ಹುಬ್ಬಳ್ಳಿ: ಮನೋವಿಕಲ ಬಾಲಕಿ ಹಾಗೂ ಮಂದಮತಿ ಮಹಿಳೆಯರನ್ನು ಸಂರಕ್ಷಿಸಿ, ಪೋಷಿಸುತ್ತಿರುವ ನಗರದ ಉಣಕಲ್ ಬಳಿಯ ಮಂದಮತಿ ಮಹಿಳೆಯರ ಅನುಪಾಲನಾ ಗೃಹ ಕಟ್ಟಡವು ಸಂಪೂರ್ಣವಾಗಿ ಶಿಥಿಲವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸೇರಿದ ಈ ಕಟ್ಟಡಕ್ಕೆ ಎರಡು ಅಂತಸ್ತುಗಳಿವೆ. ನೆಲಮಹಡಿಯಲ್ಲಿ ಮಂದಮತಿ ಮಹಿಳೆಯರ ಅನುಪಾಲನಾ ಗೃಹ ನಿಲಯವಿದೆ. ಮೊದಲ ಮಹಡಿಯಲ್ಲಿ ಮನೋವಿಕಲ ಬಾಲಕಿಯರ ಬಾಲ ಮಂದಿರವಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಮಂದಮತಿ ಮಹಿಳೆಯರ ಅನುಪಾಲನಾ ಗೃಹದಲ್ಲಿ 18 ವರ್ಷ ಮೇಲ್ಪಟ್ಟ 71 ಜನ ತೀವ್ರತರ ಸಮಸ್ಯೆ ಅನುಭವಿಸುತ್ತಿರುವ ಮಂದಮತಿ ಮಹಿಳೆಯರಿದ್ದರೆ, ಮನೋವಿಕಲ ಬಾಲಕಿಯರ ಬಾಲ ಮಂದಿರದಲ್ಲಿ 18 ವರ್ಷದೊಳಗಿನ 44 ಜನ ಮನೋವಿಕಲ ಬಾಲಕಿಯರಿದ್ದಾರೆ.
1950ರಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ನಿರಂತರ ಮಳೆ ಹಾಗೂ ನೀರು ಸೋರಿಕೆಯಿಂದ ಬಹುತೇಕ ಗೋಡೆ, ಕೊಠಡಿಗಳು, ಕಿಟಕಿಗಳು ಹಾಳಾಗಿವೆ. ಕಟ್ಟಡದ ಪಿಲ್ಲರ್‌ಗಳ ಕಬ್ಬಿಣ ಅಲ್ಲಲ್ಲಿ ಕಾಣುತ್ತಿವೆ. ಕಟ್ಟಡದ ಕಾಂಪೌಂಡ್ ಕುಸಿದಿದೆ.
ಇಲ್ಲಿನ ಬಾಲಕಿಯರು, ಮಂದಮತಿ ಮಹಿಳೆಯರು ಹೊರಗೆ ಹೋಗುವ ಹಾಗೂ ಹೊರಗಿನವರು ಕಟ್ಟಡದೊಳಗೆ ಬರುವ ಸಾಧ್ಯತೆಯೂ ಇದೆ. ಹಿರಿಯ ಸಿವಿಲ್ ನ್ಯಾಯಾಧೀಶರೊಬ್ಬರು ಈಚೆಗೆ ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿ, ಕಾಂಪೌಂಡ್ ಗೋಡೆ ದುರಸ್ತಿಗೆ ಸೂಚಿಸಿದ್ದರು.
ತುಂಬಾ ಹಳೆಯದಾಗಿರುವ ಕಟ್ಟಡದ ಕೆಲವು ಅತಿ ಅವಶ್ಯ ಭಾಗಗಳ ದುರಸ್ತಿಗಾಗಿ ಲೋಕಪಯೋಗಿ ಇಲಾಖೆಯ ಉಪ ವಿಭಾಗದ ಅಧಿಕಾರಿಗಳು ಅಂದಾಜು ₹77.06 ಲಕ್ಷ ಮೊತ್ತದ ಕ್ರಿಯಾಯೋಜನಾ ವರದಿ ಸಿದ್ಧಪಡಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ. ಇಲಾಖೆಯು ಸಹ ಆಡಳಿತಾತ್ಮಕ ಅನುದಾನ ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ವರದಿಯನ್ನೂ ಸಲ್ಲಿಸಿದೆ. ಆದರೂ ಪ್ರಯೋಜನವಾಗಿಲ್ಲ.
‘ಕಟ್ಟಡವು ತುಂಬಾ ಹಳೆಯದಾಗಿದ್ದು, ಶಿಥಿಲವಾಗಿದೆ. ಕಟ್ಟಡದಲ್ಲಿ ಎರಡು ವಸತಿ ನಿಲಯಗಳಿವೆ. ಬಾಲಕಿಯರು, ಮಹಿಳೆಯರು ಸೇರಿದಂತೆ ಒಟ್ಟು 115 ಮಂದಿ ಇಲ್ಲಿದ್ದಾರೆ. ಇವರೆಲ್ಲರ ಹಿತಾದೃಷ್ಟಿಯಿಂದ ತುರ್ತಾಗಿ ಕಟ್ಟಡದ ದುರಸ್ತಿ ಆಗಬೇಕಿದೆ’ ಎನ್ನುತ್ತಾರೆ ಮಂದಮತಿ ಮಹಿಳೆಯರ ಅನುಪಾಲನಾ ಗೃಹದ ಅಧೀಕ್ಷಕಿ ಚೆನ್ನಮ್ಮ.
’ಮಂದಮತಿ ಮಹಿಳೆಯರ ಅನುಪಾಲನಾ ಗೃಹದ ದುರಸ್ತಿ ಕಾಮಗಾರಿ ಕೈಗೊಳ್ಳಲು ಕೆಆರ್‌ಐಡಿಎಲ್ ಅಧಿಕಾರಿಗಳು ₹41 ಲಕ್ಷದ ಕ್ರಿಯಾಯೋಜನಾ ವರದಿ ತಯಾರಿಸಿ, ಅನುದಾನಕ್ಕಾಗಿ ಮನವಿ ಮಾಡಲಾಗಿದೆ‘ ಎಂದರು.
‘ಕಟ್ಟಡದಲ್ಲಿನ ಎರಡೂ ನಿಲಯಗಳಲ್ಲಿನ ನಿವಾಸಿಗಳು ಹಾಗೂ ಅಧಿಕಾರಿ, ಸಿಬ್ಬಂದಿ ಸೇರಿ 130ಕ್ಕೂ ಹೆಚ್ಚು ಜನರಿದ್ದಾರೆ. ಅಪಾಯ ಸಂಭವಿಸುವ ಮುನ್ನವೇ ಅದರ ದುರಸ್ತಿಗೆ ಕ್ರಮವಹಿಸಬೇಕು’ ಎನ್ನುತ್ತಾರೆ ನಿಲಯದ ಅಧಿಕಾರಿಯೊಬ್ಬರು.
‘ಮಹಾನಗರ ಪಾಲಿಕೆಯ ಅಧಿಕಾರಿಗಳು ಈಚೆಗೆ ಪಾಲಿಕೆಯಲ್ಲಿ ವಿಕಲಚೇತನರಿಗಾಗಿಯೇ ಮೀಸಲಿರುವ ಶೇ 5 ಅನುದಾನದಲ್ಲಿ ₹6 ಲಕ್ಷ ವೆಚ್ಚದಲ್ಲಿ ಕಟ್ಟಡದಲ್ಲಿನ ಶೌಚಾಲಯ, ಕಾಂಪೌಂಡ್ ದುರಸ್ತಿ ಕಾಮಗಾರಿ ಮಾಡಿಸಿದ್ದಾರೆ. ಜಿಲ್ಲಾ ಪಂಚಾಯಿತಿಯಿಂದ ₹41 ಲಕ್ಷ ಅನುದಾನ ನಿಗದಿಯಾಗಿದೆ. ಶೀಘದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ತಿಳಿಸಿದರು.
ಸುಮಾರು 60 ವರ್ಷಗಳ ಹಳೆಯ ಕಟ್ಟಡವಾಗಿದ್ದು ಶಿಥಿಲವಾಗಿದೆ. ಕಟ್ಟಡದ ದುರಸ್ತಿಯ ಯೋಜನಾ ಅನುದಾನ ನಿಗದಿಯಾಗಿದೆ. ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ದುರಸ್ತಿ ಮಾಡಿಸಲಾಗುವುದುಸವಿತಾ ಕಾಳೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ
ಮನೋವಿಕಲ ಬಾಲಕಿಯರ ಬಾಲ ಮಂದಿರದ ಅಡುಗೆ ಮನೆ ಊಟದ ಹಾಲ್ ದುರಸ್ತಿ ಹೊಸದಾಗಿ ವಿದ್ಯುತ್ ಸಂಪರ್ಕ ನೀರಿನ ಟ್ಯಾಂಕ್ ಅಳವಡಿಕೆ ಸೇರಿ ಕೆಲ ಕಾಮಗಾರಿಗಳನ್ನು ₹10 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ. ಇನ್ನೂ ದುರಸ್ತಿ ಆಗಬೇಕಿದೆ.ರೇಣುಕಾ ಅಧೀಕ್ಷಕಿ ಮನೋವಿಕಲ ಬಾಲಕಿಯರ ಬಾಲ ಮಂದಿರ
ಕಟ್ಟಡವು ತುಂಬಾ ಹಳೆಯದಾಗಿದ್ದು ಶಿಥಿಲವಾಗಿರುವ ಭಾಗದ ದುರಸ್ತಿ ಕಾರ್ಯವನ್ನು ಶೀಘ್ರದಲ್ಲಿಯೇ ಮಾಡಿಸಲಾಗುವುದುಚೆನ್ನಮ್ಮ ಅಧೀಕ್ಷಕಿ ಮಂದಮತಿ ಮಹಿಳೆಯರ ಅನುಪಾಲನಾ ಗೃಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.