
ಹುಬ್ಬಳ್ಳಿ: ಇಲ್ಲಿನ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಉತ್ಪಾದನಾ ಘಟಕದಿಂದ ಸಿದ್ಧವಾಗುವ ಖಾದಿ ರಾಷ್ಟ್ರಧ್ವಜ ಇ–ಕಾಮರ್ಸ್ ವೇದಿಕೆಯಾದ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.
ಅಮೆಜಾನ್‌ನಲ್ಲಿ ಜ. 24ರಿಂದ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ವಿದೇಶಗಳಲ್ಲಿ ನೆಲಸಿರುವವರು ಕೂಡ ಆನ್‌ಲೈನ್‌ನಲ್ಲಿ ಖಾದಿ ರಾಷ್ಟ್ರಧ್ವಜಗಳನ್ನು ಖರೀದಿಸಬಹುದಾಗಿದೆ.
ಖಾದಿ ರಾಷ್ಟ್ರಧ್ವಜ ಉತ್ತೇಜನಾ ಸಮಿತಿ ಬಳಗದ ಸದಸ್ಯರು ಗ್ರಾಮೋದ್ಯೋಗ ಸಂಸ್ಥೆಯ ಜತೆಗೂಡಿ ಈ ಆನ್‌ಲೈನ್ ಖರೀದಿಗೆ ವೇದಿಕೆ ಹಾಕಿಕೊಟ್ಟಿದ್ದಾರೆ. ಈ ಮೊದಲು ಕ್ಯುಆರ್ ಕೋಡ್ ಮೂಲಕ ಆನ್‌ಲೈನ್‌ಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಧ್ವಜಗಳು ಖರೀದಿಯಾಗಿದ್ದವು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 2021ರಲ್ಲಿ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಯಿತು. ಅಂದಿನಿಂದ ರಾಷ್ಟ್ರದ ಏಕೈಕ ಅಧಿಕೃತ ಖಾದಿ ಬಿಐಎಸ್ ಪ್ರಮಾಣೀಕೃತ ರಾಷ್ಟ್ರಧ್ವಜ ಉತ್ಪಾದನ ಘಟಕದಲ್ಲಿ ತಯಾರಾಗುವ ಧ್ವಜಕ್ಕೆ ಬೇಡಿಕೆ ಕಡಿಮೆಯಾಯಿತು. ಅದನ್ನರಿತ ಕೆಲವರು ಆನ್‌ಲೈನ್ ವೇದಿಕೆಯಲ್ಲಿ ಧ್ವಜ ಮಾರಾಟಕ್ಕೆ ಯೋಜನೆ ರೂಪಿಸಿ, ಇದೀಗ ಅಮೆಜಾನ್‌ಲ್ಲೂ ಮಾರಾಟವಾಗುತ್ತಿದೆ’ ಎಂದು ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಠಪತಿ ಹೇಳಿದರು.
‘ಒಂಬತ್ತು ಭಿನ್ನ ಅಳತೆಯ ರಾಷ್ಟ್ರಧ್ವಜಗಳು ಲಭ್ಯವಿದ್ದು, ಸದ್ಯ ಈಗಿರುವ ದರದಲ್ಲಿಯೇ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ. ಕೊರಿಯರ್ ಶುಲ್ಕವನ್ನು ಗ್ರಾಹಕರು ನೀಡಬೇಕು. ಪ್ರಸ್ತುತ ವರ್ಷ ಸುಮಾರು ₹2 ಕೋಟಿ ಮೌಲ್ಯದ ರಾಷ್ಟ್ರಧ್ವಜ ಮಾರಾಟವಾಗದೆ ಹಾಗೆಯೇ ಉಳಿದಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.