ADVERTISEMENT

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ | ಜಿಐಎಸ್‌: ಮನೆ ಮನೆ ಸಮೀಕ್ಷೆಗೆ ಸಿದ್ಧತೆ

ಸತೀಶ ಬಿ.
Published 18 ಫೆಬ್ರುವರಿ 2026, 6:58 IST
Last Updated 18 ಫೆಬ್ರುವರಿ 2026, 6:58 IST
ವೈಮಾನಿಕ ಸಮೀಕ್ಷೆಯಲ್ಲಿ ಕಂಡ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆ
ವೈಮಾನಿಕ ಸಮೀಕ್ಷೆಯಲ್ಲಿ ಕಂಡ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆ   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳನ್ನು ನಿಖರವಾಗಿ ಗುರುತಿಸಲು ಪಾಲಿಕೆ ವ್ಯಾಪ್ತಿಯಲ್ಲಿ ನಡೆಸುತ್ತಿರುವ 3ಡಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಸರ್ವೆ ಭಾಗವಾಗಿ, ಮನೆ ಮನೆ ಸಮೀಕ್ಷೆ ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದ್ದು, ಸಿದ್ಧತೆಗಳು ನಡೆದಿವೆ.

ಸರ್ವೆಗೆ ₹23.5 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮುಂಬೈ ಮೂಲದ ಜೆನೆಸಿಸ್ ಇಂಟರ್‌ ನ್ಯಾಷನಲ್‌ ಕಂಪನಿ ಟೆಂಡರ್ ಪಡೆದಿದೆ. ಪ್ರಸಕ್ತ ಜುಲೈ ಒಳಗೆ ಜಿಐಎಸ್ ಸರ್ವೆ ಪೂರ್ಣಗೊಳ್ಳಬೇಕಿದೆ.  

ಈಗಾಗಲೇ 250 ಚದರ ಕಿ.ಮೀ ವ್ಯಾಪ್ತಿಯಲ್ಲಿ ವೈಮಾನಿಕ ಸಮೀಕ್ಷೆ, ಆರ್ಥೊ ರೆಕ್ಟಿಫೈಡ್‌  ಇಮೇಜ್ (ಒಆರ್‌ಐ) ಪ್ರೊಸೆಸಿಂಗ್‌ ಮುಗಿದಿದೆ. 360 ಡಿಗ್ರಿ ಪನೋರೋಮಿಕ್‌ ಇಮೇಜ್‌ ಸೃಜನೆ, ರೆಡಾರ್‌ ಸರ್ವೆ ಸಹ ಮಾಡಲಾಗಿದೆ. ಪ್ರಾಪ‍ರ್ಟಿ ಟ್ಯಾಕ್ಸ್‌ ಮ್ಯಾನೇಜ್‌ಮೆಂಟ್ ಸಿಸ್ಟಮ್‌ (ಪಿಟಿಎಂಎಸ್‌) ವೆಬ್‌ ಪೋರ್ಟಲ್, ಮನೆ ಮನೆ ಸಮೀಕ್ಷೆಗೆ ಆ್ಯಪ್‌ ಮತ್ತು ಪಿಟಿಎಂಎಸ್ ಮೊಬೈಲ್‌ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. 

ADVERTISEMENT

ಜಿಐಎಸ್ ಸರ್ವೆಗೆ ಟೆಂಡರ್ ಪಡೆದ ಕಂಪನಿಯ ಸಿಬ್ಬಂದಿ ಮತ್ತು ಪಾಲಿಕೆಯ ಸಿಬ್ಬಂದಿ ಜಂಟಿಯಾಗಿ ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಲಿಕೆಯ ಎಲ್ಲ 12 ವಲಯಗಳಲ್ಲಿ ಎರಡರಿಂದ ಮೂರು ತಿಂಗಳು ಮನೆ ಮನೆ ಸಮೀಕ್ಷೆಗೆ ನಡೆಯಲಿದೆ.

‘2025ಕ್ಕೂ ಹಿಂದಿನ ಮತ್ತು ಈಗಿನ ಪಾಲಿಕೆಯ ಆಸ್ತಿಗಳಿಗೆ  ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ಆಳವಡಿಸಲಾಗಿದ್ದು, ರೆಡಾರ್‌ ಸರ್ವೆ, ಒಆರ್‌ಐ ಬಳಸಿ ನಕ್ಷೆ (ಬೇಸ್ ಮ್ಯಾಪ್‌) ಸಿದ್ಧಪಡಿಸಲಾಗುತ್ತಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ಯಾವ ಜಾಗದಲ್ಲಿ ಯಾವ ಆಸ್ತಿ ಇದೆ ಎಂಬುದನ್ನು ಎಂಬುದನ್ನು ನಕ್ಷೆಯಲ್ಲಿ ಗುರುತು ಮಾಡಿ, ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ರಸ್ತೆಯ ವಿಸ್ತೀರ್ಣ, ಅಲ್ಲಿರುವ ಆಸ್ತಿ, ವಿದ್ಯುತ್ ಕಂಬ ಸೇರಿ ಇನ್ನಿತರ ಮಾಹಿತಿ ಅದರಲ್ಲಿ ಲಭ್ಯವಾಗಲಿದೆ’ ಎಂದರು.

‘ಮೊಬೈಲ್ ಆ್ಯಪ್‌ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ, ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿರುವ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.  ನಂತರ ಶೇ 10ರಷ್ಟು ರಸ್ತೆ, ಉದ್ಯಾನ, ವಾಣಿಜ್ಯ ಸಂಕೀರ್ಣ, ಜನವಸತಿ  ಪ್ರದೇಶವನ್ನು ಆಯ್ಕೆ ಮಾಡಿಕೊಂಡು ವೈಮಾನಿಕ ಸಮೀಕ್ಷೆ, ಪಿಟಿಎಂಎಸ್‌ನಲ್ಲಿ ಅಳವಡಿಸಲಾಗಿರುವ ಅಂಕಿ ಅಂಶದೊಂದಿಗೆ ತಾಳೆ ಮಾಡಲಾಗುತ್ತದೆ. ಶೇ 90ರಷ್ಟು ತಾಳೆ ಆಗದಿದ್ದರೆ ಸಮೀಕ್ಷೆಗೆ ಟೆಂಡರ್‌ ಪಡೆದ ಕಂಪನಿ ಮತ್ತೊಮ್ಮೆ ಮನೆ ಮನೆ ಸಮೀಕ್ಷೆ ಮಾಡಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು. 

ಲೆವೆಲ್ ಆಫ್ ಡೀಟೇಲ್ಸ್ (ಎಲ್‌ಒಡಿ) –2 ಮತ್ತು 3ಡಿ ಸಿಟಿ ಮಾಡೆಲ್‌ ಸಹ ರೂಪಿಸಲಾಗಿದೆ. ಇದರಿಂದ ಕಚೇರಿಯಲ್ಲಿ ಕುಳಿತು ಬೇರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಟ್ಟಡದ ಅಂತಸ್ತು, ಎತ್ತರವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಪ್ರೋತ್ಸಾಹಧನ

ಜಿಐಎಸ್‌ ಸರ್ವೆಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಸಿಗಲಿದ್ದು ಈಗ ಆಗಿರುವ ಸರ್ವೆ ಕಾರ್ಯ ಆಧರಿಸಿ ಹು–ಧಾ ಮಹಾನಗರ ಪಾಲಿಕೆ ₹50 ಕೋಟಿ ಪ್ರೋತ್ಸಾಹಧನ ಪಡೆಯಲು ಅರ್ಹವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಒಂದನೇ ಹಂತದಲ್ಲಿ ₹20 ಕೋಟಿ ಎರಡನೇ ಹಂತದಲ್ಲಿ ₹30 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರೋತ್ಸಾಹಧನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರ ತಂಡ ಭೇಟಿ ನೀಡಿ ಪರಿಶೀಲಿಸಿದ ನಂತರ ಹಣ ಬಿಡುಗಡೆಯಾಗುತ್ತದೆ. ಸರ್ವೆ ಇಲಾಖೆಯಿಂದ ಸರ್ವೆ ಮಾಡಿ ಅಂತಿಮ ಪ್ರಾಪರ್ಟಿ ಕಾರ್ಡ್ ಸಿದ್ಧಪಡಿಸಿದರೆ ಮೂರನೇ ಹಂತದಲ್ಲಿ ₹30 ಕೋಟಿ ಪ್ರೋತ್ಸಾಹಧನ ಸಿಗಲಿದೆ. ಜಿಐಎಸ್ ಸರ್ವೆಗೆ ನಿಖರತೆ ಸಿಗಲಿದೆ. 

ಸಾಫ್ಟ್‌ವೇರ್ ಒದಗಿಸಲು ಪತ್ರ

ಮನೆ ಮನೆ ಸಮೀಕ್ಷೆಯಲ್ಲಿ ಸಂಗ್ರಹವಾದ ಅಂಕಿ ಅಂಶಗಳನ್ನು ಸಂಗ್ರಹಿಸಲು ಸರ್ವರ್‌ ಕ್ಲೌಡ್‌  ಸಾಫ್ಟ್‌ವೇರ್ ಅಗತ್ಯ ಇದೆ. ಇದಕ್ಕಾಗಿ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಗೆ (ಕೆ.ಎಂ.ಡಿ.ಎಸ್) ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ನಂತರ ಮನೆ ಮನೆ ಸಮೀಕ್ಷೆ ಅರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ಜಿಐಎಸ್ ಸರ್ವೆ ಕೈಗೊಳ್ಳಲಾಗುತ್ತಿದ್ದು ಇದರಿಂದ ಪಾಲಿಕೆಯ ಆಸ್ತಿಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ
- ರುದ್ರೇಶ ಘಾಳಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.