ADVERTISEMENT

ಹುಬ್ಬಳ್ಳಿ | ಪಾಲನೆಯಾಗದ ನಿಯಮ; ಭಯದಲ್ಲೇ ಮಕ್ಕಳ ಪಯಣ

ಪ್ರಜಾವಾಣಿ ವಿಶೇಷ
Published 9 ಜೂನ್ 2023, 4:40 IST
Last Updated 9 ಜೂನ್ 2023, 4:40 IST
ಹುಬ್ಬಳ್ಳಿಯ ದೇವಾಂಗಪೇಟೆ ಮುಖ್ಯರಸ್ತೆಯಲ್ಲಿ ಆಟೊರಿಕ್ಷಾದಲ್ಲಿ ಪ್ರಯಾಣಿಸುತ್ತಿರುವ ಶಾಲಾ ಮಕ್ಕಳು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದೇವಾಂಗಪೇಟೆ ಮುಖ್ಯರಸ್ತೆಯಲ್ಲಿ ಆಟೊರಿಕ್ಷಾದಲ್ಲಿ ಪ್ರಯಾಣಿಸುತ್ತಿರುವ ಶಾಲಾ ಮಕ್ಕಳು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ನಾಗರಾಜ್‌ ಬಿ.ಎನ್‌.

ಹುಬ್ಬಳ್ಳಿ: ಆರು ಮಂದಿ ಕೂರುವ ಆಸನದಲ್ಲಿ ಹತ್ತರಿಂದ ಹದಿನೈದು ಮಂದಿ, ಚಾಲಕನ ಕಾಲ ಮೇಲೊಬ್ಬರು ಕೂತರೆ–ಅಕ್ಕಪಕ್ಕ ನಾಲ್ವರು, ಬೀಳುವ ಭಯದಲ್ಲಿ ಆಟೊವನ್ನು ಬಿಗಿಯಾಗಿ ಕಷ್ಟಪಟ್ಟು ಹಿಡಿದುಕೊಳ್ಳುವುದು ಒಂದೆಡೆಯಾದರೆ, ಎರಡೂ ಬಾಗಿಲ ಹೊರಗಡೆ ಬ್ಯಾಗ್‌ಗಳ ರಾಶಿ ಇನ್ನೊಂದೆಡೆ! ಉಸಿರುಕಟ್ಟುವ ವಾತಾವರಣದಲ್ಲಿ ಎಳೆಯ ಜೀವಗಳು ಐದಾರು ಕಿ.ಮೀ. ಪ್ರಯಾಣ..!

ಇದು ಹು–ಧಾ ಅವಳಿನಗರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೊಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಆಟೊದಲ್ಲಿ ಆರಕ್ಕಿಂತ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದೊಯ್ಯಬಾರದು, ಶಾಲಾ ಬ್ಯಾಗ್‌ಗಳು ಹೊರಗಡೆ ಜೋತು ಹಾಕಬಾರದು, ಚಾಲಕರು ಮಕ್ಕಳನ್ನು ಕಾಲ ಮೇಲೆ ಕುಳ್ಳಿಸಿಕೊಳ್ಳಬಾರದು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯ ಇರ
ಬೇಕು... ಎಂಬಿತ್ಯಾದಿ ನಿಯಮಗಳಿದ್ದರೂ ಅದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ‌!

ADVERTISEMENT

ಬಹುತೇಕ ಆಟೊಗಳಲ್ಲಿ ಸಾಮರ್ಥ್ಯ
ಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಹೋಗುತ್ತಾರೆ. ಅವುಗಳ ಮಾಲೀಕರು, ಚಾಲಕರು ಮಕ್ಕಳ ಹಾಗೂ ಆಟೊಗಳ ಸುರಕ್ಷತೆ ಕಡೆಗೆ ಗಮನ ಹರಿಸುತ್ತಿಲ್ಲ. ಕಡಿಮೆ ಬಾಡಿಗೆ ದರದಲ್ಲಿ ಮಕ್ಕಳು ಶಾಲೆಗೆ ಹೋಗಿ, ಮನೆಗೆ ಬಂದರಾಯಿತು ಎನ್ನುವ ಮನೋಭಾವ ಬಹುತೇಕ ಪಾಲಕರದ್ದಾಗಿದೆ. ಆರು ಮಕ್ಕಳು ಕೂರುವ ಸಾಮರ್ಥ್ಯದ ಆಟೊದಲ್ಲಿ 10–15 ಮಕ್ಕಳನ್ನು ತುಂಬುವುದು, ಮಿನಿ ಬಸ್‌ಗಳ ಒಂದು ಆಸನದಲ್ಲಿ ನಾಲ್ಕು–ಐದು ಮಕ್ಕಳನ್ನು ಕೂರಿಸುವುದು ಸಾಮಾನ್ಯವಾಗಿದೆ. ಕೆಲವು ಮಕ್ಕಳು ಜೀವಭಯದಿಂದ ಆಟೊವನ್ನು ಜೋತು ಹಿಡಿದು ಪ್ರಯಾಣಿಸುತ್ತಾರೆ. ಒಬ್ಬರ ಕಾಲಮೇಲೆ ಮತ್ತೊಬ್ಬರು ಕೂರುತ್ತಾರೆ. ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಆಟೊ ಬಾಗಿಲು ಹಾಕಲಾಗದೆ, ಬಲವಂತವಾಗಿ ಎಳೆದು ಹಿಡಿಯುತ್ತಾರೆ. ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತಲುಪುವ ಐದು–ಆರು ಕಿ.ಮೀ.ನಷ್ಟು ಪ್ರಯಾಣದಲ್ಲಿ ಮಕ್ಕಳು ಉಸಿರುಗಟ್ಟಿ ಹೈರಾಣಾಗಿರುತ್ತಾರೆ.

ಕೆಲವು ಆಟೊ ಚಾಲಕರು, ಒಂದು ಕೈಲಿ ಸ್ಟೇರಿಂಗ್‌ ಹಿಡಿದರೆ ಮತ್ತೊಂದು ಕೈಲಿ ಮೊಬೈಲ್‌ ಫೋನ್‌ ಹಿಡಿದು ಮಾತನಾಡುತ್ತ ಆಟೊ ಚಲಾಯಿಸುತ್ತಾರೆ. ಆದರ್ಶನಗರ, ವಿಜಯನಗರ, ದೇವಾಂಗಪೇಟೆ, ಕೇಶ್ವಾಪುರ, ಬೆಂಗೇರಿ, ಕೋಟಿಲಿಂಗೇಶ್ವರನಗರ,ಹಳೇಹುಬ್ಬಳ್ಳಿ, ಚನ್ನಪೇಟೆ, ಆನಂದನಗರ ಭಾಗದ ವಿವಿಧೆಡೆ ರಸ್ತೆ ಕಾಮಗಾರಿ ನಡೆಯು
ತ್ತಿರುವುದರಿಂದ, ಒಳರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ತಗ್ಗು–ಗುಂಡಿಗಳ ನಡುವೆ ಮೊಬೈಲ್‌ನಲ್ಲಿ ಮಾತನಾಡುತ್ತ ಆಟೊ ಚಲಾಯಿಸಿದರೆ ಅಪಾಯವನ್ನು ಆಹ್ವಾನಿಸಿದಂತೆ. ‘ಬಹುತೇಕ ಆಟೊಗಳು ದಾಖಲೆಗಳನ್ನು ಹೊಂದಿಲ್ಲ, ಚಾಲಕರು ಸಹ ಪರವಾನಗಿ ಪತ್ರ ಹೊಂದಿಲ್ಲ ಎಂದು ಪೊಲೀಸರೇ
ಹೇಳುತ್ತಾರೆ.

‘ವರ್ಷದ ಹಿಂದಷ್ಟೇ ನಗರದ ಪ್ರತಿಷ್ಠಿತ ಶಾಲೆಯ ಕ್ಯಾಬ್‌ ಚಾಲಕನೊಬ್ಬ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದಿದ್ದು, ಶಾಲಾ ವಾಹನವೊಂದು ಬಿಆರ್‌ಟಿಎಸ್‌ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು, ಇಬ್ಬರು ಮಕ್ಕಳು ಗಾಯಗೊಂಡಿದ್ದು ಇನ್ನೂ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿವೆ. ಅವಳಿನಗರದ ಹೊರತಾಗಿ ಬೇರೆಡೆ ನಿಯಮ ಉಲ್ಲಂಘಿಸಿ ಮಕ್ಕಳನ್ನು ಕರೆದೊಯ್ಯುತ್ತಿರುವ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿರುವ ವಿಷಯ ಆಗಾಗ ವರದಿಯಾಗುತ್ತಲೇ ಇರುತ್ತವೆ. ಪಾಲಕರು, ಶಾಲಾ ಆಡಳಿತ ಮಂಡಳಿಗಳು, ಪೊಲೀಸ್‌ ಇಲಾಖೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ನಿರಂತರ ಜಾಗರೂಕತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಇಂತಹ ಪ್ರಕರಣಗಳನ್ನು ತಪ್ಪಿಸಲು ಸಾಧ್ಯವಿದೆ’ ಎಂದು ಜನಾಗ್ರಹ ಸಂಸ್ಥೆ ಮುಖ್ಯಸ್ಥ ಸಂತೋಷ ನರಗುಂದ ಆತಂಕ ವ್ಯಕ್ತಪಡಿಸುತ್ತಾರೆ.

‘ಶೀಘ್ರ ಕಾರ್ಯಾಚರಣೆ, ಸಭೆ’

‘ಮಕ್ಕಳ ಸುರಕ್ಷತೆ ಬಗ್ಗೆ ಶಾಲಾ ಆಡಳಿತ ಮಂಡಳಿ, ಪಾಲಕರು, ಆಟೊ ರಿಕ್ಷಾ ಮತ್ತು ಮ್ಯಾಕ್ಸಿ ಕ್ಯಾಬ್‌ ಸಂಘಟನೆ ಪದಾಧಿಕಾರಿಗಳ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ಆದೇಶ ಬಂದಿದೆ. ಪೊಲೀಸ್‌ ಇಲಾಖೆ ಜೊತೆ ಚರ್ಚಿಸಿ ಶೀಘ್ರ ಸಭೆ ನಡೆಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ತಿಳಿಸಿದರು.

‘ಅವಳಿನಗರದ ಬಹುತೇಕ ಶಾಲಾವಾಹನಗಳು ಅದರಲ್ಲೂ ಆಟೊಗಳು ದಾಖಲೆಗಳಿಲ್ಲದೆ ಸಂಚರಿಸುತ್ತಿರುವುದು ಗಮನಕ್ಕೆ ಬಂದಿವೆ. ಆಗಾಗ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡುತ್ತಿದ್ದೇವೆ. ಅಪಘಾತಗಳಾಗದ ಹಾಗೆ, ರಸ್ತೆ ಸುರಕ್ಷತೆ ಬಗ್ಗೆ ಅವರಿಗೆ ಜಾಗೃತಿ ಮೂಡಿಸಿ, ಸಂಚಾರ ನಿಯಮಗಳನ್ನು ಪಾಲಿಸಲು ಸೂಚಿಸುತ್ತೇವೆ. ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಿಯಮ ಉಲ್ಲಂಘನೆ; 67 ಆಟೊ ಜಪ್ತಿ

ಹುಬ್ಬಳ್ಳಿ: ಹು–ಧಾದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 67 ಆಟೊಗಳನ್ನು ಜಪ್ತಿ ಮಾಡಿದ್ದಾರೆ.

‘ಈಗಾಗಲೇ ಶಾಲೆಗಳು ಆರಂಭವಾಗಿವೆ. ಶಾಲಾ ವಾಹನಗಳು ಮತ್ತು ಆಟೊಗಳಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ನಿಯಮ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಂಡಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಮೋಟಾರು ವಾಹನ ಕಾಯ್ದೆ ಅಡಿ ಆಟೊಗಳನ್ನು ಜಪ್ತಿ ಮಾಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಟೊ ಮತ್ತು ಶಾಲಾ ವಾಹನಗಳ ಚಾಲಕರು ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.