ADVERTISEMENT

ಹುಬ್ಬಳ್ಳಿ |ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ ಲಾಭದ ಆಮಿಷ: ₹27.10 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:46 IST
Last Updated 16 ಅಕ್ಟೋಬರ್ 2025, 6:46 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಹುಬ್ಬಳ್ಳಿ: ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ಕಾಳಿದಾಸ ನಗರದ ಅರುಣ್‌ ಕುಲಕರ್ಣಿ ಅವರಿಗೆ ₹27.10 ಲಕ್ಷ ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರೇಡಿಂಗ್ ಮಾಡಿ ಹಣ ಗಳಿಸಬಹುದು ಎಂಬ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ಅರುಣ್ ಅವರು ಕ್ಲಿಕ್‌ ಮಾಡಿದ್ದಾರೆ. ಈ ವೇಳೆ ಅಪರಿಚಿತರು ಅವರಿಗೆ ನಕಲಿ ಟ್ರೇಡಿಂಗ್ ಅಪ್ಲಿಕೇಷನ್ ಲಿಂಕ್ ಕಳಿಸಿ, ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡಿದ್ದಾರೆ. ನಂತರ ನಕಲಿ ಆ್ಯಪ್‌ನಲ್ಲಿ ಲಾಭ ತೋರಿಸಿ, ಯಾವುದೇ ಲಾಭಾಂಶ ನೀಡದೆ, ಹೂಡಿಕೆ ಮಾಡಿದ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಚಿನ್ನದ ಸರ ಕಳವು: ಇಲ್ಲಿನ ಗುಜರಾತ್‌ ಭವನ ಬಳಿಯ ಕುಂಭಕೋಣ ಪ್ಲಾಟ್ ಬಳಿ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾದ ಲಕ್ಷ್ಮಿ ಹಾನಗಲ್ ಅವರ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಲಕ್ಷ್ಮಿ ಅವರು ಮನೆಯಿಂದ ಹೊರಗೆ ಬಂದಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು, 12 ಗ್ರಾಂ ಚಿನ್ನದ ಸರ ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹3.69 ಲಕ್ಷ ವಂಚನೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಧಾರವಾಡದ ಸಾಧನವರ ಎಸ್ಟೇಟ್‌ನ ಶ್ರೀದೇವಿ ಅರಕೇರಿ ಅವರಿಗೆ ₹3.69 ಲಕ್ಷ ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಲಿಗ್ರಾಂ ಆ್ಯಪ್ ಮೂಲಕ ಶ್ರೀದೇವಿ ಅವರನ್ನು ಸಂಪರ್ಕಿಸಿದ ಅಪರಿಚಿತರು, ಲಾಭದ ಆಮಿಷವೊಡ್ಡಿ ಶ್ರೀದೇವಿ ಮತ್ತು ಅವರ ಸ್ನೇಹಿತರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ಲಾಭ ಮತ್ತು ಹೂಡಿಕೆ ಮಾಡಿದ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

₹2.03 ಲಕ್ಷ ವಂಚನೆ: ಇಲ್ಲಿನ ಸಾಯಿನಗರ ರಸ್ತೆಯ ವಾಯುಪುತ್ರ ಬಡಾವಣೆ ನಿವಾಸಿ, ಉದ್ಯಮಿ ಶ್ರೀಹರಿ ಅವರ ಬ್ಯಾಂಕ್ ಖಾತೆಯಿಂದ ಅಪರಿಚಿತರು ₹2.03 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ:

ಇಲ್ಲಿನ ಕಾರವಾರ ರಸ್ತೆಯ ಎಂಟಿಎಸ್ ಕಾಲೊನಿ ಬಳಿಯ ರಾಜಕಾಲುವೆಗೆ ಹಾರಿ ನೇಕಾರ ನಗರದ ಸುಷ್ಮಾ ದಡ್ಡಿಗೌಡರ (40)  ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಕಾಲುವೆಯಲ್ಲಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಹೊರತೆಗೆದು, ಕೆಎಂಸಿಆರ್‌ಐ ಆಸ್ಪತ್ರೆಗೆ ರವಾನಿಸಿದರು.‌ ‘ಸುಷ್ಮಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದರು’ ಎಂದು ಕುಟುಂಬದವರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.