ADVERTISEMENT

ಹುಬ್ಬಳ್ಳಿ–ಧಾರವಾಡ | ಅವಳಿ ನಗರದಲ್ಲಿ ಬೆಳಗಲಿವೆ ಎಲ್‌ಇಡಿ ದೀಪ

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಮುಂದಾದ ಮಹಾನಗರ ಪಾಲಿಕೆ

ನಾಗರಾಜ ಚಿನಗುಂಡಿ
Published 19 ಜುಲೈ 2025, 4:58 IST
Last Updated 19 ಜುಲೈ 2025, 4:58 IST
ಹುಬ್ಬಳ್ಳಿಯ ವಿದ್ಯಾನಗರದ ಪಿ.ಬಿ.ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ವಿದ್ಯಾನಗರದ ಪಿ.ಬಿ.ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳು ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯ ಎಲ್ಲ ಬೀದಿ ವಿದ್ಯುತ್‌ ಕಂಬಗಳಲ್ಲಿ ಶೀಘ್ರ ಎಲ್‌ಇಡಿ (ಲೈಟ್‌ ಎಮಿಟಿಂಗ್‌ ಡಿಯೊಡ್‌) ದೀಪ ಅಳವಡಿಸುವುದಕ್ಕೆ ಮಹಾನಗರ ಪಾಲಿಕೆ ಮುಂದಾಗಿದ್ದು, ಈಗಾಗಲೇ ಟೆಂಡರ್‌ ಆಹ್ವಾನಿಸಿದೆ.

ಸದ್ಯ ಬಹುತೇಕ ಕಡೆ ಎಸ್‌ವಿಎಲ್‌ (ಸೋಡಿಯಂ ವೆಪರ್‌ ಲೈಟ್‌), ಟ್ಯೂಬ್‌ಲೈಟ್‌ ಹಾಗೂ ಕೆಲವು ಕಡೆ ಮಾತ್ರ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಪ್ರಖರ ಬೆಳಕು ಹೊಮ್ಮುತ್ತಿಲ್ಲ. ಬಹಳಷ್ಟು ಬೀದಿಗಳಲ್ಲಿ ಕಂಬಗಳಿದ್ದರೂ ಸಮರ್ಪಕವಾದ ದೀಪ ಅಳವಡಿಸಿಲ್ಲ. ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಪಾಲಿಕೆ ಅಧಿಕಾರಿಗಳಿಗೆ ಸಲ್ಲಿಕೆಯಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ‘ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)’ ಮಾದರಿಯಲ್ಲಿ ಎಲ್‌ಇಡಿ ದೀಪ ಅಳವಡಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಅವಳಿ ನಗರಗಳ ಮುಖ್ಯರಸ್ತೆ, ಬಡಾವಣೆ ಮಾರ್ಗ, ಉದ್ಯಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 64 ಸಾವಿರಕ್ಕಿಂತ ಹೆಚ್ಚು  ದೀಪಗಳು ರಾತ್ರಿ ಹೊತ್ತಿನಲ್ಲಿ ಉರಿಯುತ್ತಿವೆ. ಇದಕ್ಕಾಗಿ ಮಹಾನಗರ ಪಾಲಿಕೆಯು ಪ್ರತಿ ತಿಂಗಳು ₹2 ಕೋಟಿಯಷ್ಟು ವಿದ್ಯುತ್‌ ಬಿಲ್‌ ಭರಿಸುತ್ತಿದೆ. ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ ಹೋಲಿಸಿದರೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ ಬಿಲ್‌ ಭರಿಸುತ್ತಿದೆ. ಈ ಹೊರೆ ತಗ್ಗಿಸುವ ಉದ್ದೇಶದಿಂದ ಸಮಗ್ರವಾಗಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ.

ADVERTISEMENT

ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ಬಹುತೇಕ ಮಹಾನಗರ ಪಾಲಿಕೆಗಳು ಎಲ್‌ಇಡಿ ದೀಪಗಳನ್ನು ಅಳವಡಿಸಲು ಕ್ರಮ ವಹಿಸಿವೆ. ಇದೀಗ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಸುಮಾರು ₹93 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದು, ಟೆಂಡರ್‌ ಆಹ್ವಾನಿಸಿದೆ. ಎರಡು ಖಾಸಗಿ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದು, ಜುಲೈ ಅಂತ್ಯದೊಳಗಾಗಿ ಗುತ್ತಿಗೆ ವಹಿಸುವ ಕಾರ್ಯ ಅಂತಿಮವಾಗಲಿದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಗಳು.

ವಿದ್ಯುತ್‌ ಉಳಿತಾಯ: ‘ಸಾರ್ವಜನಿಕ ವಿದ್ಯುತ್‌ ಕಂಬಗಳಿಗೆ ಈಗ ಅಳವಡಿಸಿದ ವಿದ್ಯುತ್‌ ದೀಪಗಳ ಬದಲು ಎಲ್‌ಇಡಿ ದೀಪ ಅಳವಡಿಕೆಯಾದರೆ ಅರ್ಧದಷ್ಟು ವಿದ್ಯುತ್‌ ಉಳಿತಾಯವಾಗುತ್ತದೆ. ಸದ್ಯ ಬೀದಿ ಕಂಬಗಳಿಗೆ 120 ವ್ಯಾಟ್ಸ್‌ ಸಾಮರ್ಥ್ಯದ ಎಸ್‌ವಿಎಲ್‌ ದೀಪಗಳನ್ನು ಅಳವಡಿಸಲಾಗಿದೆ. ಎಸ್‌ವಿಎಲ್‌ಗಿಂತಲೂ ಕಡಿಮೆ ಸಾಮರ್ಥ್ಯದ ಎಲ್‌ಇಡಿ ಅಳವಡಿಸಿದರೂ ಅಗತ್ಯವಿದ್ದಷ್ಟು ಬೆಳಕು ದೊರೆಯುತ್ತದೆ. ಈಗ ಬಳಕೆಯಾಗುವ ವಿದ್ಯುತ್‌, ಎಲ್‌ಇಡಿಯಿಂದಾಗಿ ಅರ್ಧದಷ್ಟು ಮಾತ್ರ ಬಳಕೆಯಾಗುತ್ತದೆ’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಎಂಜಿನಿಯರುಗಳು.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಹೊಸ ಬಡಾವಣೆಗಳು ತಲೆ ಎತ್ತುತ್ತವೆ. ಅದೇ ರೀತಿ ಹೊಸ ರಸ್ತೆಗಳಲ್ಲಿ ಹೊಸದಾಗಿ ಬೀದಿ ದೀಪ ಅಳವಡಿಸಬೇಕಾಗುತ್ತದೆ. ಇದಕ್ಕಾಗಿಯೆ ಪಿಪಿಪಿ ಮಾದರಿ ಯೋಜನೆಯಲ್ಲಿ ಪ್ರತಿವರ್ಷ ಶೇ 5ರಷ್ಟು ಹೊಸದಾಗಿ ವಿದ್ಯುತ್‌ ಕಂಬ ಹಾಗೂ ದೀಪ ಅಳವಡಿಸಲು ಅವಕಾಶ ಮಾಡಿಕೊಳ್ಳಲಾಗಿದೆ’ ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎನ್‌.ಗಣಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಬ್ಬಳ್ಳಿಯ ವಿದ್ಯಾನಗರದ ಪಿ.ಬಿ.ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳು ಪ್ರಜಾವಾಣಿ ಚಿತ್ರ: ಗುರು ಹಬೀಬ
ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಕಡೆ ಎಲ್‌ಇಡಿ ದೀಪ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದು ಬೀದಿ ದೀಪಕ್ಕೆ ಸಂಬಂಧಿಸಿದ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ
ಎಸ್‌.ಎನ್‌.ಗಣಾಚಾರಿ ಮಹಾನಗರ ಪಾಲಿಕೆಯ ಇಇ

ಖಾಸಗಿ ಕಂಪನಿಗೆ ಏನು ಲಾಭ? ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಎಲ್‌ಇಡಿ ದೀಪ ಅಳವಡಿಸಲು ಮಹಾನಗರ ಪಾಲಿಕೆಯು ಯಾವುದೇ ಹೆಚ್ಚುವರಿ ಖರ್ಚು ಮಾಡುತ್ತಿಲ್ಲ ಎನ್ನುವುದು ಈ ಯೋಜನೆಯಲ್ಲಿ ಗಮನಾರ್ಹ ಅಂಶ. ಅಂದಾಜು ₹93 ಕೋಟಿ ವೆಚ್ಚವನ್ನೆಲ್ಲ ಖಾಸಗಿ ಗುತ್ತಿಗೆದಾರ ಕಂಪನಿಯೆ ಭರಿಸಬೇಕು ಹಾಗೂ ಸುಮಾರು ಏಳು ವರ್ಷ ನಿರ್ವಹಣೆ ಮಾಡಬೇಕಿದೆ. ಮಹಾನಗರ ಪಾಲಿಕೆಯು ಪ್ರತಿ ತಿಂಗಳು ಈಗ ₹2 ಕೋಟಿ ವಿದ್ಯುತ್‌ ಶುಲ್ಕ ಭರಿಸುತ್ತಿರುವುದು ಎಲ್‌ಇಡಿ ದೀಪಗಳ ಅಳವಡಿಕೆಯಿಂದ ಕಡಿಮೆಯಾಗುತ್ತದೆ. ವಿದ್ಯುತ್‌ ಶುಲ್ಕದಲ್ಲಿ ಉಳಿತಾಯವಾಗುವ ಮೊತ್ತವನ್ನು ಖಾಸಗಿ ಕಂಪನಿಗೆ ಪ್ರತಿ ತಿಂಗಳು ಇಎಂಐ ರೂಪದಲ್ಲಿ ಮಹಾನಗರ ಪಾಲಿಕೆಯು ಪಾವತಿಸುತ್ತಾ ಹೋಗುತ್ತದೆ. ಎಲ್‌ಇಡಿ ಅಳವಡಿಕೆಯಿಂದಾಗಿ ₹2 ಕೋಟಿ ವಿದ್ಯುತ್‌ ಶುಲ್ಕದಲ್ಲಿ ಉಳಿತಾಯವಾಗುವ ಮೊತ್ತವು ಖಾಸಗಿ ಕಂಪನಿಗೆ ಕ್ರಮೇಣ ಲಾಭವಾಗಿ ಪರಿವರ್ತನೆ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.