ADVERTISEMENT

ಅಮರಗೋಳದ ಕೆಎಚ್‌ಬಿ 2ನೇ ಹಂತ: ಮೂಲಸೌಕರ್ಯವಿಲ್ಲದೆ ನಿವಾಸಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:26 IST
Last Updated 23 ಜನವರಿ 2026, 8:26 IST
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ 2ನೇ ಹಂತದ ಬಡಾವಣೆಗೆ ತೆರಳುವ ಮಾರ್ಗದಲ್ಲಿ ಜಡ್ಜಸ್ ಕಾಲೊನಿ ಎದುರು ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು  –ಪ್ರಜಾವಾಣಿ ಚಿತ್ರಗಳು: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ 2ನೇ ಹಂತದ ಬಡಾವಣೆಗೆ ತೆರಳುವ ಮಾರ್ಗದಲ್ಲಿ ಜಡ್ಜಸ್ ಕಾಲೊನಿ ಎದುರು ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು  –ಪ್ರಜಾವಾಣಿ ಚಿತ್ರಗಳು: ಗುರು ಹಬೀಬ   

ಹುಬ್ಬಳ್ಳಿ: ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ’ ಎಂಬ ಸಾಲುಗಳನ್ನೇ ಸ್ವಲ್ಪ ಬದಲಾಯಿಸಿ, ‘ಕುರುಚಲು ಕಾಡೊಳಗೆ ಮನೆಯ ಮಾಡಿ ಮೂಲಸೌಲಭ್ಯ ನಿರೀಕ್ಷಿಸಿದೊಡೆಂತಯ್ಯಾ...’ ಎಂಬಂತೆ ಭಾಸವಾಗುತ್ತದೆ ನಗರದ ಅಮರಗೋಳದಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಭಿವೃದ್ಧಿಪಡಿಸಿದ 2ನೇ ಹಂತದ ನಿವಾಸಿಗಳ ಸ್ಥಿತಿ!

ಇಲ್ಲಿಗೆ ತೆರಳುವ ರಸ್ತೆಯಿಂದಲೇ ಸಮಸ್ಯೆಗಳ ಅನಾವರಣವಾಗುತ್ತದೆ. ರಸ್ತೆಗಳು ಹದಗೆಟ್ಟಿವೆ. ಸಮರ್ಪಕ ಕುಡಿಯುವ ನೀರು ಕನಸಿನ ಮಾತಾಗಿದೆ. ರಾತ್ರಿ ಬೀದಿದೀಪಗಳು ಬೆಳಗುವುದನ್ನು ಕಾಣಬೇಕೆಂಬ ಹಂಬಲಕ್ಕೆ ಬೆಂಬಲವಿಲ್ಲವಾಗಿದೆ. ಅನುಕೂಲಕ್ಕೆ ತಕ್ಕಂತೆ ಬಸ್ ಸೌಕರ್ಯವಿಲ್ಲ. ಖಾಲಿ ನಿವೇಶನಗಳು ಕುರುಚಲು ಕಾಡಿನಂತೆ ಕಾಣುತ್ತವೆ.

106 ಎಕರೆ ವಿಸ್ತಾರವಾದ ಬಡಾವಣೆಯಲ್ಲಿ 1,400ಕ್ಕೂ ಅಧಿಕ ನಿವೇಶನಗಳಿವೆ. 650ಕ್ಕೂ ಹೆಚ್ಚು ಮನೆಗಳಿವೆ. ಸಾರಿಗೆ, ಕೆಎಚ್‌ಬಿ, ಪೊಲೀಸ್, ರೈಲ್ವೆ, ಗಾರ್ಮೆಂಟ್ಸ್ ಹೀಗೆ ವಿವಿಧ ಕ್ಷೇತ್ರಗಳ ನೌಕರರು ಇಲ್ಲಿದ್ದಾರೆ. ಸಮೀಪವೇ ಇರುವ ಜಡ್ಜಸ್ ಕಾಲೊನಿಯಲ್ಲೂ ಮೂಲಸೌಕರ್ಯ ಅಷ್ಟಕ್ಕಷ್ಟೇ ಎಂಬಂತಿದೆ.

ADVERTISEMENT

ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಬಡಾವಣೆ ನಿರ್ಮಿಸಿದ ಕೆಎಚ್‌ಬಿ, 2013–17ರ ಅವಧಿಯಲ್ಲಿ 270ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದೆ. ಆ ಬಳಿಕ ಬಡಾವಣೆಯನ್ನು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ಪಾಲಿಕೆಯೂ ಮೂಲಸೌಕರ್ಯ ಕಲ್ಪಿಸುವ ಗೋಜಿಗೆ ಹೋಗಿಲ್ಲ.

ಬಡಾವಣೆ ಹಸ್ತಾಂತರ ಮಾಡಿಸಿಕೊಳ್ಳಲು ಪಾಲಿಕೆಯು ₹18 ಕೋಟಿ ಕೇಳಿದೆ. ಈ ಮೊತ್ತದಲ್ಲಿ ಮೂಲಸೌಕರ್ಯವನ್ನು ಸರಿಪಡಿಸುವುದು ಯೋಜನೆ. ಆದರೆ, ಅಷ್ಟು ಮೊತ್ತದ ಅಗತ್ಯವಿಲ್ಲ ಎಂಬುದು ಕೆಎಚ್‌ಬಿ ಅಧಿಕಾರಿಗಳ ವಾದ. ಪಾಲಿಕೆಗೆ ಹಸ್ತಾಂತರ ಆಗದೆ, ಇ–ಸ್ವತ್ತು ಸಿಗುತ್ತಿಲ್ಲ. ಈ ಹಗ್ಗ ಜಗ್ಗಾಟದಲ್ಲಿ ನಿವಾಸಿಗಳು ನೆಮ್ಮದಿ ಕಳೆದುಕೊಂಡಿದ್ದಾರೆ.

ಆರಂಭದಲ್ಲಿ ಕಟ್ಟಿದ ಮನೆಗಳ ಸಂಖ್ಯೆಗೆ ಅನುಗುಣವಾಗಿ ನೀರು, ವಿದ್ಯುತ್ ಪರಿವರ್ತಕ ಸೌಲಭ್ಯ ಕಲ್ಪಿಸಲಾಗಿದೆ. ಈಗಲೂ ಅವುಗಳ ಪ್ರಮಾಣ ಹೆಚ್ಚದೇ ಇರುವುದರಿಂದ ಸಮಸ್ಯೆ ಎದುರಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಿರ್ವಹಣಾ ಶುಲ್ಕ ಸಂಗ್ರಹಿಸಲಾಗುತ್ತಿದೆಯಾದರೂ ನಿರ್ವಹಣೆ ಮಾತ್ರ ಆಗುತ್ತಿಲ್ಲ. ನಾಲ್ಕು ಉದ್ಯಾನಗಳಿದ್ದರೂ ಅವು ಉಪಯೋಗಕ್ಕೆ ಬರುವಂತಿಲ್ಲ. ಶಾಲೆಗಳಿಗಾಗಿ ನವನಗರಕ್ಕೇ ಬರಬೇಕಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಿವಾಸಿಗಳಿಗೆ ಸಿಕ್ಕಿರುವುದು ಭರವಸೆಯ ಹೊರತಾಗಿ ಬೇರೇನೂ ಇಲ್ಲ.

‘ಎಲ್ ಆ್ಯಂಡ್ ಟಿ ಇಂದ ಸಮಸ್ಯೆ’

‘ಬಡಾವಣೆಯಲ್ಲಿ ಜಲಮಂಡಳಿಯಿಂದ ನೀರು ಪೂರೈಕೆ ಆಗುವ ಮುನ್ನ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಅದರಿಂದ ಪೈಪ್‌ಗಳಲ್ಲಿ ಸುಣ್ಣ ಕಟ್ಟಿಕೊಂಡಿದ್ದು ಈಗ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಜಲಮಂಡಳಿಯಿಂದ ಎಲ್ ಆ್ಯಂಡ್ ಟಿ ಸಂಸ್ಥೆಗೆ ನೀರು ಪೂರೈಕೆ ಜವಾಬ್ದಾರಿ ಹಸ್ತಾಂತರವಾದ ಬಳಿಕ ಸಮಸ್ಯೆ ತೀವ್ರವಾಗಿದೆ. ಹತ್ತು ದಿನಗಳಿಗೊಮ್ಮೆ ತೀರಾ ಸಣ್ಣಗೆ ಎರಡು ತಾಸು ನೀರು ಬರುತ್ತದೆ. ಅದು ಯಾತಕ್ಕೂ ಸಾಲದು. ಮತ್ತೆ ಟ್ಯಾಂಕರ್‌ಗಳಿಗೆ ಹಣ ಸುರಿಯುವುದೇ ಆಗಿದೆ’ ಎಂದು ಅಳಲು ತೋಡಿಕೊಂಡರು ನೀಲಾ ಡೊಂಕನವರ. ‘ಕೆಎಚ್‌ಬಿಯವರು ಸೆಟ್ ಬ್ಯಾಕ್ ಬಿಡದೆ ಇಡೀ ನಿವೇಶನದಲ್ಲಿ ಮನೆ ಕಟ್ಟಿದ್ದಾರೆ. ಪಕ್ಕದಲ್ಲಿ ಖಾಸಗಿಯವರು ಲೇಔಟ್ ನಿರ್ಮಿಸಿದ್ದಾರೆ. ಅಲ್ಲಿ ಮನೆ ಕಟ್ಟುವವರು ತಕರಾರು ಮಾಡುತ್ತಿದ್ದಾರೆ. ಕೆಲವು ಮನೆಗಳ ಗುಣಮಟ್ಟವೂ ನಿರೀಕ್ಷೆಗೆ ತಕ್ಕಂತೆ ಇಲ್ಲ. ಮಳೆಗಾಲದಲ್ಲಿ ರಸ್ತೆಗಳು ಓಡಾಡದಷ್ಟು ಹದಗೆಡುತ್ತವೆ’ ಎಂದು ಸಮಸ್ಯೆ ತೆರೆದಿಟ್ಟರು ವಿನಯ್‌ಗೌಡ ಭರಮಗೌಡ್ರ.

ಇನ್ನೆರಡು ತಿಂಗಳಲ್ಲಿ ಮೂಲಸೌಲಭ್ಯಗಳ ಸಮಸ್ಯೆ ಪರಿಹರಿಸಲಾಗುವುದು. ಜಾಗವನ್ನು ಪಾಲಿಕೆಗೆ ಹಸ್ತಾಂತರಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು
ರವೀಂದ್ರ, ಕಾರ್ಯನಿರ್ವಾಹಕ ಎಂಜಿನಿಯರ್ ಕೆಎಚ್‌ಬಿ
ಸದಸ್ಯರ ಬೇಡಿಕೆಯ ಪ್ರಕಾರ ಒಂದು ವಾರಕ್ಕೆ 34.2 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಆದರೆ ಕಳೆದ ಜ.1ರಿಂದ 22 ದಿನಗಳಲ್ಲಿ ಲಭ್ಯವಾಗಿರುವುದು 7 ಲಕ್ಷ ಲೀಟರ್ ಮಾತ್ರ. ಹೀಗಾಗಿ ನೀರಿನ ಸಮಸ್ಯೆ ಎದುರಾಗಿದೆ
ರಾಹುಲ್ ಬೆಳವಟಗಿ, ಸಹಾಯಕ ಎಂಜಿನಿಯರ್ ಕೆಎಚ್‌ಬಿ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ ಬಡಾವಣೆಯ 2ನೇ ಹಂತದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇಕ್ಕೆಲಗಳಲ್ಲಿ ಗಿಡಗಳು ಬೆಳೆದಿವೆ –ಪ್ರಜಾವಾಣಿ ಚಿತ್ರಗಳು: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ ಬಡಾವಣೆಯ 2ನೇ ಹಂತದಲ್ಲಿನ ಉದ್ಯಾನ ಬಳಕೆಗೆ ಯೋಗ್ಯವಾಗಿಲ್ಲ –ಪ್ರಜಾವಾಣಿ ಚಿತ್ರಗಳು: ಗುರು ಹಬೀಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.