ADVERTISEMENT

ಹುಬ್ಬಳ್ಳಿ: ಪಾಲಿಕೆಯ ಸಭಾಭವನವೇ ಅಸ್ಥಿರ

ಎಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡದಿಂದ ವರದಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 4:41 IST
Last Updated 30 ನವೆಂಬರ್ 2022, 4:41 IST
ಹುಬ್ಬಳ್ಳಿಯಲ್ಲಿರುವ ಮಹಾನಗರ ಪಾಲಿಕೆಯ ಸಭಾಭವನದ ಚಾವಣಿ ಕಿತ್ತು ಹೋಗಿದ್ದು, ತುಕ್ಕು ಹಿಡಿದಿರುವ ಕಬ್ಬಿಣ ಕಾಣುತ್ತಿದೆ
ಹುಬ್ಬಳ್ಳಿಯಲ್ಲಿರುವ ಮಹಾನಗರ ಪಾಲಿಕೆಯ ಸಭಾಭವನದ ಚಾವಣಿ ಕಿತ್ತು ಹೋಗಿದ್ದು, ತುಕ್ಕು ಹಿಡಿದಿರುವ ಕಬ್ಬಿಣ ಕಾಣುತ್ತಿದೆ   

ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿರುವ ಸಾಮಾನ್ಯ ಸಭೆಯ ಸಭಾಂಗಣವು ಅಸ್ಥಿರತೆಯಿಂದ ಕೂಡಿದೆ! ಹಳೆಯದಾದ ಈ ಕಟ್ಟಡದಲ್ಲಿರುವ ಸಭಾಂಗಣ ಸ್ಥಿರವಾಗಿಲ್ಲ ಎಂದು ಎಂಜಿನಿಯರಿಂಗ್‌ ಕಾಲೇಜಿನ ತಜ್ಞರ ತಂಡ ವರದಿ ನೀಡಿದೆ. ಇದೇ ಕಾರಣಕ್ಕಾಗಿ, ನ. 30ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಹುಬ್ಬಳ್ಳಿಯ ಬದಲು ಧಾರವಾಡದಲ್ಲಿ ನಿಗದಿಪಡಿಸಲಾಗಿದೆ.

1970ರ ದಶಕದಲ್ಲಿ ನಿರ್ಮಾಣವಾದ ಕಟ್ಟಡ ಐವತ್ತು ವರ್ಷಕ್ಕಿಂತ ಹಳೆಯದಾಗಿದೆ. ಸಭಾಂಗಣದ ಗೋಡೆಗಳು ಶಿಥಿಲಗೊಂಡು ಕೆಲವೆಡೆ ಮಳೆ ನೀರು ಕೂಡ ಸೋರುತ್ತಿರುವ ವರದಿಯಾಗಿತ್ತು. ಚಾವಣಿಗೆ ಮಾಡಿರುವ ಪ್ಲಾಸ್ಟರಿಂಗ್ ಕಿತ್ತು ಹೋಗಿ, ಅದರ ಪುಡಿಗಳು ನೆಲಕ್ಕುರುಳಿತ್ತು. ಚಾವಣಿಯ ಕಬ್ಬಿಣ ಸಹ ತುಕ್ಕು ಹಿಡಿದು ಬಿಳಿಚಿಕೊಂಡಿದ್ದವು. ಹಿಂದಿನ ಸಾಮಾನ್ಯ ಸಭೆಗಳಲ್ಲಿ ಸದಸ್ಯರು ಈ ಬಗ್ಗೆ ಗಮನ ಸೆಳೆದಿದ್ದರು.

‘ಸಭಾಂಗಣವು ಸಾಮಾನ್ಯ ಸಭೆ ನಡೆಸಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಪಾಲಿಕೆ ನಿರ್ಧರಿಸಿತ್ತು. ಸಭಾಂಗಣ ಪರಿಶೀಲಿಸಿದ್ದ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡವು, ಸಭಾಂಗಣವು ಅಸ್ಥಿರತೆಯಿಂದ ಕೂಡಿದೆ ಎಂದು ವರದಿ ಅಧಿಕಾರಿಗಳಿಗೆ ಇತ್ತೀಚೆಗೆ ವರದಿ ನೀಡಿದೆ. ಜೊತೆಗೆ, ಅಲ್ಲಿ ಸಭೆ ನಡೆಸಬೇಡಿ ಎಂದು ಸಹ ಸಲಹೆ ನೀಡಿತ್ತು’ ಎಂದು ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ತಿಮ್ಮಪ್ಪ ಈ. ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಲಹೆ ಮೇರೆಗೆ ಸ್ಥಳಾಂತರ:‘ತಜ್ಞರ ಸಲಹೆ ಮೇರೆಗೆ ಸಾಮಾನ್ಯ ಸಭೆಯನ್ನು ಧಾರವಾಡಕ್ಕೆ ಸ್ಥಳಾಂತರಿಸಿದ್ದೇವೆ. ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಕನ್ನಡ ಭವನ ಅಥವಾ ಕಾಟನ್ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿಯೂ ಸಭೆ ನಡೆಸಬಹುದು ಎಂಬ ಸಲಹೆಗಳು ಬಂದಿದ್ದವು. ಆದರೆ, ಧಾರವಾಡದಲ್ಲಿರುವ ಪಾಲಿಕೆಯ ಕಚೇರಿ ಆವರಣದಲ್ಲಿ ನವೀಕೃತ ಸಭಾಂಗಣ ಇರುವಾಗ ಬೇರೆ ಕಡೆ ಬೇಡ ಎಂದು ತೀರ್ಮಾನಿಸಿದೆವು’ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ಕಚೇರಿ ಸ್ಥಳಾಂತರಕ್ಕೆ ನೌಕರರ ಸಂಘ ಒತ್ತಾಯ

‘ಸಭಾಂಗಣ ಇರುವ ಕಟ್ಟಡ ಅತ್ಯಂತ ಹಳೆಯದಾಗಿದೆ. ಇಲ್ಲಿಯೇ ಶಾಸಕ ಪ್ರಸಾದ ಅಬ್ಬಯ್ಯ, ಮೇಯರ್, ಉಪ ಮೇಯರ್, ಸಭಾ ನಾಯಕ, ವಿರೋಧ ಪಕ್ಷದ ನಾಯಕ,ಪರಿಷತ್ ಕಾರ್ಯದರ್ಶಿ ಕಚೇರಿ ಸೇರಿದಂತೆ ಪಾಲಿಕೆಯ ಹತ್ತಕ್ಕೂ ಹೆಚ್ಚು ಕಚೇರಿಗಳಿವೆ. ಕೆಲವೆಡೆ ಗೋಡೆಗಳು ಶಿಥಿಲಗೊಂಡಿವೆ. ಚಾವಣಿ ಕಿತ್ತು ಹೋಗಿವೆ. ಇಂತಹ ಸ್ಥಳದಲ್ಲಿ ರಾಶಿಗಟ್ಟಲೆ ಕಡತಗಳನ್ನಿಟ್ಟುಕೊಂಡು ಕೆಲಸ ಮಾಡಲು ನೌಕರರಿಗೆ ಭಯವಾಗುತ್ತದೆ. ಈ ಕಟ್ಟಡ ಸ್ಥಿರತೆಯಿಂದ ಕೂಡಿಲ್ಲ ಎಂದು ಹಿಂದೆಯೂ ಕೆಲವರು ವರದಿ ನೀಡಿದ್ದಾರೆ. ಹಾಗಾಗಿ, ಇಲ್ಲಿರುವ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಈ ಕುರಿತು ಮೇಯರ್ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ ಹೇಳಿದರು.

****

ಸಭಾಂಗಣ ಅಸ್ಥಿರವಾಗಿರುವ ಕುರಿತು ತಜ್ಞರ ವರದಿಯನ್ನು ತರಿಸಿಕೊಂಡು ಪರಿಶೀಲಿಸುವೆ. ಇಡೀ ಕಟ್ಟಡ ಅಸ್ಥಿರವಾಗಿದೆಯೇ ಅಥವಾ ಸಭಾಂಗಣ ಮಾತ್ರವೇ ಎಂಬುದರ ಕುರಿತು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು
ಈರೇಶ ಅಂಚಟಗೇರಿ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.