ADVERTISEMENT

ಹುಬ್ಬಳ್ಳಿ | ಸಿಸೇರಿಯನ್‌ ಪ್ರಮಾಣ ಹೆಚ್ಚಳ

ಹೆರಿಗೆ ವೇಳೆ ತೊಂದರೆ, ಗರ್ಭಿಣಿಯರ ಆಯ್ಕೆಯೂ ಕಾರಣ

ಗೋವರ್ಧನ ಎಸ್‌.ಎನ್‌.
Published 4 ಸೆಪ್ಟೆಂಬರ್ 2025, 5:05 IST
Last Updated 4 ಸೆಪ್ಟೆಂಬರ್ 2025, 5:05 IST
...
...   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಸಿಸೇರಿಯನ್‌ (ಶಸ್ತ್ರಚಿಕಿತ್ಸೆ) ಮೂಲಕ ಹೆರಿಗೆ ಪ್ರಮಾಣ ಗಣನೀಯವಾಗಿ ಹೆಚ್ಚಿದೆ.  

2020–21ರಿಂದ 2024–25ನೇ ಸಾಲಿನವರೆಗೆ ಒಟ್ಟು 1,61,340 ಹೆರಿಗೆ ಆಗಿದೆ. ಈ ಪೈಕಿ 96,959 ಸಹಜವಾಗಿದ್ದರೆ, 64,381 ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಪ್ರಸಕ್ತ ಸಾಲಿನ ಜೂನ್‌ವರೆಗೆ 7,420 ಹೆರಿಗೆಗಳ ಪೈಕಿ 3,896 ಸಹಜ ಮತ್ತು 3,524 ಹೆರಿಗೆಗಳು ಶಸ್ತ್ರಚಿಕಿತ್ಸೆ ಮೂಲಕ ನಡೆದಿವೆ.

‘ಸೂಕ್ತ ಸಮಯದಲ್ಲಿ ಗರ್ಭ ಧರಿಸದ ಕಾರಣ ಸಹಜ ಹೆರಿಗೆ ಆಗುತ್ತಿಲ್ಲ. ವಯೋಮಿತಿ 30 ದಾಟಿದ ಬಳಿಕ ಗರ್ಭಧಾರಣೆ ಪ್ರಮಾಣ ಹೆಚ್ಚುತ್ತಿದೆ. ಸಹಜ ಹೆರಿಗೆ ಸಂದರ್ಭದಲ್ಲಾಗುವ ಅತೀವ ನೋವು ಸಹಿಸಲಾಗದೆಂದು ಬಹುತೇಕರು ಶಸ್ತ್ರಚಿಕಿತ್ಸೆ ಮೊರೆ ಹೋಗುತ್ತಾರೆ. ಹೆರಿಗೆ ವೇಳೆ ಮಧುಮೇಹ, ವಿಪರೀತ ಆತಂಕ, ಶಿಶುವಿಗೆ ಸಮಸ್ಯೆ ಆಗಿದ್ದಲ್ಲಿ ವೈದ್ಯರೇ ಶಸ್ತ್ರಚಿಕಿತ್ಸೆಗೆ ಸಲಹೆ ನೀಡುತ್ತಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಸ್‌.ಎಂ.ಹೊನಕೇರಿ ತಿಳಿಸಿದರು.

ADVERTISEMENT

‘ಕ್ಲಿಷ್ಟಕರ ಸಂದರ್ಭದಲ್ಲಷ್ಟೇ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಆರೋಗ್ಯ ಇಲಾಖೆಯಿಂದ ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಗರ್ಭಿಣಿಯ ವಯೋಮಿತಿ ಹೆಚ್ಚಳ, ಎತ್ತರ ಕಡಿಮೆ ಇರುವುದು, ತೊಂದರೆಗೀಡಾಗುವ ಸಂಭವವಿದ್ದರಷ್ಟೇ ತಾಯಿ–ಮಗುವಿನ ಹಿತದೃಷ್ಟಿಯಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದು ಅನಿವಾರ್ಯವಾಗುತ್ತದೆ’ ಎಂದು ವಿವರಿಸಿದರು. 

‘ವಿವಿಧ ಆಸ್ಪತ್ರೆಗಳಿಗೆ ನಿರಂತರವಾಗಿ ಭೇಟಿ ನೀಡಿ, ಅಲ್ಲಿನ ಕಾರ್ಯ ವಿಧಾನಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಉದ್ದೇಶಪೂರ್ವಕವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದರ ಕುರಿತು ಈವರೆಗೆ ದೂರು ಬಂದಿಲ್ಲ. ಈ ಬಗ್ಗೆ ದೂರುಗಳಿದ್ದರೆ ಜನರು ಇಲಾಖೆಯ ಗಮನಕ್ಕೆ ತರಬಹುದು’ ಎಂದರು. 

ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆಗೆ ಸೂಚನೆ ಉದ್ದೇಶಪೂರ್ವಕ ಸಿಸೇರಿಯನ್‌; ದೂರು ನೀಡಲು ಅವಕಾಶ

ವೈವಾಹಿಕ ಆರೋಗ್ಯ ಸಮಸ್ಯೆ ಇದ್ದರೂ ಸಿಸೇರಿಯನ್‌ ಮಾಡಲಾಗುತ್ತದೆ. ಗರ್ಭಿಣಿಯರು ಎಚ್ಚರ ವಹಿಸುವುದು ಅವಶ್ಯ
ಎಸ್‌.ಎಂ. ಹೊನಕೇರಿ ಜಿಲ್ಲಾ ಆರೋಗ್ಯಾಧಿಕಾರಿ 
ಅಧಿಕ ಸಿಸೇರಿಯನ್‌ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿ ಇರುವುದನ್ನೂ ಅಲ್ಲಗಳೆಯುವಂತಿಲ್ಲ. ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಬೇಕು
ಮಹೇಶ ಪತ್ತಾರ ಕಾರ್ಮಿಕ ಮುಖಂಡ
‘ವಿವಿಧ ಸಮಸ್ಯೆಗೆ ಕಾರಣ’
‘ಸಿಸೇರಿಯನ್‌ ಮೂಲಕ ಮೊದಲ ಮಗು ಜನಿಸಿದ್ದರೆ ಆನಂತರವೂ ಸಿಸೇರಿಯನ್‌ ಮಾಡಬೇಕಾದ ಸಾಧ್ಯತೆ ಇರುತ್ತದೆ. ಬಹುತೇಕರು ತೊಂದರೆ ಬೇಡವೆಂದು ಸಿಸೇರಿಯನ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ಬದಲಾದ ಜೀವನಶೈಲಿ ರೋಗನಿರೋಧಕ ಶಕ್ತಿ ಕೊರತೆ ಅಪೌಷ್ಟಿಕತೆಯೂ ಇದಕ್ಕೆ ಕಾರಣವಾಗಿದೆ’ ಎಂದು ಕೆಎಂಸಿ–ಆರ್‌ಐನ ಸ್ತ್ರೀರೋಗ ತಜ್ಞ ರಾಮಲಿಂಗಪ್ಪ ಅಂಟರಥಾನಿ ತಿಳಿಸಿದರು. ‘ಕೆಎಂಸಿ–ಆರ್‌ಐ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಸೇರಿಯನ್‌ ಪ್ರಮಾಣ ಹೆಚ್ಚಳವಾಗಿದೆ. ಇದರಿಂದಾಗಿ ಹೆಚ್ಚು ರಕ್ತಸ್ರಾವ ಗರ್ಭಾಶಯ ಒಡೆಯುವುದು ಯುಟರಸ್‌ ಬಾಯಿ ಬಿಡುವುದು ನಂಜು ಮುಟ್ಟಿನ ಸಮಸ್ಯೆ ಉಂಟಾಗಬಹುದು. ಸಹಜ ಹೆರಿಗೆಯಲ್ಲಿ ಇಂತಹ ಸಮಸ್ಯೆ ಅಷ್ಟಾಗಿ ಕಂಡುಬರುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.