ಹುಬ್ಬಳ್ಳಿ: ಸರ್ಕಾರದ ವರ್ಗಾವಣೆ ನೀತಿಯಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಹುದ್ದೆ ಅನಿಶ್ಚಿತತೆಯ ಗೂಡಾಗಿದೆ.
ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರನ್ನು ಜೂನ್ 18ರಂದು ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನೇಮಿಸಿ ವರ್ಗಾವಣೆ ಮಾಡಿ, ಆ ಸ್ಥಾನಕ್ಕೆ ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಜುನಾಥ ಡೊಂಬರ ಅವರನ್ನು ನೇಮಿಸಲಾಗಿತ್ತು.
ಮಂಜುನಾಥ ಡೊಂಬರ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಸರ್ಕಾರವು ಜೂನ್ 19ರಂದು ಅವರ ವರ್ಗಾವಣೆ ಆದೇಶ ರದ್ದುಪಡಿಸಿದೆ.
ಈ ನಡುವೆ ರುದ್ರೇಶ ಘಾಳಿ ಅವರು ಶಿಕ್ಷಣ ಇಲಾಖೆಗೆ ವರ್ಗಾವಣೆಯಾದ ಆದೇಶ ರದ್ದಾಗಿಲ್ಲ. ಅಲ್ಲದೆ, ಪಾಲಿಕೆಯಲ್ಲಿ ಸೇವೆಯಿಂದ ಇನ್ನೂ ಬಿಡುಗಡೆಯಾಗಿಲ್ಲ. ಅವರು ಪಾಲಿಕೆ ಆಯುಕ್ತರಾಗಿ ಮುಂದುವರಿಯುವರೇ ಅಥವಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವರೇ’ ಎಂಬ ಪ್ರಶ್ನೆ ಮೂಡಿದೆ.
ರುದ್ರೇಶ ಘಾಳಿ ಅವರು ಪಾಲಿಕೆ ಆಯುಕ್ತರಾಗಿ ಮುಂದುವರಿಯಲಿದ್ದು, ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ, ಪಾಲಿಕೆಯ ಹಿಂದಿನ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ –ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಕುಮಾರ ಬಿರಾದಾರ ಅವರನ್ನು ಸಹ ವರ್ಗಾವಣೆ ಮಾಡಿ, ಆ ಜಾಗಕ್ಕೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧಿನಾಧಿಕಾರಿ ದೇವರಾಜ ಆರ್., ಅವರನ್ನು ನೇಮಕ ಮಾಡಲಾಗಿತ್ತು. ಈ ಆದೇಶವನ್ನು ಸಹ ಸರ್ಕಾರ ರದ್ದುಪಡಿಸಿದೆ.
‘ಪಾಲಿಕೆ ಆಯುಕ್ತರನ್ನು ನೇಮಕ ಮಾಡುವಾಗ ನಗರಾಭಿವೃದ್ಧಿ ಇಲಾಖೆಯವರು ಮೇಯರ್ ಜತೆಗೆ ಚರ್ಚಿಸಬೇಕು ಎಂಬ ನಿಯಮವಿದೆ. ಇದು ಪಾಲನೆಯಾಗುತ್ತಿಲ್ಲ’ ಎಂದು ಮಾಜಿ ಮೇಯರ್, ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಈರೇಶ ಅಂಚಟಗೇರಿ ದೂರಿದರು.
‘ಒಂದೆಡೆ ಬೇಕಾಬಿಟ್ಟಿಯಾಗಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಜತೆಗೆ ಪಾಲಿಕೆ ಆಯುಕ್ತ ಹುದ್ದೆಗೆ ಐಎಎಸ್ ಅಧಿಕಾರಿಗಳನ್ನು ನೇಮಿಸುತ್ತಿಲ್ಲ. ಐಎಎಸ್ ಅಧಿಕಾರಿ ಆಯುಕ್ತರಾದರೆ ಆಡಳಿತದಲ್ಲಿ ಶಿಸ್ತು ಇರುತ್ತದೆ’ ಎಂದರು.
ಪಾಲಿಕೆ ಸಾಮಾನ್ಯ ಸಭೆ ಮುಂದೂಡಿಕೆ: ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಜೂನ್ 23ರಂದು ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ. ಹುದ್ದೆಗಳಿಗೆ ಹರಾಜು ಮೂಲಕ ನೇಮಕ ಮಾಡಲಾಗುತ್ತಿದೆಈರೇಶ ಅಂಚಟಗೇರಿ, ಸದಸ್ಯ, ಹು–ಧಾ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.