ADVERTISEMENT

ವಿವಸ್ತ್ರ ಪ್ರಕರಣ | ಸುಜಾತಾ ಕುಟುಂಬಕ್ಕೆ ಭದ್ರತೆ ಒದಗಿಸಿ: ಸಿ.ಮಂಜುಳಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:40 IST
Last Updated 9 ಜನವರಿ 2026, 7:40 IST
ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿರುವ ಸುಜಾತಾ ಹಂಡಿ ಅವರ ಮನೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಅವರು ಗುರುವಾರ ಭೇಟಿ ನೀಡಿ, ಘಟನೆ ಕುರಿತು ಕುಟುಂಬದವರಿಂದ ಮಾಹಿತಿ ಪಡೆದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿರುವ ಸುಜಾತಾ ಹಂಡಿ ಅವರ ಮನೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಅವರು ಗುರುವಾರ ಭೇಟಿ ನೀಡಿ, ಘಟನೆ ಕುರಿತು ಕುಟುಂಬದವರಿಂದ ಮಾಹಿತಿ ಪಡೆದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ರಾಜ್ಯ ಮಹಿಳಾ ಆಯೋಗವು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಮಹಿಳೆ ವಿವಸ್ತ್ರ ಪ್ರಕರಣ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ಇಲ್ಲಿಗೆ ಭೇಟಿ ನೀಡಿ ತನಿಖೆ ನಡೆಸಬೇಕು. ಘಟನೆ ಕುರಿತು ಅವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ’ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಹೇಳಿದರು.

ಇಲ್ಲಿನ ಚಾಲುಕ್ಯ ನಗರದಲ್ಲಿರುವ ಸುಜಾತಾ ಹಂಡಿ ಅವರ ಮನೆಗೆ ಗುರುವಾರ ಭೇಟಿ ನೀಡಿ, ಅವರ ತಾಯಿ ಕಮಲಮ್ಮ, ಸಹೋದರ ಮರಿಯದಾಸ್‌ ಅವರಿಂದ ಘಟನೆ ಕುರಿತು ಮಾಹಿತಿ ಪಡೆದು ನಂತರ ಅವರು ಮಾತನಾಡಿದರು. 

‘40 ಪೊಲೀಸರು ಒಬ್ಬ ಮಹಿಳೆ ವಿವಸ್ತ್ರವಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದು ಲಜ್ಜೆಗೆಟ್ಟ, ಮಾನಗೇಡಿ ಸರ್ಕಾರ. ಪುಂಡ ಪೋಕರಿಗಳ ಕೈಯಲ್ಲಿ ಕಾನೂನು ಸುವ್ಯವಸ್ಥೆ ಕೊಟ್ಟು ಅವರ ಮುಂದೆ ನಡುಬಗ್ಗಿಸಿದೆ’ ಎಂದರು.

ADVERTISEMENT

‘ಈ ಕೃತ್ಯದಲ್ಲಿ ಭಾಗಿಯಾದ ಎಲ್ಲ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಜಾತಾ ಅವರ ಕುಟುಂಬದವರಿಗೆ ಭದ್ರತೆ ಒದಗಿಸಬೇಕು’ ಎಂದು ಹೇಳಿದರು. 

‘ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಪ್ರಧಾನಿ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಜಿಲ್ಲೆಯಲ್ಲಿ ನೇಹಾ, ಅಂಜಲಿ ಅವರ ಕೊಲೆಗಳಾಗಿವೆ. ಈಗ ಮಹಿಳೆಯನ್ನು ವಿವಸ್ತ್ರಗೊಳಿಸಿ, ದೌರ್ಜನ್ಯ ಎಸಗಲಾಗಿದೆ. ಕಾಂಗ್ರೆಸ್‌ನವರು ದುರ್ಯೋಧನ, ದುಶ್ಯಾನರಂತೆ ಆಗಿದ್ದಾರೆ’ ಎಂದು ಹೇಳಿದರು.

‘ಸುಜಾತಾ ಹಂಡಿ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರೆ ಈ ಬಗ್ಗೆಯೂ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸುವಾಗ ಪೊಲೀಸರು ಐದು ವಿಡಿಯೊಗಳನ್ನು ಮಾಡಿದ್ದಾರೆ. ಅದರಲ್ಲಿ ಆಕೆ ಪೊಲೀಸರಿಗೆ ಕಚ್ಚಿದ ದೃಶ್ಯಗಳಿಲ್ಲ’ ಎಂದರು.

ಮೇಯರ್ ಜ್ಯೋತಿ ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡರ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ, ಅಕ್ಕಮ್ಮ ಹೆಗಡೆ ಇದ್ದರು.

ಪೊಲೀಸರ ನಡೆ ಅನುಮಾನಾಸ್ಪದ:  ಪಾಲಿಕೆಯ ಕಾಂಗ್ರೆಸ್‌ ಸದಸ್ಯೆ ಸುವರ್ಣಾ ಕಲಕುಂಟ್ಲ ಅವರನ್ನು ರಾಜಮರ್ಯಾದೆಯಿಂದ ಅವರ ವಾಹನದಲ್ಲೇ ಕರೆದೊಯ್ದು ಪೊಲೀಸರು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಜತೆ ಪೊಲೀಸರು ಮೃಗಗಳಂತೆ ವರ್ತಿಸಿ, ಅವರನ್ನು ವಿವಸ್ತ್ರಗೊಳಿಸಿ ಥಳಿಸಿ ಪೊಲೀಸ್ ವಾಹನದಲ್ಲೇ ಕರೆದುದೊಯ್ದಿದ್ದರು. ಪೊಲೀಸರ ಈ ನಡೆ ಅನುಮಾನಾಸ್ಪದವಾಗಿದೆ ಎಂದು ಹು–ಧಾ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹೇಳಿದ್ದಾರೆ.

ಸುಜಾತಾ ಅವರೇ ವಿವಸ್ತ್ರವಾಗಿದ್ದಾರೆ ಎಂಬಂತೆ ಪೊಲೀಸರು ಬಿಂಬಿಸುತ್ತಿದ್ದಾರೆ. 10-12 ಜನ ಪೊಲೀಸರು ಅವರ ಕೈ-ಕಾಲು ಹಿಡಿದು ಬಂಧಿಸಿದಾಗ ಬಟ್ಟೆ ಬಿಚ್ಚಲು ಹೇಗಾಗುತ್ತದೆ?  ಪೊಲೀಸರು ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಕಾಂಗ್ರೆಸ್‌ನಿಂದ ಡಿಸಿಪಿಗೆ ಮನವಿ ಹುಬ್ಬಳ್ಳಿ:

ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಸೇರಿ ಇನ್ನೂ ಇಬ್ಬರ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಶ್ವಾಪುರ ಠಾಣೆ ಪೊಲೀಸರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಡಿಸಿಪಿ ರವೀಶ್ ಸಿ.ಆರ್‌ ಅವರಿಗೆ ಮನವಿ ಸಲ್ಲಿಸಿದರು. ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಸಾರ್ವಜನಿಕ ಪ್ರಶಾಂತ ಬೋಮಜ್ಜಿ ಸುಮೀತ್ ಗಾಯಕವಾಡ ಅವರ ಮೇಲೆ ಆರು ಜನರು ಹಲ್ಲೆ ನಡೆಸಿದ್ದರು. ಸದ್ಯ ಒಬ್ಬರನ್ನು ಮಾತ್ರ ಬಂಧಿಸಿದ್ದು ಉಳಿದ ಐವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಹು-ಧಾ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಹು–ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಪ್ ಹಳ್ಳೂರ ಹುಡಾ ಅಧ್ಯಕ್ಷ ಶಾಕೀರ ಸನದಿ ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಪ್ರೇಮನಾಥ ಚಿಕ್ಕತುಂಬಳ ರಜತ್ ಉಳ್ಳಾಗಡ್ಡಿಮಠ ಸಂದಿಲ್ ಕುಮಾರ ಮೋಹನ ಹಿರೇಮನಿ ಅರ್ಜುನ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.