ADVERTISEMENT

ಹುಬ್ಬಳ್ಳಿ | ಪೊಲೀಸರ ಕಾರ್ಯ ಶ್ಲಾಘನೀಯ: ನ್ಯಾ. ಪಲ್ಲವಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:26 IST
Last Updated 22 ಅಕ್ಟೋಬರ್ 2025, 7:26 IST
ಹುಬ್ಬಳ್ಳಿಯ ಹಳೇ ಸಿಎಆರ್‌ ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್‌ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ. ಪಲ್ಲವಿ ಬಿ.ಆರ್‌. ಮಾತನಾಡಿದರು
ಹುಬ್ಬಳ್ಳಿಯ ಹಳೇ ಸಿಎಆರ್‌ ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್‌ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ. ಪಲ್ಲವಿ ಬಿ.ಆರ್‌. ಮಾತನಾಡಿದರು   

ಹುಬ್ಬಳ್ಳಿ: ‘ಹಬ್ಬದ ಸಂದರ್ಭದಲ್ಲಿ ಕುಟುಂಬದವರೆಲ್ಲ ಸಂಭ್ರಮಿಸುವಾಗ, ಪೊಲೀಸರು ಶಾಂತಿ–ಸುವ್ಯವಸ್ಥೆ ಕಾಪಾಡಲು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಅವರ ಕಾರ್ಯ ಶ್ಲಾಘನೀಯ’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್‌ ಕೋರ್ಟ್‌ ನ್ಯಾಯಾಧೀಶೆ ಪಲ್ಲವಿ ಬಿ.ಆರ್‌. ಹೇಳಿದರು.

ಇಲ್ಲಿಯ ಕಾರವಾರ ರಸ್ತೆಯ ಹಳೇ ಸಿಎಆರ್‌ ಮೈದಾನದಲ್ಲಿ ಮಂಗಳವಾರ ಹು–ಧಾ ಮಹಾನಗರ ಪೊಲೀಸ್‌ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುತ್ತ ರಕ್ಷಣೆ ನೀಡಿದರೆ, ಪೊಲೀಸರು ದೇಶದೊಳಗೆ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲವಷ್ಟೇ ಅಲ್ಲ, ಸಾರ್ವಜನಿಕರು ಸಹ ಕಾನೂನು ಪಾಲಿಸುತ್ತ ಸಹಕರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದರು.

ADVERTISEMENT

ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಮಾತನಾಡಿ, ‘1959ರಲ್ಲಿ ಇದೇ ದಿನದಂದು ಜಮ್ಮು ಕಾಶ್ಮಿರದಲ್ಲಿ ಸಿಆರ್‌‌ಪಿಎಫ್ ತಂಡದ ಮೇಲೆ ಚೀನಾ ದಾಳಿ ನಡೆಸಿತ್ತು. ಆ ಸಂದರ್ಭ 10 ಮಂದಿ ಪೊಲೀಸರು ಮೃತಪಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಮೃತಪಟ್ಟವರನ್ನು ಸ್ಮರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಪೊಲೀಸ್ ಹುತಾತ್ಮ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ’ ಎಂದರು.

‘ದೇಶದಲ್ಲಿ ಪ್ರಸ್ತುತ ವರ್ಷದ ದೇಶದಲ್ಲಿ 191 ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟಿದ್ದಾರೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಲ್ಲಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಲಾಗುವುದು’ ಎಂದರು.

ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾಗುಚ್ಛ ಸಮರ್ಪಿಸಿದರು. ಪರೇಡ್ ಕಮಾಂಡರ್ ಆರ್‌‌ಪಿಐ ಸಂತೋಷ ಬೋಜಪ್ಪನವರ ನೇತೃತ್ವದ ಪೊಲೀಸ್ ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿತು. ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪ್ರೊ. ಐ.ಜಿ. ಸನದಿ, ಉದ್ಯಮಿ ವಿಎಸ್‌ವಿ ಪ್ರಸಾದ್,
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿ ಪ್ರಶಾಂತ ಸಿದ್ದನಗೌಡರ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.