ADVERTISEMENT

ಹುಬ್ಬಳ್ಳಿ | ಆ್ಯ‍ಪ್ ಆಧಾರಿತ ಸೇವೆ: ಕ್ರಮಕ್ಕೆ ಆಗ್ರಹಿಸಿ ಆಟೊ ಚಾಲಕರ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:20 IST
Last Updated 4 ನವೆಂಬರ್ 2025, 5:20 IST
ಹುಬ್ಬಳ್ಳಿಯ ಗಬ್ಬೂರು ಬಳಿಯ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರು ಆಟೊ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಗಬ್ಬೂರು ಬಳಿಯ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರು ಆಟೊ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಕಾರ್ಯಾಚರಣೆ ನಡೆಸುವ ಆ್ಯಪ್ ಆಧಾರಿತ ಆಟೊ, ಟ್ಯಾಕ್ಸಿ, ಬೈಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರೈಲ್ವೆ ನಿಲ್ದಾಣ, ಆನಂದ ನಗರ, ಬಸ್ ನಿಲ್ದಾಣಗಳು ಹೀಗೆ ಅವಳಿ ನಗರದ ವಿವಿಧ ಆಟೊ ನಿಲ್ದಾಣಗಳಿಂದ ಬಂದು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಸಂಘದ ಪದಾಧಿಕಾರಿಗಳು, ಪ್ರಮುಖರು, ಚಾಲಕರು, ಮಾಲೀಕರು, ಅಲ್ಲಿಂದ ರ್‍ಯಾಲಿ ಆರಂಭಿಸಿದರು.

ನೂರಾರು ಜನರು ಬ್ಯಾನರ್ ಹಿಡಿದು, ಘೋಷಣೆ ಹಾಕುತ್ತ ಆಟೊ ಮತ್ತು ನಡಿಗೆ ಮೂಲಕ ನಗರದ ಹೊರವಲಯದ ಗಬ್ಬೂರು ಬಳಿಯ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ, ಬಳಿಕ ಆರ್‌ಟಿಒಗೆ ಮನವಿ ಸಲ್ಲಿಸಿದರು.

ADVERTISEMENT

ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ‘ಅವಳಿ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಆಟೊಗಳು ಕಾರ್ಯಾಚರಣೆ ನಡೆಸುತ್ತಿವೆ. ಶಕ್ತಿ ಯೋಜನೆ, ಇಂಧನ ಬೆಲೆ ಏರಿಕೆ ಮತ್ತಿತರ ಕಾರಣಗಳಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಶಾಲೆ ಶುಲ್ಕ ಭರಿಸಲಾಗುತ್ತಿಲ್ಲ, ಸಾಲದ ಕಂತು ತುಂಬಲಾಗುತ್ತಿಲ್ಲ. ಇಂಥ ಸಂದರ್ಭಗಳಲ್ಲಿ ಓಲಾ, ಉಬರ್, ರ‍್ಯಾಪಿಡೊ, ನಮ್ಮ ಯಾತ್ರಿ ಮುಂತಾದ ಆ್ಯಪ್‌ಗಳ ಮೂಲಕ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುವವರು ನಮಗೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ನಗರದಲ್ಲಿ ಇಂಥ ಆ್ಯಪ್‌ಗಳಿಗೆ ಅನುಮತಿ ನೀಡಬಾರದು. ನೀಡಿದ್ದೇ ಆದಲ್ಲಿ ಅವು ಸಾರಿಗೆ ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ, ಆಟೊ ಚಾಲಕರ ಬದುಕನ್ನು ದುಸ್ತರಗೊಳಿಸುತ್ತವೆ. ಅಧಿಕಾರಿಗಳು ನಮ್ಮ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಆರ್‌ಟಿಒ ಶ್ರೀಕಾಂತ ಬಡಿಗೇರ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜೀವನ್ ಹುತ್ಕರಿ, ಕೆ.ಎಂ. ಸಂತೋಷಕುಮಾರ್ ಪಾಲ್ಗೊಂಡಿದ್ದರು.

ಕಾನೂನು ಪ್ರಕಾರ ಅವಕಾಶ ಇದ್ದರೆ ಆ್ಯಪ್ ಆಧಾರಿತ ಸೇವೆಗಳಿಗೆ ಅಧಿಕಾರಿಗಳು ಅನುಮತಿ ನೀಡಲಿ. ನಾವು ನಿತ್ಯ ಅವರೊಂದಿಗೆ ಜಗಳ ಮಾಡುವುದಾದರೂ ತಪ್ಪುತ್ತದೆ.
–ಶೇಖರಯ್ಯ ಮಠಪತಿ ಅಧ್ಯಕ್ಷ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.