ಹುಬ್ಬಳ್ಳಿ: ಹಳೆಯ 64 ಹಾಗೂ 65ನೇ ವಾರ್ಡ್‌ಗಳು ಸೇರಿ ರಚನೆಯಾದ 76ನೇ ವಾರ್ಡ್‌ಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಸ್ಪರ್ಶ ನೀಡಲಾಗುತ್ತಿದೆ.
ವಾರ್ಡ್‌ನಲ್ಲಿರುವ ಬಹುತೇಕ ಮಂದಿ ಕಾರ್ಮಿಕರು ಹಾಗೂ ಸಣ್ಣ ಪುಟ್ಟ ಕೆಲಸ ಮಾಡುವ ಶ್ರಮಿಕರು. ಅಲ್ ಹಯಾತ್ ಉರ್ದು ಅನುದಾನಿತ ಶಾಲೆಯಲ್ಲಿ ಇಂಗ್ಲಿಷ್, ಕನ್ನಡ ಹಾಗೂ ಉರ್ದು ಮಾಧ್ಯಮದಲ್ಲಿ 1ರಿಂದ 7ನೇ ತರಗತಿವರೆಗೆ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಪ್ರೌಢಶಾಲೆ ಇದ್ದು, 11 ಅಂಗನವಾಡಿ ಕೇಂದ್ರಗಳಿವೆ.
ಇಸ್ಲಾಂಪುರ, ಎನ್.ಎ. ನಗರ, ಜನ್ನತ್ ನಗರ, ಕಲ್ಮೇಶ್ವರ ನಗರ, ಟಿಪ್ಪುನಗರ, ಜವಳಿ ಪ್ಲಾಟ್‌ನಲ್ಲಿ ಮಸೀದಿಗಳಿದ್ದು, ಕಲ್ಮೇಶ್ವರ ನಗರದ ಮಹಾಕಾಳಿ ದೇವಸ್ಥಾನ, ಟಿಪ್ಪುನಗರದಲ್ಲಿ ಮಾರುತಿ ದೇವಸ್ಥಾನ, ಜನ್ನತ್ ನಗರ ನಾಗದೇವರ ದೇವಸ್ಥಾನವಿದೆ. ಕಸಬಾ ಪೇಟೆ ಪೊಲೀಸ್ ಠಾಣೆ ಸಮೀಪದಲ್ಲಿ ಇರುವುದರಿಂದ ಸೂಕ್ತ ಭದ್ರತೆ ಇದೆ.
ಅಭಿವೃದ್ಧಿ ಕಾಮಗಾರಿಗಳು: ‘ಎನ್.ಎ. ನಗರದಲ್ಲಿ ₹1 ಕೋಟಿ ಮೊತ್ತದ ಯುಜಿಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ₹60 ಲಕ್ಷ ವೆಚ್ಚದಲ್ಲಿ ಒಟ್ಟು ಐದು ರಸ್ತೆಗಳ ಪೈಕಿ ಮೂರು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. 24x7 ನೀರು ಪೂರೈಕೆಗೆ ಬಹುತೇಕ ಕಡೆ ಪೈಪ್‌ಲೈನ್ ಅಳವಡಿಕೆ, ಮನೆ–ಮನೆ ಸಂಪರ್ಕ ಪೂರ್ಣಗೊಂಡಿದ್ದು, ಮೀಟರ್ ಅಳವಡಿಕೆ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ನೀರು ಪೂರೈಕೆ ಆಗಲಿದೆ’ ಎನ್ನುತ್ತಾರೆ 76ನೇ ವಾರ್ಡ್ ಸದಸ್ಯೆ ವಹಿದಾ ಖಾನಂ ಕಿತ್ತೂರ.
‘ಕಲ್ಮೇಶ್ವರ ನಗರದಲ್ಲಿ ₹40 ಲಕ್ಷ ಮೊತ್ತದ ಯುಜಿಡಿ, ₹75 ಲಕ್ಷ ಮೊತ್ತದಲ್ಲಿ ರಸ್ತೆ ಮತ್ತು ಪೇವರ್ಸ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ₹6.80 ಲಕ್ಷದಲ್ಲಿ ಮಹಾಕಾಳಿ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಶಿವಾಜಿ ಪ್ಲಾಟ್‌ನಲ್ಲಿ ₹1.10 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದು, ಟೆಂಡರ್ ಹಂತದಲ್ಲಿದೆ. ಇಲ್ಲಿ ₹5 ಲಕ್ಷದಲ್ಲಿ ಕೊಳವೆಬಾವಿ ಕೊರೆಸಲಾಗಿದ್ದು, ₹15 ಲಕ್ಷದಲ್ಲಿ 11 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ’ ಎಂದರು.
‘ಹಿಂದೂ ರುದ್ರಭೂಮಿಯಲ್ಲಿ 21 ವಿದ್ಯುತ್ ಕಂಬ ಹಾಗೂ ಮೂರು ಮಿನಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಜನ್ನತ್‌ನಗರದ ಖಬರಸ್ಥಾನದಲ್ಲಿ ₹16 ಲಕ್ಷ ವೆಚ್ಚದ ಅಭಿವೃದ್ಧಿ ಕೆಲಸಗಳಾಗಿವೆ. ₹12 ಲಕ್ಷ ವೆಚ್ಚದಲ್ಲಿ ಗಟಾರ ದುರಸ್ತಿಗೆ ಅನುಮೋದನೆ ಸಿಕ್ಕಿದ್ದು, ದುರಸ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಲ್ ಹಯಾತ್ ಉರ್ದು ಶಾಲೆ ಆವರಣದಲ್ಲಿ ಪೇವರ್ಸ್, ಕೊಳವೆಬಾವಿ, ಸ್ಮಾರ್ಟ್ ಬೋರ್ಡ್ ಸೌಲಭ್ಯ ಕಲ್ಪಿಸಲು ₹17 ಲಕ್ಷದ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.
76ನೇ ವಾರ್ಡ್ ಮಾಹಿತಿ
ವ್ಯಾಪ್ತಿ;0.50 ಚದರ ಕಿ.ಮೀ
11,000;ಮತದಾರರು
6,000;ಮನೆಗಳು
11;ಅಂಗನವಾಡಿ ಕೇಂದ್ರಗಳು
1,799;ಆಸ್ತಿಗಳು
257;ವಿದ್ಯುತ್ ಕಂಬಗಳು
286; ಬೀದಿದೀಪಗಳು
ಪಾಲಿಕೆ ಸದಸ್ಯೆ; ವಹೀದಾ ಖಾನಂ ಕಿತ್ತೂರ ಸಂಪರ್ಕ ಸಂಖ್ಯೆ;9060718579
ಪ್ರಮುಖ ಪ್ರದೇಶಗಳು: ಅಲ್ತಾಫ್ ಕಾಲೊನಿ, ಶಿವಾಜಿ ಪ್ಲಾಟ್, ಜವಳಿ ಪ್ಲಾಟ್, ಅಮ್ಮನವರ ಪ್ಲಾಟ್, ನಿಂಬೋಳಿ ಪ್ಲಾಟ್, ಜನ್ನತ್ ನಗರ, ಮಿಲಾದ್ ಕ್ರಾಸ್, ಟಿಪ್ಪು ನಗರ, ಇಸ್ಲಾಂಪುರ
ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಮಾದರಿ ವಾರ್ಡ್ ಆಗಿಸಲು ಶ್ರಮಿಸಲಾಗುತ್ತಿದೆವಹಿದಾ ಖಾನಂ ಕಿತ್ತೂರ ಸದಸ್ಯೆ 76ನೇ ವಾರ್ಡ್
‘ಚಿಕಿತ್ಸೆ ನಾಲಾ ಸ್ವಚ್ಛತೆ ಅವಶ್ಯ’
‘ನಮ್ಮ ವಾರ್ಡ್‌ನಲ್ಲಿ ಸರ್ಕಾರಿ ಶಾಲೆ ಇಲ್ಲ. ಯಾವುದೇ ಆಸ್ಪತ್ರೆ ಇಲ್ಲ. ಚಿಕಿತ್ಸೆಗಾಗಿ ಪಕ್ಕದ ವಾರ್ಡ್‌ನ ಎಸ್.ಎಂ. ಕೃಷ್ಣ ನಗರಕ್ಕೆ ಹೋಗಬೇಕು. ಹಳೇ ಹುಬ್ಬಳ್ಳಿ ಸರ್ಕಲ್‌ನಲ್ಲಿ ಹೊಸ ಆಸ್ಪತ್ರೆ ಇನ್ನೂ ಆರಂಭವಾಗಿಲ್ಲ. ನಾಲಾ ಒತ್ತುವರಿಯಾಗಿದ್ದು ಸ್ವಚ್ಛತೆ ಸವಾಲಾಗಿದೆ. ಮಳೆಗಾಲದಲ್ಲಿ ಮಾತ್ರ ನಾಲಾ ಸ್ವಚ್ಛತೆಗೆ ಕ್ರಮ ವಹಿಸಲಾಗುತ್ತದೆ’ ಎಂದು ಮುಖಂಡ ಅಲ್ಲಾಭಕ್ಷ್ (ಮುನ್ನ ಕಿತ್ತೂರ) ತಿಳಿಸಿದರು. ‘ಟಿಪ್ಪುನಗರ ತಗ್ಗು ಪ್ರದೇಶವಾದ್ದರಿಂದ ಅತಿಯಾಗಿ ಮಳೆ ಬಂದರೆ ಇಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಈ ವರ್ಷ 16 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಅಧಿಕಾರಿಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.