
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಶೂಟಿಂಗ್ ಲೀಗ್ ಆಫ್ ಕರ್ನಾಟಕ (ಎಸ್‌ಎಲ್‌ಕೆ) ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುತ್ತಿರುವ ಹುಬ್ಬಳ್ಳಿ ಶೂಟಿಂಗ್ ಸ್ಟಾರ್ಸ್ ತಂಡದ ಜರ್ಸಿಯನ್ನು ನಗರದಲ್ಲಿ ಗುರುವಾರ ಅನಾವರಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ವಿ.ಎಸ್.ವಿ.ಪ್ರಸಾದ್ ಮಾತನಾಡಿ, ‘ಇಂತಹ ಪ್ರಯತ್ನಕ್ಕೆ ವೈಯಕ್ತಿಕವಾಗಿ ಸದಾ ಬೆಂಬಲ ನೀಡುತ್ತೇನೆ’ ಎಂದರು.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ವ್ಯವಸ್ಥಾಪಕ ಅನಿತ್ ಗುಪ್ತಾ, ಎಸಿಪಿ ಉಮೇಶ ಚಿಕ್ಕಮಠ ಮಾತನಾಡಿದರು.
ಕ್ರಿಕೆಟ್‌ನ ಐಪಿಎಲ್, ಪ್ರೊ ಕಬಡ್ಡಿ ಮಾದರಿಯಲ್ಲಿ ಶೂಟಿಂಗ್ ಲೀಗ್ ಆಯೋಜಿಸಲಾಗಿದೆ. 10 ಮೀ. ಪಿಸ್ತೂಲ್, 10 ಮೀ. ರೈಫಲ್ ಸೇರಿ 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಹುಬ್ಬಳ್ಳಿ ಶೂಟಿಂಗ್ ಸ್ಟಾರ್, ರೆಡ್ರಮ್, ಬೆಂಗಳೂರು ಬ್ರಿಗೇಡ್, ಸ್ನಿಪರ್ ಸ್ಕ್ವಾಡ್, ಟಾಪ್ ಗನ್, ಕ್ಯಾಲಿಬರ್ ಕ್ಯಾಪಿಟಲ್, ಮಂಗಳೂರು ರಾಪ್ಟರ್, ಟ್ರಿಗರ್ ಟ್ಯಾಕ್ಟಿಷಿನ್ಸ್ ತಂಡಗಳು ಸೆಣಸಲಿವೆ.
ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಮುಖ್ಯ ತರಬೇತುದಾರ ರವಿಚಂದ್ರ ಬಾಲೆಹೊಸೂರ್ ಹುಬ್ಬಳ್ಳಿ ಶೂಟಿಂಗ್ ಸ್ಟಾರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ.ಪ್ರಸಾದ್ ತಂಡದ ಪ್ರಾಯೋಜಕತ್ವ ವಹಿಸಿದ್ದಾರೆ.
ಮಾಜಿ ಶಾಸಕ ಅಮೃತ್ ದೇಸಾಯಿ, ರಜತ್ ಉಳ್ಳಾಗಡ್ಡಿಮಠ, ಅನಿರುದ್ಧ ಫಡ್ನವಿಸ್, ವೆಂಕಟೇಶ ರೆಡ್ಡಿ, ನಿತಿನ್ ಕುಲಕರ್ಣಿ, ಶಿವಾನಂದ ಬಾಲೆಹೊಸೂರ್ ಸಹಯೋಗವಿದೆ.
ವಿಜೇತ ತಂಡಕ್ಕೆ ₹4 ಲಕ್ಷ, ರನ್ನರ್ ಅಪ್ ತಂಡಕ್ಕೆ ₹2 ಲಕ್ಷ ಹಾಗೂ ಮೂರನೇ ಸ್ಥಾನಕ್ಕೆ ₹1.5 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಫೆ. 28ರಂದು ಮೊದಲ ಸುತ್ತು ಹಾಗೂ ಮಾರ್ಚ್ 1ರಂದು ಸೆಮಿಫೈನಲ್ಸ್, ಫೈನಲ್ ಪಂದ್ಯಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.