ಹುಬ್ಬಳ್ಳಿ: ರಕ್ಷಣೆಗೆ ಧರಿಸುವ ಹೆಲ್ಮೆಟ್‌ನಲ್ಲಿ ಸಿಮೆಂಟ್ ತುಂಬುವುದು, ಸುರಕ್ಷತಾ ಕ್ರಮ ಇಲ್ಲದೆ ಗರ್ಡರ್ ಮೇಲೆತ್ತುವುದು, ಕೆಳಗಡೆ ಜಾಲರಿ ಅಳವಡಿಸದೆ ಮೂವತ್ತು ಅಡಿ ಎತ್ತರದಲ್ಲಿ ಕೆಲಸ...
–ಇವು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯಲ್ಲಿ ಪ್ರತಿನಿತ್ಯ ಕಂಡುಬರುವ ದೃಶ್ಯಗಳು. ಯಾವ ಮುಂಜಾಗ್ರತಾ ಕ್ರಮಗಳೂ ಇಲ್ಲದೆ ಕಾರ್ಮಿಕರು ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲಿಯೇ ಕಾರ್ಮಿಕರ ಸುರಕ್ಷತಾ ಕ್ರಮಗಳು ಉಲ್ಲಂಘನೆಯಾಗುತ್ತಿವೆ. ಕಾರ್ಮಿಕ ಇಲಾಖೆಯು ಸಹ ಈ ಕುರಿತು ನಿರ್ಲಕ್ಷ್ಯ ವಹಿಸಿದೆ.
ಮೇಲ್ಸೇತುವೆಗೆ ಸ್ಲ್ಯಾಬ್ ಅಳವಡಿಸಲು ಹಾಗೂ ಪ್ಲಾಸ್ಟರ್ ಮಾಡಲು ಅಳವಡಿಸಿರುವ ಕಬ್ಬಿಣದ ಸಲಕರಣೆಗಳ ಮೇಲೆ ಕಾರ್ಮಿಕರು ನಿಂತುಕೊಂಡು ಕೆಲಸ ಮಾಡುತ್ತಾರೆ. ತಲೆಗೆ ಧರಿಸಬೇಕಿದ್ದ ಜೀವ ರಕ್ಷಕ ಹೆಲ್ಮೆಟ್‌ನಲ್ಲಿ ಸಿಮೆಂಟ್ ತುಂಬಿಕೊಂಡು ಸ್ಲ್ಯಾಬ್‌ಗೆ ಪ್ಲಾಸ್ಟರ್ ಮಾಡುತ್ತಾರೆ. 20, 30 ಕ್ವಿಂಟಲ್ ಭಾರದ ಕಬ್ಬಿಣದ ತುಂಡನ್ನು ಕ್ರೇನ್ ಮೂಲಕ ಎತ್ತಿ ಮೇಲೆ ಸಾಗಿಸುವಾಗಲೂ, ಸುರಕ್ಷತಾ ಸಾಧನಗಳನ್ನು ಬಳಸುತ್ತಿಲ್ಲ. ಗುತ್ತಿಗೆ ಪಡೆದ ಕಂಪನಿ ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದೆಯೇ ಅಥವಾ ಕಾರ್ಮಿಕರೇ ಸುರಕ್ಷತಾ ಸಾಧನಗಳನ್ನು ಬಳಸುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಎತ್ತರದಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಕೆಳಗೆ ಬೀಳದಂತೆ ರಕ್ಷಣಾ ವ್ಯವಸ್ಥೆ ಹೊಂದಿರಬೇಕು. ಗಾರ್ಡ್ ರೇಲ್, ಜಾಲರಿ ಮತ್ತು ವೈಯಕ್ತಿಕ ಬೀಳುವಿಕೆ ತಡೆ ವ್ಯವಸ್ಥೆ (ಪರ್ಸನಲ್ ಫಾಲ್ ಅರೆಸ್ಟ್ ಸಿಸ್ಟಮ್), ಸ್ಕೈಪೋಲ್ಡಿಂಗ್ ಏಣಿ ಬಳಸಬೇಕು. ಇವುಗಳ ಬಳಕೆ ಕುರಿತು ಕಾರ್ಮಿಕರು ತರಬೇತಿ ಪಡೆದಿರಬೇಕು. ಆದರೆ, ಇಲ್ಲಿ ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಗರ್ಡರ್ ಅಳವಡಿಸುವ ಸಂದರ್ಭ, ಕ್ರೇನ್ ಬುಟ್ಟಿಯಲ್ಲಿಯೇ ಕಾರ್ಮಿಕರು ಮೇಲೆ ಹೋಗುತ್ತಾರೆ, ಸೇತುವೆಯ ತುದಿಗೆ ನಿಂತು, ಹರಸಾಹಸದಿಂದ ಕಬ್ಬಿಣದ ಸಾಮಗ್ರಿಗಳನ್ನು ಮೇಲೆತ್ತುತ್ತಾರೆ. ಅಪಾಯಕಾರಿ ಕೆಲಸದ ವೇಳೆಯೂ, ಕೆಲವರು ಮೊಬೈಲ್‌ನಲ್ಲಿ ಮಾತನಾಡುವುದು ಕಂಡು ಬರುತ್ತಿದೆ.
‘ನಿರ್ಮಾಣ ಹಂತದ ಕಾಮಗಾರಿಯಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಬಳಕೆ ಸುರಕ್ಷತೆಯ ಮೂಲವಾಗಿದೆ. ನಿರ್ದಿಷ್ಟ ಅಪಾಯಗಳಿಂದ ಕಾರ್ಮಿಕರನ್ನು ರಕ್ಷಿಸಲು ಹೆಲ್ಮೆಟ್, ಸುರಕ್ಷತಾ ಕನ್ನಡಕ, ಮುಖದ ಗುರಾಣಿ, ಶ್ರವಣ ಯಂತ್ರ (ಇಯರ್ ಪ್ಲಗ್/ ಇಯರ್ ಮಫ್), ಕೈ ಗವಸು, ಬೂಟ್‌ಗಳನ್ನು ಬಳಸುವುದು ಕಡ್ಡಾಯವಾಗಿದೆ. ಇದು ಕಾರ್ಮಿಕ ಸುರಕ್ಷಾ ನಿಯಮವಾಗಿದ್ದು, ಗುತ್ತಿಗೆದಾರ ಕಂಪನಿಯ ಜವಾಬ್ದಾರಿಯೂ ಆಗಿದೆ’ ಎಂದು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಸಚಿನ ಹಳಮನಿ ಹೇಳುತ್ತಾರೆ.
‘ಕಾರ್ಮಿಕರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಉದ್ಯೋಗದಾತ ಕಂಪನಿಗೆ ಕಾರ್ಮಿಕ ಇಲಾಖೆ ಷರತ್ತು ವಿಧಿಸುತ್ತದೆ. ಅವುಗಳನ್ನು ಆಗಾಗ ಪರಿಶೀಲನೆ ನಡೆಸುವ ಜವಾಬ್ದಾರಿ ಇಲಾಖೆಯದ್ದಾಗಿದೆ. ಈಗಾಲೇ ನಗರದಲ್ಲಿ ಮೂರು, ನಾಲ್ಕು ಅವಘಡಗಳಾಗಿವೆ. ಇನ್ನೂ ಶೇ 50ರಷ್ಟು ಕಾಮಗಾರಿ ಬಾಕಿಯಿದ್ದು, ಸಂಭವನೀಯ ಅಪಾಯ ತಡೆಗಟ್ಟಲು ಕಾರ್ಮಿಕರ ಸುರಕ್ಷತಾ ಕ್ರಮ ಅಗತ್ಯವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಧಾರವಾಡಶೆಟ್ಟರ್ ಹೇಳುತ್ತಾರೆ.
ಗುತ್ತಿಗೆ ನೀಡುವಾಗ ಕಾರ್ಮಿಕರ ಸುರಕ್ಷತಾ ಹಾಗೂ ಕಲ್ಯಾಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಷರತ್ತು ವಿಧಿಸಲಾಗಿದೆ. ಕಾರ್ಮಿಕ ಇಲಾಖೆ ಪರಿಶೀಲನೆ ನಡೆಸಬೇಕುಸತೀಶ ನಾಗನೂರು ಎಂಜನಿಯರ್ ಪಿಡಬ್ಲ್ಯುಡಿ ಎನ್‌ಎಚ್ ವಿಭಾಗ
ಸುರಕ್ಷತಾ ಕ್ರಮವಿಲ್ಲದೆ ಕಾರ್ಮಿಕರು ಮೇಲ್ಸೇತುವೆ ಕಾಮಗಾರಿಯಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ. ಬುಧವಾರದಂದು ಗುತ್ತಿಗೆ ಪಡೆದ ಕಂಪನಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆಸಚಿನ ಹಳಮನಿ ಸಹಾಯಕ ಆಯುಕ್ತ ಕಾರ್ಮಿಕ ಇಲಾಖೆ ಹುಬ್ಬಳ್ಳಿ
‘ರಾತ್ರೋರಾತ್ರಿ ಊರಿಗೆ ತೆರಳುತ್ತಾರೆ’
‘ಮೇಲ್ಸೇತುವೆ ಕಾಮಗಾರಿ ಅಪಾಯಕಾರಿ ಆಗಿರುವುದರಿಂದ ಸಾಮಾನ್ಯ ಕಾರ್ಮಿಕರನ್ನು ಬಳಸಿಕೊಳ್ಳುವುದಿಲ್ಲ. ಒಡಿಶಾ ಮಧ್ಯಪ್ರದೇಶದ ಪರಿಣತ ಕಾರ್ಮಿಕರನ್ನು ಕರೆಸಿ ಕಾಮಗಾರಿ ಮಾಡಿಸಲಾಗುತ್ತದೆ. ಮುಂಗಡವಾಗಿ ಹಣ ನೀಡಿ ಊಟ–ವಸತಿ ವ್ಯವಸ್ಥೆ ಮಾಡಿದರೂ ಒಂದು ವಾರವಷ್ಟೇ ಕೆಲಸ ಮಾಡಿ ರಾತ್ರೋರಾತ್ರಿ ತಮ್ಮ ರಾಜ್ಯಕ್ಕೆ ತೆರಳುತ್ತಾರೆ. ಅವರಿಗೆ ನೀಡಿರುವ ಪಾತ್ರೆಗಳ ಜತೆಗೆ ಸುರಕ್ಷತಾ ಸಾಮಗ್ರಿಗಳನ್ನು ಸಹ ತೆಗೆದುಕೊಂಡು ಹೋಗುತ್ತಾರೆ’ ಎಂದು ಈ ಹಿಂದೆ ಶಾಸಕ ಮಹೇಶ ಟೆಂಗಿನಕಾಯಿ ಕಾಮಗಾರಿ ಪರಿಶೀಲನೆ ನಡೆಸುವಾಗ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.