ಹುಬ್ಬಳ್ಳಿ: ಇತ್ತೀಚೆಗೆ ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಜೊತೆಗೆ, ರೌಡಿಗಳ ನಡುವೆಯೇ ಗುಂಪು ಗಲಭೆಗಳು ನಡೆಯುತ್ತಿವೆ. ಇವುಗಳ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸರು ಸೋಮವಾರ ಬೆಳ್ಳಂಬೆಳಿಗ್ಗೆ 1,158 ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಅವಳಿನಗರದಲ್ಲಿರುವ 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಎಲ್ಲ ರೌಡಿಗಳ ಮೆನ ಮೇಲೆ ಬೆಳಗಿನ ಜಾವ ಏಕಕಾಲದಲ್ಲಿಯೇ ದಾಳಿ ನಡೆಸಿದರು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ಮತ್ತು ಎಎಸ್‌ಐ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, 737 ರೌಡಿಗಳು, 20 ಡ್ರಗ್ಸ್ ಪೆಡ್ಲರ್‌ಗಳು, 227 ಡ್ರಗ್ಸ್ ಬಳಕೆದಾರರು ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ 72 ಮಂದಿಯನ್ನು ವಶಕ್ಕೆ ಪಡೆದರು. ಅವರಿಂದ 80 ಮೊಬೈಲ್ ಫೋನ್, 14 ಬೈಕ್‌ಗಳು ಹಾಗೂ ಎರಡು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ರೌಡಿಗಳನ್ನು ಆಯಾಯ ಠಾಣೆಗೆ ಕರೆದೊಯ್ದು ಪರೇಡ್ ನಡೆಸಿದರು. ಪ್ರತಿಯೊಬ್ಬರ ದೈನಂದಿನ ಕಾರ್ಯಚಟುವಟಿಕೆಗಳ ಮಾಹಿತಿ ಸಂಗ್ರಹಿಸಿದರು. ಅವರ ಸಂಬಮಧಿಕರು, ಪರಿಚಯದವರು, ಸ್ನೇಹಿತರ ಮಾಹಿತಿ ಪಡೆದರು. ಕೆಲವು ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಕೆಲವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಬಾಡಿ ವಾರಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಏಳು–ಎಂಟು ರೌಡಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮನೆ ಪರಿಶೀಲನೆ ವೇಳೆ ಮಾರಕಾಸ್ತ್ರಗಳು ದೊರೆತಿದ್ದು, ಅಂಥವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರ ಮೊಬೈಲ್ ವಶಕ್ಕೆ ಪಡೆದಿದ್ದು, ಕರೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರ ಚಲನ–ವಲನದ ಬಗ್ಗೆ ವಿಶೇಷ ನಿಗಾ ಇಟ್ಟು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ರೌಡಿಸಂಗೆ ಅವಕಾಶವಿಲ್ಲ’
‘ಕೆಲವು ರೌಡಿಗಳು ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನಿಡಲಾಗಿದೆ. ಯಾವುದೇ ಕಾರಣಕ್ಕೂ ರೌಡಿಸಂ ಪುಂಡಾಟ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಅಂತಹ ಚಟುವಟಿಕೆಗಳು ಕಂಡುಬಂದರೆ ಮುಲಾಜಿಲ್ಲದೆ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲಾಗುವುದು’ ಎಂದು ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.