸಿ ಮೆರವಣಿಗೆ ಸಾಗುವ ರಸ್ತೆಯ ಗುಂಡಿಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ
–ರುದ್ರೇಶ ಘಾಳಿ ಆಯುಕ್ತ ಮಹಾನಗರ ಪಾಲಿಕೆ
ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಜಿಲ್ಲಾಡಳಿ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಸಹಕಾರ ಇದೆ.
–ಮರೇಶ ಹಿಪ್ಪರಗಿ ಕಾರ್ಯದರ್ಶಿ ಸಾರ್ವಜನಿಕ ಶ್ರೀ ಗಜಾನನ ಸಮಿತಿಗಳ ಮಹಾಮಂಡಳ

ಸಾಮರಸ್ಯದ ಗಣೇಶ ಹಬ್ಬ

ಹುಬ್ಬಳ್ಳಿಯಲ್ಲಿ ಸರ್ವಧರ್ಮೀಯರೆಲ್ಲ ಒಂದಾಗಿ ಗಣಪನ ಹಬ್ಬ ಆಚರಿಸುವುದು ವಿಶೇಷ. ಇಲ್ಲಿನ ಬಿಡ್ನಾಳ ಹಗೂ ಪ್ರಿಯದರ್ಶಿನಿ ಕಾಲೊನಿಯ ಗಣೇಶೋತ್ಸವದಲ್ಲಿ ಹಿಂದೂ–ಮುಸ್ಲಿಮರು ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಪ್ರತಿಯೊಂದು ಜವಾಬ್ದಾರಿಯನ್ನು ಎರಡೂ ಸಮುದಾಯದವರು ಹಂಚಿಕೊಂಡು ಹಬ್ಬ ಆಚರಿಸುತ್ತಾರೆ.

ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಡಿಜೆ ಹಬ್ಬದ ನೆಪದಲ್ಲಿ ಅಹಿತಕರ ಘಟನೆಗಳು ಜರುಗುವುದು ತಪ್ಪಿಸಲು ಪೊಲೀಸ್ ಇಲಾಖೆ ಹಲವು ಕ್ರಮ ತೆಗೆದುಕೊಂಡಿದೆ. ಅದರಲ್ಲಿ ಡಿಜೆ (ಅದ್ದೂರಿ ಧ್ವನಿವರ್ಧಕಗಳು) ಬಳಕೆಯನ್ನು ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಲು ಸೂಚಿಸಿದೆ. ಮೂರ್ತಿಗಳ ವಿಸರ್ಜನೆ ಪ್ರಕ್ರಿಯೆಯು ರಾತ್ರಿ 10ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಎಚ್ಚರಿಕೆ ಇದೆ. ಈದ್ಗಾ ಮೈದಾನದಲ್ಲಿ ಉತ್ಸವ ಪರ–ವಿರೋಧ ವಾದ–ವಿವಾದದ ನಡುವೆಯೇ 2022ರಿಂದ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. 5 ವರ್ಷ ಮೂರ್ತಿ ಪ್ರತಿಷ್ಠಾಪಿಸಲು ಗಜಾನನ ಉತ್ಸವ ಮಹಾಮಂಡಳಿಗೆ ಅವಕಾಶ ಸಿಕ್ಕಿದೆ. ಪೊಲೀಸ್‌ ಸುಪರ್ದಿಯಲ್ಲಿ ಮೂರು ದಿನ ಮೈದಾನದಲ್ಲಿ ಅದ್ದೂರಿಯಾಗಿ ಉತ್ಸವ ನಡೆಯುತ್ತದೆ. ಮೇಲ್ಸೇತುವೆ ಸಂಚಾರ ದಟ್ಟಣೆ  ಕೆಲ ಪ್ರಮುಖ ರಸ್ತೆಗಳನ್ನೇ ಬಂದ್‌ ಮಾಡಿ ಗಣೇಶ ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಪ್ರತಿವರ್ಷ ಹಬ್ಬದ ವೇಳೆ ವಾಹನಗಳ ಸಂಚಾರ ದಟ್ಟಣೆ ಆಗುತ್ತದೆ. ಈ ವರ್ಷ ಮೇಲ್ಸೇತುವೆ ಕಾಮಗಾರಿಯಿಂದ ಹಳೇ ಬಸ್‌ ನಿಲ್ದಾಣದ ಎದುರಿನ ರಸ್ತೆ ಬಸವವನ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಲಾಗಿದೆ.

ಒಂದು ಕಡೆ ಸಂಚಾರಕ್ಕೆ ಮುಕ್ತ ಮಾಡುವುದಾಗಿ ಜಿಲ್ಲಾಡಳಿತ ಹೇಳುತ್ತಿದ್ದರೂ ಅಂತಿಮ ನಿರ್ಧಾರವಾಗಿಲ್ಲ. ಹೀಗಾಗಿ ಹಬ್ಬದ ವೇಳೆ ಮತ್ತಷ್ಟು ವಾಹನಗಳ ದಟ್ಟಣೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Cut-off box - ಅಂಕಿ ಅಂಶ ಸಾರ್ವಜನಿಕ ಸ್ಥಳಗಳಲ್ಲಿ ಗಣಪ; 940 ಮನೆಗಳಲ್ಲಿ ಗಣಪ; 5000 ಭದ್ರತಾ ಸಿಬ್ಬಂದಿ; 3000 ಸಿಸಿಟಿವಿ ಕ್ಯಾಮೆರಾ; 6000 ಗಡಿಪಾರಾದ ರೌಡಿಗಳು; 150 ಸೂಕ್ಷ್ಮ ಪ್ರದೇಶ; 78 ಅತಿ ಸೂಕ್ಷ್ಮ ಪ್ರದೇಶ; 26 ಸುರಕ್ಷತಾ ವಲಯ; 18 ಪ್ರಮುಖ ಗಣೇಶ ಬಾವಿ;3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.