ಚಿನ್ನ
ಹುಬ್ಬಳ್ಳಿ: ಇಲ್ಲಿನ ಉಣಕಲ್‌ನ ಧರ್ಮಪುರಿ ಬಡಾವಣೆಯ ಲೇಕ್‌ವ್ಯೂವ್ ಅಪಾರ್ಟ್‌ಮೆಂಟ್‌ನ ವೀಣಾ ಉಣಕಲ್ ಅವರ ಮನೆ ಬಾಗಿಲಿನ ಬೀಗ ಮುರಿದು, ₹1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಸುಗಲ್ ರಸ್ತೆ ಪಾರಸವಾಡಿ ಕಂದಕೂರು ಕಾಲೊನಿಯ ವ್ಯಾಪಾರಿ ಪ್ರಣೀತ ಉಪ್ಪಿನ ಅವರ ಮನೆ ಬಾಗಿಲಿನ ಬೀಗ ಮುರಿದು, ₹2.38 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ, 1,029 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಮಾಡಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಕಳವು: ನಗರದ ಹೊಸೂರು ಕ್ರಾಸ್‌ನಲ್ಲಿ ನವನಗರಕ್ಕೆ ತೆರಳಲೆಂದು ಗಾಮನಗಟ್ಟಿ ಬಸ್ ಹತ್ತಿದ್ದ ರಾಮಲಿಂಗೇಶ್ವರ ನಗರದ ಅರ್ಪಿತಾ ಅವರ ಕೊರಳಲ್ಲಿದ್ದ ₹50ಸಾವಿರ ಮೌಲ್ಯದ ಚಿನ್ನದ ಸರ ಕಳವು ಮಾಡಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಇ-ಮೇಲ್ ಐಡಿ ಅಪ್‌ಡೇಟ್ ಮಾಡುವುದಾಗಿ ಲಿಂಕ್ ಕಳುಹಿಸಿದ ವ್ಯಕ್ತಿಯೊಬ್ಬ, ಇಲ್ಲಿನ ಗದಗ ರಸ್ತೆಯ ನೆಹರೂ ನಗರದ ಅಲ್ಪಾ ರಾಮೋಜಿ ಅವರ ಯುಪಿಐ ಹ್ಯಾಕ್ ಮಾಡಿ ಆನ್‌ಲೈನ್ ಮೂಲಕ ₹94 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಅಲ್ಪಾ ರಾಮೋಜಿ ಅವರು ಇ-ಮೇಲ್ ಐಡಿ ಅಪ್‌ಡೇಟ್ ಮಾಡಲು ಯತ್ನಿಸಿದಾಗ, ವಂಚಕನು ಅವರ ಮೊಬೈಲ್ ನಂಬರ್‌ಗೆ ಲಿಂಕ್ ಕಳುಹಿಸಿ ಡೆಬಿಟ್ ಕಾರ್ಡ್ ವಿವರ ಪಡೆದಿದ್ದಾನೆ. ಒಟಿಪಿ ಬಾರದಿದ್ದರೂ ಟ್ರೇಡಿಂಗ್ ಕಂಪನಿ ಹೆಸರಲ್ಲಿರುವ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ: ಉದ್ಯಮದಲ್ಲಿ ನಷ್ಟವಾಗಿದ್ದಕ್ಕೆ ಮನನೊಂದು ನಗರದ ನಿವಾಸಿ ದತ್ತಾತ್ರೇಯ ವಾಗಲೆ(42) ಮರಾಠಗಲ್ಲಿಯ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದತ್ತಾತ್ರೇಯ ಅವರು ಮಂಗಳವಾರ ಬೆಳಿಗ್ಗೆ 8.30ರ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮೃತ ದೇಹವನ್ನು ಕೆಎಂಸಿ–ಆರ್‌ಐ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.