ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗೆ 99 ಮರಗಳನ್ನು ಕತ್ತರಿಸಲಾಗುತ್ತಿದ್ದು, ಈಗಾಗಲೇ ಬಹುತೇಕ ಮರಗಳನ್ನು ಕಡಿಯಲಾಗಿದೆ. ಬುಧವಾರ ಪಾಲಿಕೆಯ ಚಿಟಗುಪ್ಪಿ ಉದ್ಯಾನದ ಎದುರು ಇರುವ ಐದು ಮರಗಳನ್ನು ಧರೆಗುರುಳಿಸಲಾಗಿದೆ.
ಮೇಲ್ಸೇತುವೆಯ ಮೊದಲ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅಕ್ಟೋಬರ್‌ನಲ್ಲಿ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಳ್ಳಲಿರುವ ಸಿದ್ದಪ್ಪ ಕಂಬಳಿ ರಸ್ತೆಯ ಅಕ್ಕಪಕ್ಕದ ಖಾಸಗಿ ಹಾಗೂ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ. ಈ ಜಾಗದಲ್ಲಿರುವ ಗಿಡ–ಮರಗಳನ್ನು ತೆರವು ಮಾಡಲು ಗುರುತಿಸಿದ್ದು, ಇದೀಗ ಅವುಗಳನ್ನೂ ಕಡಿಯಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ ಜೊತೆ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ, ಕಾಮಗಾರಿಗೆ ಅಡ್ಡಿಯಾಗುವ ಮರಗಳನ್ನು ಗುರುತಿಸಲಾಗಿದೆ. ಮುಂದಿನ ತಿಂಗಳು ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ಕಾಮಗಾರಿ ಆರಂಭವಾಗಲಿದ್ದು, ಪೂರ್ವ ಸಿದ್ಧತೆಯಾಗಿ ಮರಗಳನ್ನು ಕಡಿಯಲಾಗುತ್ತಿದೆ’ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದರು.
‘ಪಾಲಿಕೆ ಉದ್ಯಾನದ ಎದುರು ಇದ್ದ ಐದು ಮರಗಳು, ಅನೇಕ ವರ್ಷಗಳಿಂದ ನೆರಳು ನೀಡುತ್ತ ಸಾರ್ವಜನಿಕರಿಗೆ ಆಶ್ರಯವಾಗಿತ್ತು. ಇದೀಗ ಆ ಎಲ್ಲ ಮರಗಳನ್ನು ಕಡಿದು ಹಾಕಿದ್ದು ನೋವಿನ ಸಂಗತಿ. ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿದು, ಪರಿಸರವನ್ನು ಮತ್ತಷ್ಟು ಹಾಳು ಮಾಡಿಕೊಳ್ಳುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಸಿದ್ದರಾಮ ಅಗಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.