ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಅವರ ಕಚೇರಿಗೆ ಭೇಟಿ ನೀಡಿ, ಶುಭ ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಮ್ರಾನ್ ಯಲಿಗಾರ, ‘ಕಳೆದ 25 ವರ್ಷಗಳಿಂದ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ’ ಎಂದು ದೂರಿದರು.
‘ಮೇಯರ್, ಉಪಮೇಯರ್ ಆದವರು ತಮ್ಮ ವಾರ್ಡ್‌ಗಳ ಅಭಿವೃದ್ದಿಗೆ ಮಾತ್ರ ಒತ್ತು ನೀಡಿದ್ದಾರೆ. ಅವಳಿ ನಗರದ ಸೌಂದರ್ಯೀಕರಣ, ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ದೂಳು ಮುಕ್ತ ನಗರ ಸಾಕಾರವಾಗಿಲ್ಲ. ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ’ ಎಂದರು.
‘15ನೇ ಹಣಕಾಸು, ಎಸ್‌ಎಫ್‌ಸಿ ಯೋಜನೆ ಅನುದಾನವನ್ನು ಮೇಯರ್, ಉಪಮೇಯರ್ ತಮ್ಮ ವಾರ್ಡ್‌ಗಳಿಗೆ ಮಾತ್ರ ಆದ್ಯತೆ ಕೊಟ್ಟು ಬಳಸುತ್ತಾರೆ. ಉಳಿದ ವಾರ್ಡ್‌ಗಳ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ’ ಎಂದು ಆರೋಪಿಸಿದರು.
‘ಇದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿದ್ದು, ಪ್ರತಿ ವರ್ಷ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ಶೌಚಾಲಯ ನಿರ್ಮಿಸಲಾಗದ ಸ್ಥಿತಿ ಇದೆ. ನಗರಕ್ಕೆ ಬೇರೆ, ಜಿಲ್ಲೆ, ತಾಲ್ಲೂಕುಗಳಿಂದ ಜನರು ವಿವಿಧ ಕೆಲಸಗಳಿಗಾಗಿ ಬರುತ್ತಾರೆ. ಸಮರ್ಪಕ ಮೂತ್ರಾಲಯಗಳಿಲ್ಲದೆ ಜನರು ಪರದಾಡುವಂತಾಗಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದರು.
‘ನೂನತ ಮೇಯರ್, ಉಪಮೇಯರ್ ಅವಳಿ ನಗರದ ಅಭಿವೃದ್ಧಿಗೆ ಕೆಲಸ ಮಾಡಿದರೆ ಅವರಿಗೆ ಸಹಕಾರ ನೀಡಲಾಗುವುದು. ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಹೋರಾಟದ ಮೂಲಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಎಚ್ಚರಿಸಿದರು.
‘ಸದ್ಯ ಒಂದು ವಾರ್ಡ್‌ಗೆ ₹1.25 ಕೋಟಿ ಅನುದಾನ ಕೊಡಲಾಗುತ್ತಿದೆ. ಅದು ಯಾವುದಕ್ಕೂ ಸಾಲುತ್ತಿಲ್ಲ. ತಗ್ಗು ಗುಂಡಿ ಮುಚ್ಚಲು ಹಣ ಇಲ್ಲದಂತಾಗಿದೆ’ ಎಂದು ಹೇಳಿದರು.
‘ಪಾಲಿಕೆ ಆಸ್ತಿಗಳ ಜಿಐಎಸ್ ಸರ್ವೆ ಮಾಡಿದರೆ ಮುಂದಿನ ದಿನಗಳಲ್ಲಿ ₹350 ಕೋಟಿ ಆಸ್ತಿ ತೆರಿಗೆ ಬರುವ ನಿರೀಕ್ಷೆ ಇದೆ. ಯಾವ ರೀತಿ ಸಮೀಕ್ಷೆ ನಡೆಯುತ್ತಿದೆ, ಸದ್ಯ ಯಾವ ಹಂತದಲ್ಲಿದೆ ಎಂಬ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಕೊಡಿಸಬೇಕು’ ಎಂದು ಆಗ್ರಹಿಸಿದರು.
‘ಮಂಗಳೂರಿನಲ್ಲಿ ಪಾಲಿಕೆಗೆ ಸುಸಜ್ಜಿತ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು ತಗ್ಗು ತೆಗೆದು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆಯೂ ಧ್ವನಿ ಎತ್ತಲಾಗುವುದು ಎಂದರು.
ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ ಬುರ್ಲಿ ಇದ್ದರು.
ಪೂಜೆ ಸಲ್ಲಿಸಿ ವಿಪಕ್ಷ ನಾಯಕರ ಕಚೇರಿ ಉದ್ಘಾಟನೆ | ಸೌಂದರ್ಯೀಕರಣವಾಗದ ಅವಳಿ ನಗರದ ವೃತ್ತಗಳು | ಮೂತ್ರಾಲಯಗಳಿಲ್ಲದೆ ಸಾರ್ವಜನಿಕರ ಪರದಾಟ
ರಾಜ್ಯ ಸರ್ಕಾರದಿಂದ ಪಾಲಿಕೆಗೆ ಬರಬೇಕಿರುವ ಬಾಕಿ ಅನುದಾನ ತರಲು ಸರ್ವಪಕ್ಷ ನಿಯೋಗ ಹೋದರೆ ಅಗತ್ಯ ಸಹಕಾರ ನೀಡಲಾಗುವುದುಇಮ್ರಾನ್ ಯಲಿಗಾರ ವಿರೋಧ ಪಕ್ಷದ ನಾಯಕ ಹು–ಧಾ ಮಹಾನಗರ ಪಾಲಿಕೆ
‘ಠರಾವು ರದ್ದುಪಡಿಸಲು ಕ್ರಮ’
‘ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿದ ನಂತರ ಅದನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಕಳಿಸಿ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಬೇಕಾಬಿಟ್ಟಿಯಾಗಿ ಠರಾವು ಪಾಸು ಮಾಡಿ ನಂತರ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ವಹಿಸಿದರೆ ಅದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಇಮ್ರಾನ್ ಯಲಿಗಾರ ಹೇಳಿದರು. ‘ಸ್ಮಾರ್ಟ್ ಸಿಟಿ ಯೋಜನೆ ಅಡಿ ನಡೆದಿರುವ ಕಾಮಗಾರಿಗಳನ್ನು ಈವರೆಗೂ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಕೆಲವೆಡೆ ಕಳಪೆ ಕಾಮಗಾರಿ ನಡೆದಿದ್ದರೆ ಇನ್ನೂ ಕೆಲವು ಕಡೆ ಯೋಜನೆ ಪೂರ್ಣಗೊಂಡಿದ್ದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.