ADVERTISEMENT

ಹುಬ್ಬಳ್ಳಿ |ಬಸ್‌ ಡಿಕ್ಕಿ; ತಂದೆ, ಮಗ ಸಾವು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:40 IST
Last Updated 31 ಡಿಸೆಂಬರ್ 2025, 4:40 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಹುಬ್ಬಳ್ಳಿ: ನಗರದ ಹೊರವಲಯದ ಅಂಚಟಗೇರಿ ಬಳಿ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ಮತ್ತು ಬೈಕ್‌ ನಡುವೆ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳಿಗೆ ಗಂಭೀರ ಸ್ವರೂಪದ ಗಾಯಗಳು ಆಗಿದ್ದು, ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತಡಸ ಗ್ರಾಮದ ಮೆಹಬೂಬ್ ಖಾನ್ ಉಸ್ತಾದಿ (36) ಮತ್ತು ಪುತ್ರ ಅಸ್ನೇನ್‌ ಉಸ್ತಾದಿ(4) ಮೃತರು. ಪುತ್ರಿ ಅಜೀಜಾ ಉಸ್ತಾದಿ(7) ಗಾಯಗೊಂಡಿದ್ದಾಳೆ. ಹುಬ್ಬಳ್ಳಿಯಿಂದ ತಡಸಕ್ಕೆ ಬೈಕ್‌ನಲ್ಲಿ ಮಕ್ಕಳೊಂದಿಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಸ್‌ ಡಿಕ್ಕಿ ಹೊಡೆದಿದೆ’ ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ. 

ADVERTISEMENT

‘ಅಳಿಯ ಮೆಹಬೂಬ್ ಖಾನ್ ಅವರು ಮಿಶ್ರಿಕೋಟಿಯಲ್ಲಿ ಕುರಿ ದಡ್ಡಿ ಮಾಡಿಕೊಂಡಿದ್ದು, ಕುರಿ ಸಾಕಾಣಿಕೆ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡು ಕುಟುಂಬ ಅನಾಥವಾಗಿದೆ’ ಎಂದು ಅತ್ತೆ ಜನ್ನತ್ತಿ ಕಣ್ಣೀರಾದರು.

ನಗರದ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸೋಮವಾರ ರಾತ್ರಿ ಮಂಟೂರು ರಸ್ತೆಯ ಮೌಲಾಲಿ ಪ್ಲಾಟ್‌ನಲ್ಲಿರುವ ನಮ್ಮ ಮನೆಗೆ, ಮಗಳು ಮತ್ತು ಮೊಮ್ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಮಂಗಳವಾರ ಬೆಳಿಗ್ಗೆ ಮಗ ಅಸ್ನೇನ್‌ ಮತ್ತು ಮಗಳು ಅಜೀಜಾಳನ್ನು ಬೈಕ್‌ನಲ್ಲಿ ಕರೆದುಕೊಂಡು ತಡಸಗೆ ತೆರಳಿದ್ದರು. ಪತ್ನಿ ಮತ್ತು ಇನ್ನೊಬ್ಬ ಪುತ್ರನ್ನು ಬಸ್‌ಗೆ ಕರೆದುಕೊಂಡು ಬರುವಂತೆ ಹೇಳಿದ್ದರು. ಸಾಲ ಮಾಡಿ ಕುರಿಗಳನ್ನು ತಂದಿದ್ದರು’ ಎಂದರು.

ಪಾದಚಾರಿ ಸಾವು: ನಗರದ ಕ್ಲಬ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಜಾದ್‌ ಕಾಲೊನಿ ನಿವಾಸಿ ಶಿವಾಜಿ ಸಾದರ(63) ಅವರಿಗೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.