ಹುಬ್ಬಳ್ಳಿ: ನಗರದ ದಂಪತಿಗೆ ಮುಂಬೈ ಪೊಲೀಸ್ ಹೆಸರಲ್ಲಿ ವಾಟ್ಸ್‌ಆ್ಯಪ್ ಕರೆ ಮಾಡಿದ ವ್ಯಕ್ತಿಗಳು, ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿ, ₹5 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹಳೇಹುಬ್ಬಳ್ಳಿಯ ವಿವೇಕಾನಂದ ಮತ್ತು ಶಿಕ್ಷಕಿ ಕವಿತಾ ವಂಚನೆಗೊಳಗಾದವರು. ವಿವೇಕಾನಂದ ಅವರಿಗೆ ಕರೆ ಮಾಡಿದ ವ್ಯಕ್ತಿ, ತಾನು ಮುಂಬೈನ ಕೋಲೋಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಕ್ರಮ ಹಣ ವರ್ಗಾವಣೆಯಲ್ಲಿ ನಿಮ್ಮ ಹೆಸರು ಕೇಳಿ ಬಂದಿದ್ದು, ಖಾತೆಯಿಂದ ಹಣ ಸಹ ವಹಿವಾಟು ಆಗಿದೆ ಎಂದು ನಕಲಿ ದಾಖಲೆಗಳನ್ನು ತೋರಿಸಿ ಬೆದರಿಸಿದ್ದಾನೆ. ಕೇಳಿದಷ್ಟು ಹಣ ವರ್ಗಾಯಿಸದಿದ್ದರೆ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹25 ಲಕ್ಷ ವಂಚನೆ: ಕೆಕೆಆರ್ ಜಾಹೀರಾತು ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ಧಾರವಾಡದ ಪ್ರಶಾಂತ ಅವರಿಗೆ ನಂಬಿಸಿದ ವ್ಯಕ್ತಿ, ಅವರಿಂದ ₹25 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಪ್ರಶಾಂತ ಅವರು ಫೇಸ್‌ಬುಕ್‌ನಲ್ಲಿನ ಜಾಹೀರಾತು ನೋಡಿ, ಅದರಲ್ಲಿರುವ ವಾಟ್ಸ್‌ಆ್ಯಪ್ ನಂಬರ್‌ಗೆ ಮೆಸೆಜ್ ಮಾಡಿದ್ದಾನೆ. ಅವರ ನಂಬರ್ ಅನ್ನು ಕೆಕೆಆರ್ ಗ್ರುಪ್‌ಗೆ ಸೇರಿಸಿ ಹಣ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರ ಅವರಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.