ADVERTISEMENT

ಹುಬ್ಬಳ್ಳಿ: ಕಾಲುಬಾಯಿ ರೋಗ ಹತೋಟಿಗೆ

ಲಸಿಕಾಕರಣ: ಶೇ 96ರಷ್ಟು ಗುರಿ ಸಾಧನೆ * 1,83,670 ಜಾನುವಾರುಗಳಿಗೆ ಲಸಿಕೆ

ಕಲಾವತಿ ಬೈಚಬಾಳ
Published 11 ಫೆಬ್ರುವರಿ 2026, 5:05 IST
Last Updated 11 ಫೆಬ್ರುವರಿ 2026, 5:05 IST
   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ನಿಗಾ ವಹಿಸಲಾಗಿದ್ದು,  ಜಾನುವಾರುಗಳನ್ನು ಸಾವಿನ ದವಡೆಗೆ ಸಿಲುಕಿಸಿದ್ದ ಕಾಲುಬಾಯಿ ರೋಗವು ಹತೋಟಿಗೆ ಬಂದಿದೆ. ಇದಕ್ಕಾಗಿ ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸಿ, ಜಿಲ್ಲೆಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಒಟ್ಟು 8 ಹಂತಗಳಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ 2025ರ ನವೆಂಬರ್‌ 3ರಿಂದ ಆರಂಭವಾದ ಲಸಿಕಾ ಅಭಿಯಾನವು 2025ರ ಡಿಸೆಂಬರ್ 25ಕ್ಕೆ ಮುಕ್ತಾಯವಾಗಿದೆ. ಶೇ 96ರಷ್ಟು ಗುರಿ ಸಾಧನೆಯಾಗಿದೆ.  

ಜಿಲ್ಲೆಯಲ್ಲಿ ಒಟ್ಟು 1,83,876 ಜಾನುವಾರುಗಳಿವೆ. ಈ ಪೈಕಿ 1,83,670 ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಮಾಲೀಕರು ಲಸಿಕೆ ಹಾಕಿಸಲು ನಿರಾಕರಿಸಿದ್ದರಿಂದ 206 ದನಗಳಿಗೆ ಲಸಿಕೆ ಹಾಕಲಾಗಿಲ್ಲ. 

ADVERTISEMENT

446 ಜಾನುವಾರುಗಳು ಸಾವು: 2025ರ ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ಒಟ್ಟು 446 ಜಾನುವಾರುಗಳು ಆಕಸ್ಮಿಕವಾಗಿ ಮೃತಪಟ್ಟಿವೆ. ಈ ಪೈಕಿ ಧಾರಾವಾಡ ಮತ್ತು ಅಳ್ನಾವರದಲ್ಲಿ 124 ಜಾನುವಾರು ಮೃತಪಟ್ಟಿವೆ. ಹುಬ್ಬಳ್ಳಿ ಗ್ರಾಮೀಣ ಮತ್ತು ನಗರದಲ್ಲಿ 97, ಕಲಘಟಗಿಯಲ್ಲಿ 80, ಕುಂದಗೋಳದಲ್ಲಿ 78, ನವಲಗುಂದ ಮತ್ತು ಅಣ್ಣಿಗೇರಿಯಲ್ಲಿ 67 ಜಾನುವಾರು ಮೃಪಟ್ಟಿವೆ’ ಎಂದು ಧಾರವಾಡದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ವಿ.ಸಂತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಒಟ್ಟು 79,869 ಕುರಿಗಳು, 74,069 ಮೇಕೆ/ಆಡುಗಳು ಇವೆ. ಆಕಸ್ಮಿಕವಾಗಿ ಅಥವಾ ರೋಗದಿಂದ ರಾಸು ಮೃತಪಟ್ಟರೆ ₹15,000, ಆರು ತಿಂಗಳಿನಿಂದ ಒಂದು ವರ್ಷದೊಳಗಿನ ಆಡು/ ಕುರಿ ಮೃತಪಟ್ಟರೆ ₹5,000, ಒಂದು ವರ್ಷ ಮೇಲ್ಪಟ್ಟಿದ್ದರೆ ₹7,500 ಪರಿಹಾರ ಧನ ನೀಡಲಾಗುತ್ತದೆ. ಈ ತನಕ 446 ದನ/ ಎಮ್ಮೆ ಹಾಗೂ 1,820 ಕುರಿಗಳು, 700 ಮೃತ ಆಡುಗಳಿಗೆ ಪರಿಹಾರ ನೀಡಲಾಗಿದೆ. ಒಬ್ಬ ರೈತನ ಗರಿಷ್ಟ 5 ರಾಸುಗಳಿವೆ ಪರಿಹಾರ ನೀಡಲು ಅವಕಾಶವಿದೆ’ ಎಂದು ಅವರು ತಿಳಿಸಿದರು.

ಎಫ್‌.ಎಂ.ಡಿ 1600 ಡೋಸ್‌ ಲಸಿಕೆ ಲಭ್ಯವಿದೆ. 9ನೇ ಸುತ್ತಿನ ಲಸಿಕಾಕರಣಕ್ಕೆ 1.84 ಲಕ್ಷ ಡೋಸ್‌ ಲಸಿಕೆ ಪೂರೈಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ
ಡಾ.ಎಸ್.ವಿ.ಸಂತಿ ಉಪ ನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.