ಹುಬ್ಬಳ್ಳಿ: ಕೃಷ್ಣ, ಪರಮೇಶ್ವರ, ವಿಷ್ಣು, ರಾಮನ ರೂಪಿಯಾಗಿ, ಅಸುರ ಸಂಹಾರಿಯಾಗಿ, ಗೋವು, ನವಿಲು, ಸಿಂಹದ ಮೇಲೆ ವಿರಾಜಮಾನನಾಗಿ.. ಹೀಗೆ ಹಲವು ಭಂಗಿಗಳಲ್ಲಿರುವ ಗಣೇಶ ಮೂರ್ತಿಗಳನ್ನು ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿವೆ. ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಮಂಟಪದ ಸ್ಥಳಕ್ಕೆ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ದೀಪಾಲಂಕಾರ, ವೈವಿಧ್ಯಮಯ ಅಲಂಕಾರದ ಹೂ–ಬಳ್ಳಿಗಳು, ಬಣ್ಣ– ಬಣ್ಣದ ಕಾಗದ, ಅಲಂಕೃತ ವಸ್ತುಗಳು, ತಳಿರು ತೋರಣಗಳಿಂದ ಮಂಟಪಗಳನ್ನು ಶೃಂಗರಿಸಿ ಗಣೇಶ ಮೂರ್ತಿಗಳನ್ನು ಇರಿಸಲಾಗಿದೆ.
ಗಣೇಶ ಪ್ರತಿಷ್ಠಾಪನೆ ದಿನ ಬುಧವಾರ ಎಲ್ಲೆಡೆ ಸಂಭ್ರಮ ಮನೆಮಾಡಿತ್ತು. ತುಂತುರು ಮಳೆ ನಡುವೆಯೇ ಗಣೇಶ ಮೂರ್ತಿಗಳನ್ನು ತಂದು ನಗರದ 662 ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳಲ್ಲಿ ಸಂಭ್ರಮದಿಂದ ಪ್ರತಿಷ್ಠಾಪನೆ ಮಾಡಲಾಗಿದೆ.
ಕೆಲವರು ನಡೆದುಕೊಂಡು ಹೋಗಿ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸಿದರೆ, ಇನ್ನೂ ಕೆಲವರು ವಾಹನಗಳಲ್ಲಿ ಮೂರ್ತಿಗಳನ್ನಿಟ್ಟು ಮೆರವಣಿಗೆ ಮಾಡುತ್ತಾ, ಡಿ.ಜೆ. ಸಂಗೀತಕ್ಕೆ ಕುಣಿಯುತ್ತಾ, ಗಣೇಶನಿಗೆ ಜೈಕಾರ ಕೂಗುತ್ತಾ ತಂದು ಪ್ರತಿಷ್ಠಾಪನೆ ಮಾಡಿದರು.
ಮೋದಕ, ಕರಿಗಡುಬು ಸೇರಿದಂತೆ ವಿಶೇಷ ಖಾದ್ಯಗಳನ್ನು ನೈವೇದ್ಯ ರೂಪದಲ್ಲಿ ಗಣೇಶನಿಗೆ ಅರ್ಪಿಸಿ, ಪೂಜೆ ಸಲ್ಲಿಸಿದರು. ಮಕ್ಕಳು, ಯುವಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಕೆಲವರು ಬುಧವಾರ ಸಂಜೆ, ಇನ್ನೂ ಕೆಲವರು ಎರಡನೇ ದಿನವಾದ ಗುರುವಾರ ಸಂಜೆ ವಿಸರ್ಜನೆ ಮಾಡಿದರು. ಉಳಿದಂತೆ ಸಾರ್ವಜನಿಕ ಗಣಪತಿಗಳನ್ನು 5, 7, 9, 11, 15, 21ನೇ ದಿನ ವಿಸರ್ಜಿಸಲಾಗುತ್ತದೆ.
ಗುರುವಾರದಂದು ನಗರ ಸೇರಿ ವಿವಿಧೆಡೆಯಿಂದ ಬಂದಿದ್ದ ಜನರು, ಸಾಲಿನಲ್ಲಿ ನಿಂತು ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನ ಪಡೆದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕೆಲವೆಡೆ ಅನ್ನಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮಠಾಠ ಗಲ್ಲಿಯ ಹುಬ್ಬಳ್ಳಿಚಾ ಮಹಾರಾಜ, ದಾಜಿಬಾನಪೇಟೆಯಲ್ಲಿನ ಹುಬ್ಬಳ್ಳಿ ಕಾ ರಾಜಾ, ನ್ಯೂಮ್ಯಾದಾರ ಓಣಿಯ ಹುಬ್ಬಳ್ಳಿ ಕಾ ಸಪ್ತಸಾಮ್ರಾಟ್, ಗಣೇಶಪೇಟ ಮಟ್ಟಿ ಓಣಿಯಲ್ಲಿ ಗಣೇಶ ಮಿತ್ರ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ, ಬಾರದಾನ ಸಾಲ, ಜವಳಿಸಾಲ, ದುರ್ಗದಬೈಲ್‌ನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿವೆ.
ಸರಾಫ್ ಗಟ್ಟಿಯಲ್ಲಿ ಗಣೇಶೋತ್ಸವ ಮಂಡಳಿಯಿಂದ 121 ಕೆ.ಜಿ. ಬೆಳ್ಳಿ ಗಣೇಶ ಮೂರ್ತಿ, ಶಿಂಪಿ ಗಲ್ಲಿಯಲ್ಲಿ ಮಾರುತಿ ಯುವಕ ಸೇವಾ ಸಂಘದಿಂದ 75 ಕೆ.ಜಿ.ಯ ಹಾಗೂ ಶೀಲವಂತರ ಓಣಿಯಲ್ಲಿ ವರಸಿದ್ಧಿ ವಿನಾಯಕ ಮಂಡಳಿಯಿಂದ 41 ಕೆ.ಜಿ ಬೆಳ್ಳಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಗಮನಸೆಳೆದ ಮೂಷಿಕನ ಪ್ರತಿಕೃತಿ: ಪ್ಲಾಸ್ಟಿಕ್ ಬಳಕೆ ತಡೆಗೆ ಜನಜಾಗೃತಿ ಮೂಡಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ನಿರುಪಯುಕ್ತ ಸುಮಾರು 10 ಸಾವಿರ ಪ್ಲಾಸ್ಟಿಕ್ ಬಾಟಲಿ ಬಳಸಿ ತಯಾರಿಸಿದ ಮೂಷಕನ ಪ್ರತಿಕೃತಿಯನ್ನು ರಾಣಿ ಚೆನ್ನಮ್ಮ ವೃತ್ತದ ರಸ್ತೆ ಬದಿ ಇಡಲಾಗಿತ್ತು. ಸಾರ್ವಜನಿಕರು ಪ್ರತಿಕೃತಿ ಎದುರು ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಆಕರ್ಷಕವಾಗಿ ಮಂಟಪ ಅಲಂಕಾರ ಕೆಲವೆಡೆ ಬೆಳ್ಳಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸಾರ್ವಜನಿಕರಿಗೆ ಅನ್ನಪ್ರಸಾದ ವ್ಯವಸ್ಥೆ
-ಗಮನಸೆಳೆಯುವ ರೂಪಕ
ನಗರದಲ್ಲಿ ಕೆಲವು ಗಜಾನನ ಮಂಡಳಿಗಳಿಂದ ಗಣೇಶೋತ್ಸವದ ಜೊತೆಗೆ ಧಾರ್ಮಿಕ ಐತಿಹಾಸಿಕ ಹಿನ್ನೆಲೆಯ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಥಾರೂಪಕ ಪ್ರದರ್ಶಿಸಲಾಗುತ್ತಿದೆ. ಹಿರೇಪೇಟ ಬೂಸಪೇಟ ಕಂಚಗಾರ ಗಲ್ಲಿಯ ಗಣೇಶೋತ್ಸವ ಮಂಡಳಿಯಿಂದ ಮಹಾಕುಂಭ ಮೇಳದ ಕಥಾರೂಪಕ ಪರಮೇಶ್ವರನು ಮಾರ್ತಾಂಡ ಹಾಗೂ ಪಾರ್ವತಿಯು ಗಂಗೆ ಮಾಳವ್ವಳಾಗಿ ಭೂಮಿಗೆ ಬಂದು ಮಣಿ–ಮಲ್ಲಾಸುರ ರಾಕ್ಷಸರ ಸಂಹರಿಸಿ ಮೈಲಾರಲಿಂಗನಾಗಿ ಪರಮೇಶ್ವರನು ಮೈಲಾರದಲ್ಲಿ ನೆಲೆಸಿದ ಕುರಿತು ಸ್ಟೇಷನ್ ರಸ್ತೆಯ ಗಣೇಶೋತ್ಸವ ಮಂಡಳಿಯಿಂದ ಕಥಾರೂಪಕ ಪ್ರದರ್ಶಿಸಲಾಗುತ್ತಿದೆ. ಶೀಲವಂತರ ಓಣಿಯ ವರಸಿದ್ಧಿ ವಿನಾಯಕ ಮಂಡಳಿಯಿಂದ ಅಯ್ಯಪ್ಪ ಸ್ವಾಮಿಯ ಜನನ ಲೀಲೆ ಮಹಿಷ ಮರ್ಧಿನಿ ಸಂಹಾರದ ಕುರಿತ 12 ನಿಮಿಷದ ಕಥಾರೂಪಕವನ್ನು ಸಂಜೆ 6.30ರಿಂದ ರಾತ್ರಿ 11ರವರೆಗೆ ಪ್ರದರ್ಶಿಸಲಾಗುತ್ತಿದೆ.
ಮೂಷಿಕನಿಗೆ ಮಾಂಸಹಾರ ನೈವೇದ್ಯ
ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನಿಗೆ ಚತುರ್ಥಿಯಂದು ಕಡಬಿನ ನೈವೇದ್ಯ ಅರ್ಪಿಸಿದರೆ ಮರುದಿನ ‘ಇರಿವಾರ’ದಂದು ಗಣೇಶನ ವಾಹನ ಮೂಷಿಕನಿಗೆ ಮಾಂಸದಿಂದ ತಯಾರಿಸಿದ ಭಕ್ಷ್ಯ ಭೋಜ್ಯಗಳನ್ನು ಸಾವಜಿ ಸಮುದಾಯದ ಕೆಲವು ಕುಟುಂಬದವರು ನೈವೇದ್ಯವಾಗಿ ಅರ್ಪಿಸಿದರು. ‘ಇಲಿವಾರದಂದು ಮೂಷಿಕನಿಗೆ ‘ಮಟನ್ ಚಿಕನ್ ಖಾದ್ಯಗಳ ನೈವೇದ್ಯ ಮಾಡಲಾಗುತ್ತದೆ. ಶ್ರಾವಣದಲ್ಲಿ ಒಂದು ತಿಂಗಳ ಕಾಲ ಮಾಂಸಹಾರ ಸೇವನೆ ಬಿಡುವ ಸಾವಜಿ ಸಮುದಾಯದವರು ಶ್ರಾವಣ ಮುಗಿದ ಬಳಿಕ ಗಣೇಶ ಹಬ್ಬ ಬಂದಿದ್ದರಿಂದ ಗಣೇಶ ಪ್ರತಿಷ್ಠಾಪನೆಯಾದ ಮರುದಿನ ಮಾಂಸಾಹಾರ ಸೇವನೆ ಆರಂಭಿಸುತ್ತಾರೆ. ಆಗ ಮೂಷಿಕನಿಗೂ ಮಾಂಸದಿಂದ ತಯಾರಿಸಿದ ಆಹಾರವನ್ನು ನೈವೇದ್ಯವಾಗಿ ಇಡುತ್ತಾರೆ. ಪೂರ್ವಿಕರ ಕಾಲದಿಂದಲೂ ಈ ಪದ್ಧತಿ ಪಾಲಿಸಿಕೊಂಡು ಬಂದಿದ್ದೇವೆ’ ಎಂದು ಸಾವಜಿ ಸಮುದಾಯದ ಮುಖಂಡ ನಾಗೇಶ ಕಲಬುರಗಿ ಹೇಳಿದರು.
ರಾಣಿ ಚನ್ನಮ್ಮ ಮೈದಾನದ ಗಣೇಶ ಮೂರ್ತಿ ವಿಸರ್ಜನೆ
ಇಂದು ನಗರದ ರಾಣಿ ಚನ್ನಮ್ಮ ಮೈದಾನದಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಪ್ರತಿಷ್ಠಾಪಿಸಿರುವ ಮೂರು ದಿನಗಳ ‘ಕೃಷ್ಣರೂಪಿ’ ಗಣೇಶ ಮೂರ್ತಿಯನ್ನು ಇಂದು ವಿಸರ್ಜಿಸಲಾಗುತ್ತದೆ. ವಿಸರ್ಜನಾ ಮೆರವಣಿಗೆಯಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಗಣ್ಯರು ಭಾಗವಹಿಸುವರು. ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಆರಂಭವಾಗಲಿದ್ದು 22 ಕಲಾತಂಡಗಳು ಭಾಗವಹಿಸಿ ಮೆರಗು ನೀಡಲಿವೆ. ಮೆರವಣಿಗೆ ಮೂಲಕ ತೆರಳಿ ಇಂದಿರಾ ಗಾಜಿನ ಅರಮನೆ ಹಿಂಬದಿಯ ಬಾವಿಯಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ನಗರದ ಮೂರುಸಾವಿರ ಮಠದಿಂದ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ್ ನೇತೃತ್ವ ವಹಿಸಿದ್ದರು. ಮೆರವಣಿಗೆ ಮಾರ್ಗದುದ್ದಕ್ಕೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಸದ ಜಗದೀಶ ಶೆಟ್ಟರ್ ಶಾಸಕ ಮಹೇಶ ಟೆಂಗಿನಕಾಯಿ ಮೇಯರ್ ಜ್ಯೋತಿ ಪಾಟೀಲ ಉಪ ಮೇಯರ್ ಸಂತೋಷ ಚವ್ಹಾಣ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭೇಟಿ ಗಣೇಶನ ದರ್ಶನ ಪಡೆದರು. ಸಂಜೆ ಗೊಂದಳ ಕಾರ್ಯಕ್ರಮ ಗಂಗಾ ಆರತಿ ನಡೆಯಿತು. ಗಣೇಶ ಮೂರ್ತಿಗೆ ಗುರುವಾರ ವಿಶೇಷ ಪೂಜೆ ಅಭಿಷೇಕ ಮಹಾಮಂಗಳಾರತಿ ನೆರವೇರಿಸಲಾಯಿತು. ನಗರದ ಪ್ರದೇಶ ಹಾಗೂ ಗ್ರಾಮೀಣ ಭಾಗದ ಸಾವಿರಾರು ಜನರು ಭೇಟಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಘೋಷವಾದಕರಿಂದ ಸಂಜೆ ಗಣೇಶವಂದನ ಕಾರ್ಯಕ್ರಮ ಗಂಗಾರತಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.