ADVERTISEMENT

ಹುಬ್ಬಳ್ಳಿ | ಮೇಲ್ಸೇತುವೆ ಕಾಮಗಾರಿ: 4 ತಿಂಗಳು ಚನ್ನಮ್ಮ ವೃತ್ತ ಭಾಗಶಃ ಬಂದ್‌?

ನಾಗರಾಜ್ ಬಿ.ಎನ್‌.
Published 2 ಏಪ್ರಿಲ್ 2025, 5:46 IST
Last Updated 2 ಏಪ್ರಿಲ್ 2025, 5:46 IST
<div class="paragraphs"><p>ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಎದುರು ಮೇಲ್ಸೇತುವೆ ಕಾಮಗಾರಿ ಸ್ಥಗಿತವಾಗಿದೆ </p></div>

ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಎದುರು ಮೇಲ್ಸೇತುವೆ ಕಾಮಗಾರಿ ಸ್ಥಗಿತವಾಗಿದೆ

   

ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿ: ನಗರದಲ್ಲಿ ಆಮೆಗತಿಯಲ್ಲಿ ಸಾಗಿರುವ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡಲು ಹಳೇ ಕೋರ್ಟ್‌ ವೃತ್ತ, ಚನ್ನಮ್ಮ ವೃತ್ತ ಹಾಗೂ ಹೊಸೂರಿನ ಗಾಳಿದುರ್ಗಮ್ಮ ದೇವಸ್ಥಾನದವರೆಗಿನ ಇಕ್ಕೆಲಗಳಲ್ಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ನಾಲ್ಕು ತಿಂಗಳು ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ.

ADVERTISEMENT

ಕಾಮಗಾರಿಯ ಗುತ್ತಿಗೆ ಪಡೆದಿರುವ ಝಂಡು ಕಂಪನಿಯು ಪೊಲೀಸ್‌ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜೊತೆ ಸೇರಿ ಈ ವಾರ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಿದೆ. ಆಯಾ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಕೋರಲಿದೆ.

ಚನ್ನಮ್ಮ ವೃತ್ತದ ಕಾರವಾರ ರಸ್ತೆ ಹೊರತುಪಡಿಸಿ, ನೀಲಿಜಿನ್‌ ರಸ್ತೆ, ಕೋರ್ಟ್‌ ರಸ್ತೆ, ವಿಜಯಪುರ ರಸ್ತೆ, ಪ್ರವಾಸಿ ಮಂದಿರದ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ, ಹಳೇ ಬಸ್‌ ನಿಲ್ದಾಣದ ಎದುರಿನ ರಸ್ತೆ, ಬಸವವನ ವೃತ್ತದ ಇಕ್ಕೆಲಗಳ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ. ಹಳೇ ಬಸ್‌ ನಿಲ್ದಾಣದಲ್ಲಿನ ಬಸ್‌ಗಳ ಸಂಚಾರ ಸಹ ಸಂಪೂರ್ಣ ಸ್ಥಗಿತವಾಗಲಿದೆ. ಬಿಆರ್‌ಟಿಎಸ್‌ ಚಿಗರಿ ಬಸ್‌ ಹಾಗೂ ಇತರ ಬಸ್‌ಗಳ ನಿಲ್ದಾಣಕ್ಕೆ ಪರ್ಯಾಯ ವ್ಯವಸ್ಥೆ ಆಗಲಿದೆ.

‘2024ರ ಮಾರ್ಚ್‌ನಲ್ಲೇ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಆಗಬೇಕಿತ್ತು. ಕೆಲ ತಾಂತ್ರಿಕ ಸಮಸ್ಯೆ ಮತ್ತು ಎಎಸ್‌ಐ ಒಬ್ಬರು ಮೃತಪಟ್ಟ ಕಾರಣ ವಿಳಂಬವಾಗಿದೆ. ಕೆಲ ದಿನಗಳ ಹಿಂದೆ ಗುತ್ತಿಗೆ ಪಡೆದ ಕಂಪನಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಸಭೆ ನಡೆಸಿದ್ದು, ಕಾಮಗಾರಿ ಶೀಘ್ರ ಮುಕ್ತಾಯ ಮಾಡಲು ಸೂಚಿಸಲಾಗಿದೆ. ಕೋರ್ಟ್‌ ವೃತ್ತದಿಂದ ಗಾಳಿದುರ್ಗಮ್ಮ ದೇವಸ್ಥಾನದವರೆಗಿನ ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋರ್ಟ್‌ ವೃತ್ತದಿಂದ ಗಾಳಿದುರ್ಗಮ್ಮ ವೃತ್ತದವರೆಗಿನ ಮೇಲ್ಸೇತುವೆಗೆ 80 ಗರ್ಡರ್‌ಗಳನ್ನು ಅಳವಡಿಸಬೇಕಿದೆ. ಅದೇ ವೇಳೆ ಚನ್ನಮ್ಮ ವೃತ್ತದ ಸುತ್ತಲು ರೋಟರ್‌ ನಿರ್ಮಾಣ ಕಾಮಗಾರಿ ನಡೆಯಲಿದೆ.  ಜೊತೆಗೆ ಒಳಚರಂಡಿ, ರಸ್ತೆ, ಗಟಾರ ಕಾಮಗಾರಿಯನ್ನೂ ಪೂರ್ಣಗೊಳಿಸಲು ಹೇಳಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎಂದು, ಚನ್ನಮ್ಮ ವೃತ್ತದ ಕಾರವಾರ ಹಾಗೂ ಬೆಂಗಳೂರು ರಸ್ತೆಯನ್ನು ಮುಕ್ತವಾಗಿಡುತ್ತೇವೆ’ ಎಂದು ವಿವರಿಸಿದರು.

ಸಚಿವರ ಮಾತಿಗೂ ಇಲ್ಲ ಸ್ಪಂದನೆ: ತಿಂಗಳ ಹಿಂದೆ ಪುನರಾರಂಭವಾಗಿದ್ದ ಮೇಲ್ಸೇತುವೆ ಕಾಮಗಾರಿ, ಇದೀಗ ಮತ್ತೆ ಸ್ಥಗಿತವಾಗಿದೆ. ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು,  ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಬಾಳಿಕೆ ಕ್ಷೀಣಿಸುತ್ತಿದೆ.

‘ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿ ಬೇಗ ಮುಗಿಸಿ ಎಂದು ಸೂಚಿಸಿದರೂ ಪ್ರಯೋಜನ ಆಗುತ್ತಿಲ್ಲ. ಯಾಕೆ ಕಾಮಗಾರಿ ಸ್ಥಗಿತವಾಯಿತು ಎಂಬುದು ಗೊತ್ತಿಲ್ಲ’ ಎಂದು ಅಸೋಷಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ ತಿಳಿಸಿದರು.

ಎನ್‌ಎಚ್‌ ಪಿಡಬ್ಲ್ಯೂಡಿಯ ಸೂಪರಿಂಡೆಂಟ್‌ ಎಂಜಿನಿಯರ್‌ ಅವರನ್ನು ಕಾಮಗಾರಿಯ ಉಸ್ತುವಾರಿಯನ್ನಾಗಿ ಮಾಡಿದ್ದು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಅವರದ್ದು.
ಮಹೇಶ ಟೆಂಗಿನಕಾಯಿ ಶಾಸಕ

‘10 ದಿನಗಳಲ್ಲಿ ಕಾಮಗಾರಿ ಆರಂಭ’

‘ಪೊಲೀಸ್‌ ಇಲಾಖೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಬಿಆರ್‌ಟಿಎಸ್‌ ಹು–ಧಾ ಮಹಾನಗರ ಪಾಲಿಕೆ ಝಂಡು ಕಂಪನಿ ಎನ್‌ಎಚ್‌ ಪಿಡಬ್ಲ್ಯೂಡಿ ಜಂಟಿಯಾಗಿ ಪರಿಶೀಲನೆ ನಡೆಸಿದ್ದು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕುರಿತು ಎರಡು ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಹೊಸೂರು ವೃತ್ತದಿಂದ ಚನ್ನಮ್ಮ ವೃತ್ತ ಹಾಗೂ ಚನ್ನಮ್ಮ ವೃತ್ತದಿಂದ ವಿಜಯಪುರ ರಸ್ತೆವರೆಗಿನ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆ ಪಡೆದ ಕಂಪನಿ ಮೂರು–ನಾಲ್ಕು ತಿಂಗಳು ಕಾಲಾವಕಾಶ ಕೇಳಿದೆ. ಆ ಕುರಿತು ವಿವಿಧ ಇಲಾಖೆಗಳ ಸಮನ್ವಯದಿಂದ ಸಿದ್ಧಪಡಿಸಿದ ಪ್ರಸ್ತಾವ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ವಾಹನಗಳ ಸಂಚಾರ ಮತ್ತು ಜನರಿಗೆ ಸಮಸ್ಯೆಯಾಗದ ರೀತಿ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುತ್ತೇವೆ. ಹತ್ತು ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.