ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇಂದ್ರ ಸಚಿವ ಅಮಿತ್ ಶಾ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಹುಬ್ಬಳ್ಳಿ ಧಾರವಾಡ ಬಂದ್ ವೇಳೆ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಜನ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ/ಹೊಸಪೇಟೆ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಬಂದ್‌ಗೆ ಹುಬ್ಬಳ್ಳಿ–ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತ ಸೇರಿ ವಿವಿಧೆಡೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ, ಅಮಿತ್ ಶಾ ಪ್ರತಿಕೃತಿಯ ಅಣಕು ಅಂತ್ಯಕ್ರಿಯೆ ನಡೆಸಿದರು. ಬಿಆರ್‌ಟಿಎಸ್ ಚಿಗರಿ, ನಗರ ಸಾರಿಗೆ ಮತ್ತು ಖಾಸಗಿ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಆಟೋಗಳು ರಸ್ತೆಗೆ ಇಳಿಯಲಿಲ್ಲ. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಸಮತಾ ಸೇನಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಹೊಸಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ‘ನಾವೆಲ್ಲ ಘನತೆಯಿಂದ ಬದುಕಲು ದಾರಿ ತೋರಿಸಿದ ಅಂಬೇಡ್ಕರ್ ಅವರಿಗೆ ಅವಮಾನ ಆದಾಗ ನಾವೆಲ್ಲ ಒಟ್ಟಾಗಬೇಕಿದೆ. ತಳವರ್ಗದಲ್ಲಿ ಮಾತ್ರವಲ್ಲ, ಮೇಲ್ವರ್ಗದಲ್ಲಿ ಸಹ ಅಂಬೇಡ್ಕರ್ ಅಭಿಮಾನಿಗಳಿದ್ದಾರೆ, ಅವರನ್ನು ತಲಪುವ ಕೆಲಸ ಮಾಡಬೇಕಿದೆ. ಸಂವಿಧಾನ ಬದಲಿಸುತ್ತೇವೆ ಎನ್ನುವವರನ್ನೇ ನಾವು ಬದಲಿಸಬೇಕಿದೆ’ ಎಂದರು.
ಹೊಸಪೇಟೆಯಲ್ಲಿ ಸಂಪೂರ್ಣ ಬಂದ್ ಆಗಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್ ಮುಚ್ಚಿದ್ದವು. ಬಸ್, ಆಟೊ, ಟ್ಯಾಕ್ಸಿ ಸಂಚರಿಸಲಿಲ್ಲ. ಮಾರುಕಟ್ಟೆಗಳು, ಪ್ರಮುಖ ಬೀದಿಗಳು ಬಿಕೋ ಎಂದವು. ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಹರಪನಹಳ್ಳಿ, ಹೂವಿನಹಡಗಲಿ ಮತ್ತು ಕೊಟ್ಟೂರು ತಾಲ್ಲೂಕುಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಿಜೆಪಿಯವರಿಗೆ ಮೋದಿ ಮೋದಿ ಎನ್ನುವುದು ಫ್ಯಾಷನ್ ಇರಬಹುದು. ನಮಗೆ ಅಂಬೇಡ್ಕರ್ ಎಂದರೆ ಉಸಿರು ನಾಡಿಮಿಡಿತ. ಅವರ ಬಗ್ಗೆ ಯಾರೂ ನಾಲಿಗೆ ಹರಿಬಿಡಬಾರದು.ಪ್ರಸಾದ ಅಬ್ಬಯ್ಯ ಶಾಸಕ
ಅಂಬೇಡ್ಕರ್ ಸಂವಿಧಾನ ವಿರೋಧಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಬಂದ್ ನಡೆಸಲಾಗಿದೆ. ಸಂಸತ್ ವಿಧಾನಸಭೆ ವ್ಯವಸ್ಥೆಯನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ್ದಾರೆ.ಗುರುನಾಥ ಉಳ್ಳಿಕಾಶಿ ಅಧ್ಯಕ್ಷ ಸಮತಾ ಸೇನೆ ಕರ್ನಾಟಕ ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.