ಬಂಧನ
(ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿ: ಬೇಕರಿ ನಡೆಸುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಘಂಟಿಕೇರಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸೆಟ್ಲಮೆಂಟ್ ಮುಖ್ಯರಸ್ತೆಯ ನಿವಾಸಿ ಕೃಷ್ಣಾ ಇಂದರಗಿ (31), ಹಳೇ ಹುಬ್ಬಳ್ಳಿ ಗಣೇಶ ಕಾಲೊನಿಯ ಕುಮಾರ ಬಿ.ಎಸ್., (40), ಸೆಟ್ಲಮೆಂಟ್‌ನ ಸುನೀಲ ಕನ್ನೇಶ್ವರ (36), ಸತೀಶ ಇಂದರಗಿ (26) ಬಂಧಿತರು.
ನೇಕಾರನಗರದ ಮಧು ಎಂ.ಟಿ., ಅವರು ಯಲ್ಲಾಪುರ ಓಣಿಯ ಪಾಟೀಲ ಗಲ್ಲಿಯಲ್ಲಿ ಬೇಕರಿ ನಡೆಸುತ್ತಿದ್ದು, 20 ದಿನಗಳ ಹಿಂದೆ ಕೇಕ್ ಖರೀದಿಸಲು ಅಂಗಡಿಗೆ ತೆರಳಿದ್ದ ಯುವತಿ ಅವರ ಮೊಬೈಲ್ ನಂಬರ್ ಪಡೆದಿದ್ದರು. ಯುವತಿಗೆ ಕಿರುಕುಳ ಕೊಡುತ್ತಿದ್ದೀಯಾ ಎಂದು ಮಧು ಅವರನ್ನು ಕೃಷ್ಣಾ ಇಂದರಗಿ, ಕುಮಾರ ಬೆದರಿಸಿದ್ದರು. ಅಲ್ಲದೆ, ಅವರಿಂದ ₹50 ಸಾವಿರವನ್ನು ಫೋನ್‌ಪೇ ಮೂಲಕ ವರ್ಗಾಯಿಸಿಕೊಂಡಿದ್ದರು.
ನಂತರ ಸಂಧಾನದ ನೆಪದಲ್ಲಿ ಅವರನ್ನು ಬೈಕ್‌ನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿ, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಘಂಟಿಕೇರಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಹು–ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಆರೋಪಿ ಕೃಷ್ಣಾ ಇಂದರಗಿ ಮೇಲೆ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣ ಸಂಬಂಧ ಯುವತಿಯನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬ್ಲಾಕ್‌ಮೇಲ್ ಮಾಡುವುದು, ಹಣ ಸುಲಿಗೆ, ಹಲ್ಲೆ, ಅಪಹರಣದಂತಹ ಘಟನೆಗಳು ನಡೆದರೆ ಸಾರ್ವಜನಿಕರು ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ಇದರಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಹೇಳಿದರು.
ಇಬ್ಬರ ಬಂಧನ: ಕೇಶ್ವಾಪುರದ ರೈಲ್ವೆ ಕ್ವಾರ್ಟರ್ಸ್‌ನಲ್ಲಿ ರೈಲ್ವೆ ಉದ್ಯೋಗಿ ಪ್ರಕಾಶ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ಧಾರೆ.
ಜಂಗಲ ಬಾಬು ಹಾಗೂ ವಿನಾಯಕ ಸಾವಂತ ಬಂಧಿತರು. ಪ್ರಕಾಶ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳ ಪರಿಶೀಲನೆ ವೇಳೆ ಡೆತ್‌ನೋಟ್ ಪತ್ತೆಯಾಗಿತ್ತು. ಅದರಲ್ಲಿ ಸಾಲ ನೀಡಿದ ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ ಎಂದು ಬರೆಯಲಾಗಿತ್ತು. ಅದನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಜಲು ಹೋಗಿದ್ದ ಬಾಲಕ ಸಾವು: ಸ್ನೇಹಿತರೊಂದಿಗೆ ನಗರದ ಉಣಕಲ್ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದ ಬಾಲಕನ ಶವ ಗುರುವಾರ ಪತ್ತೆಯಾಗಿದೆ.
ಬೆಂಗೇರಿಯ ಚೇತನ ಕನಕಣ್ಣವರ (17) ಮೃತ ಬಾಲಕ. ಚೇತನ ಬುಧವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ. ಈಜು ಬಾರದೆ ಕೆರೆಯಲ್ಲಿ ಮುಳುಗಿದ್ದ. ಅವನ ಸ್ನೇಹಿತರು ತಕ್ಷಣ ಪೊಲೀಸರು ಹಾಗೂ ಆತನ ಪೋಷಕರಿಗೆ ತಿಳಿಸಿದ್ದರು.
ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಮೃತ ದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.