ADVERTISEMENT

ನಿರಂತರ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 15:36 IST
Last Updated 20 ಜುಲೈ 2023, 15:36 IST
ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಸುರಿದ ಮಳೆಯಲ್ಲಿಯೇ ಮಹಿಳೆಯರು ಕೊಡೆಯನ್ನಿಡಿದು ಸಾಗಿದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಸುರಿದ ಮಳೆಯಲ್ಲಿಯೇ ಮಹಿಳೆಯರು ಕೊಡೆಯನ್ನಿಡಿದು ಸಾಗಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆ ಆರಂಭವಾದ ಜಿಟಿ ಜಿಟಿ ಮಳೆಯಲ್ಲಿಯೇ ವಿದ್ಯಾರ್ಥಿಗಳು ನೆನೆದುಕೊಂಡು ಶಾಲೆ, ಕಾಲೇಜುಗಳಿಗೆ ತೆರಳಿದರು.

ನಿರಂತರವಾಗಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಪಾದಚಾರಿಗಳು ಅಂಗಡಿ, ಮಳಿಗೆಗಳನ್ನು ಆಶ್ರಯಿಸಿದ್ದು ಹಲವೆಡೆ ಕಂಡುಬಂದಿತು. ವಾಹನ ಸವಾರರು, ಆಟೊ ಚಾಲಕರು ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು.

ಹಳೇಹುಬ್ಬಳ್ಳಿಯ ಗಣೇಶ ನಗರ, ದೇಶಪಾಂಡೆ ನಗರ, ವಡ್ಡರ ಓಣಿ ಸೇರಿದಂತೆ ಬಹುತೇಕ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿಯೇ ನಿಂತಿತ್ತು. ಇದರಿಂದಾಗಿ ಜನರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ADVERTISEMENT

ಸೋನಿಯಾಗಾಂಧಿ ನಗರದಲ್ಲಿ ಮಳೆಯಿಂದಾಗಿ ಮರವೊಂದು ನೆಲಕ್ಕುರುಳಿತು. ಈ ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ. ಬೆಳಗಾವಿ ಗಲ್ಲಿಯಲ್ಲಿ ಅಂಗಡಿಯೊಂದರ ಮಣ್ಣಿನ ಗೋಡೆಯೊಂದು ಬಿದ್ದಿತು.

ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಕೋರ್ಟ್ ಬಳಿ ನಡೆಯುತ್ತಿರುವ ರಾಜಕಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹೆಚ್ಚು ಮಳೆ ನೀರು ಹರಿದ ಪರಿಣಾಮ ರಾಜಕಾಲುವೆಯ ಕೊಳಚೆ ನೀರು ಇಲ್ಲಿನ ಅಪಾರ್ಟ್‌ಮೆಂಟ್‌ ಆವರಣದೊಳಗೆ ನುಗ್ಗಿತು.

’ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಬೇಗ ಮುಗಿಸುತ್ತಿಲ್ಲ. ಮಳೆ ಬಂದಾಗ ರಾಜಕಾಲುವೆಯ ಕೊಳಚೆ ನೀರು ನಮ್ಮ ಅಪಾರ್ಟ್‌ಮೆಂಟ್‌ ಒಳಗೇ ನುಗ್ಗುತ್ತದೆ. ಇದರ ದುರ್ವಾಸನೆ ತಡೆಯಲಾಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ಸಹ ನೀಡಿದ್ದೇವೆ’ ಎಂದು ನಿವಾಸಿ ಶಿವಯ್ಯ ಮಠ ಅಸಮಾಧಾನ ವ್ಯಕ್ತಪಡಿಸಿದರು.

’ಜಿಲ್ಲೆಯ ನವಲಗುಂದದಲ್ಲಿ 0.6 ಸೆಂ.ಮೀ., ಅಣ್ಣಿಗೇರಿ 0.5 ಸೆಂ.ಮೀ., ಹುಬ್ಬಳ್ಳಿ 1.8 ಸೆಂ.ಮೀ., ಧಾರವಾಡದಲ್ಲಿ 2.5 ಸೆಂ.ಮೀ., ಕಲಘಟಗಿಯಲ್ಲಿ 3.2 ಸೆಂ.ಮೀ, ಕುಂದಗೋಳದಲ್ಲಿ 1.7 ಸೆಂ.ಮೀ ಹಾಗೂ ಅಳ್ನಾವರದಲ್ಲಿ 3.5 ಸೆಂ.ಮೀ ಮಳೆ ಸುರಿದಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ತಜ್ಞ ರವಿಪಾಟೀಲ ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹುಬ್ಬಳ್ಳಿಯ ನ್ಯಾಯಾಲಯದ ಬಳಿಯ ಅಪಾರ್ಟ್‌ಮೆಂಟ್‌ ಆವರಣದೊಳಗೆ ರಾಜಕಾಲುವೆಯ ನೀರು ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.