ADVERTISEMENT

ಹುಬ್ಬಳ್ಳಿ | ಕ್ರಿಕೆಟ್ ಬೆಳವಣಿಗೆ, ಸೌಲಭ್ಯಕ್ಕೆ ಒತ್ತು: ವೀರಣ್ಣ ಸವಡಿ

ಕೆಎಸ್‌ಸಿಎ ಧಾರವಾಡ ವಲಯದ ನೂತನ ನಿಮಂತ್ರಕ ವೀರಣ್ಣ ಸವಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:11 IST
Last Updated 10 ಡಿಸೆಂಬರ್ 2025, 5:11 IST
ವೀರಣ್ಣ ಸವಡಿ
ವೀರಣ್ಣ ಸವಡಿ   

ಹುಬ್ಬಳ್ಳಿ: ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಧಾರವಾಡ ವಲಯದಲ್ಲಿ ಕ್ರಿಕೆಟ್‌ ಬೆಳವಣಿಗೆ ಮತ್ತು ಮೂಲಸೌಲಭ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗುವುದು’ ಎಂದು ಧಾರವಾಡ ವಲಯದ ನೂತನ ನಿಮಂತ್ರಕ ವೀರಣ್ಣ ಸವಡಿ ಹೇಳಿದರು.

‘ಧಾರವಾಡ ವಲಯ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿವೆ. ಇಲ್ಲಿ ಕ್ರಿಕೆಟ್ ಕೆಟ್ಟ ಸ್ಥಿತಿಯಲ್ಲಿದ್ದು, ಅದರ ಸುಧಾರಣೆಗೆ ಚಟುವಟಿಕೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ವಿವಿಧ ವಯೋಮಾನದವರ ಅಂತರ ಕ್ಲಬ್‌, ಮೊದಲ, ಎರಡು, ಮೂರು ಮತ್ತು ನಾಲ್ಕನೇ ಡಿವಿಷನ್‌ ಟೂರ್ನಿಗಳನ್ನು ಆಯೋಜಿಸಲು ಇಲ್ಲಿ ಅಗತ್ಯ ಕ್ರೀಡಾಂಗಣಗಳಿವೆ. ಅವುಗಳನ್ನು ಬಳಸಿ ನಿರಂತರವಾಗಿ ಪಂದ್ಯಗಳನ್ನು ಆಯೋಜಿಸಲಾಗುವುದು’ ಎಂದರು.  

ADVERTISEMENT

‘ಕ್ಯಾಲೆಂಡರ್‌ ವರ್ಷದಲ್ಲಿ ಏಪ್ರಿಲ್‌ನಿಂದ ಜೂನ್‌ ಒಳಗೆ ವಿವಿಧ ವಯೋಮಾನದವರ ಪಂದ್ಯಗಳನ್ನು ನಡೆಸಿದರೆ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ನಡೆಯುವ ಆಯ್ಕೆ ಪಂದ್ಯಗಳಿಗೆ ಅನುಕೂಲವಾಗುತ್ತದೆ. ನಿರಂತರ ಪಂದ್ಯಗಳು ನಡೆದು ಆಟಗಾರರ ಪ್ರದರ್ಶನ ಉತ್ತಮವಾಗಿದ್ದರೆ, ಆಯ್ಕೆದಾರರು ಸುಲಭವಾಗಿ ಆಟಗಾರರನ್ನು ಆಯ್ಕೆ ಮಾಡಬಹುದು. ಪ್ರತಿಭಾವಂತರು ಅವಕಾಶದಿಂದ ವಂಚಿತರಾಗುವುದಿಲ್ಲ’ ಎಂದರು.

‘ಶೀಘ್ರವೇ ವಲಯ ಸಮಿತಿ ರಚನೆಯಾಗಲಿದೆ. ಕೆಎಸ್‌ಸಿಎ ಪಂದ್ಯಗಳು ಮುಗಿದ ಬಳಿಕ ಇತರ ಕ್ಲಬ್‌ಗಳಿಗೆ ಮುಕ್ತ ಟೂರ್ನಿ ಆಯೋಜಿಸಲು ಕ್ರೀಡಾಂಗಣ ಒದಗಿಸಲಾಗುವುದು. ಈ ವಲಯದಲ್ಲಿ 40ಕ್ಕೂ ಹೆಚ್ಚು ಕ್ರಿಕೆಟ್‌ ಕ್ಲಬ್‌ಗಳಿವೆ. ಆಯ್ಕೆದಾರರು, ಅಂಪೈರ್‌,  ಟೂರ್ನಮೆಂಟ್‌, ಕ್ರೀಡಾಂಗಣ ಸಮಿತಿ ರಚಿಸಿ ಎಲ್ಲ ಕ್ಲಬ್‌ಗಳನ್ನು ಒಳಗೊಳ್ಳುವಂತೆ ಮಾಡಲಾಗುವುದು’ ಎಂದರು.

‘ಕೆಎಸ್‌ಸಿಎ ವತಿಯಿಂದ ಈಗಾಗಲೇ ಹುಬ್ಬಳ್ಳಿ, ಬೆಳಗಾವಿಯಲ್ಲಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಎರಡೂ ಕಡೆ ಕ್ಲಬ್ ಹೌಸ್‌ ಕಾಮಗಾರಿ ಸೇರಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲಾಗುವುದು’ ಎಂದರು.

‘ಈ ಹಿಂದೆ ಇಲ್ಲಿ ಕೆಪಿಎಲ್ ಪಂದ್ಯಗಳು ನಡೆದಿದ್ದವು. ಹುಬ್ಬಳ್ಳಿ, ಬೆಳಗಾವಿಯಲ್ಲಿ ಹೆಚ್ಚು ಪಂದ್ಯಗಳನ್ನು ನಡೆಸುವಂತೆ ಒತ್ತಡ ಹಾಕಲಾಗುವುದು. ಇಲ್ಲಿ ರಣಜಿ ಟ್ರೋಫಿ ಪಂದ್ಯಗಳು ಅಲ್ಲದೇ, ಲಿಸ್ಟ್‌ ‘ಎ’ ಪಂದ್ಯ ನಡೆಸಲು ಕೋರಲಾಗುವುದು’ ಎಂದರು.

ಅತಿ ಹೆಚ್ಚು ಮತ ಪಡೆದು ಗೆದ್ದಿದ್ದಕ್ಕೆ ಖುಷಿಯಾಗಿದೆ. ಕೆಎಸ್‌ಸಿಎ ಜತೆ ಎರಡು ದಶಕಗಳಿಂದ ಹೊಂದಿರುವ ಬಾಂಧವ್ಯ ಹಿರಿಯರು ಕಿರಿಯರು ಜತೆ ಉತ್ತಮ ಒಡನಾಟದಿಂದ ಇದು ಸಾಧ್ಯವಾಗಿದೆ
ವೀರಣ್ಣ ಸವಡಿ ನಿಮಂತ್ರಕ ಕೆಎಸ್‌ಸಿಎ ಧಾರವಾಡ ವಲಯ
ಬಾಲಕಿಯರು ಮಹಿಳೆಯರ ಕ್ರಿಕೆಟ್‌ಗೆ ಉತ್ತೇಜನ
‘ಧಾರವಾಡ ವಲಯದಲ್ಲಿ ಬಾಲಕಿಯರು ಮಹಿಳೆಯರು ಕ್ರಿಕೆಟ್ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. 12 14 ಮತ್ತು 16 ವಯೋಮಾನದೊಳಗಿನ ಬಾಲಕಿಯರ ಅಂತರ ಕ್ಲಬ್ ಪಂದ್ಯಗಳನ್ನು ಆಯೋಜಿಸಲಾಗುವುದು. ಬಾಲಕಿಯರು ಮಹಿಳೆಯರ ಅಂತರ ವಲಯ ಪಂದ್ಯಗಳನ್ನು ನಡೆಸುವಂತೆ ಕೆಎಸ್‌ಸಿಎ ಆಡಳಿತ ಮಂಡಳಿಗೆ ಮನವಿ ಮಾಡಲಾಗುವುದು’ ಎಂದು ವೀರಣ್ಣ ಸವಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.