ಚಾಕು
(ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿ: ಹೋಟೆಲ್ ವಿಷಯಕ್ಕೆ ಸಂಬಂಧಿಸಿ ತಂದೆಗೆ ಮಗ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಅದರಗುಂಚಿ ಗ್ರಾಮದ ಅಂಚಿಕಟ್ಟಿ ಪ್ಲಾಟ್‌ನಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಯಲಪ್ಪ ಸುಂಕದ(52) ಗಾಯಗೊಂಡ ವ್ಯಕ್ತಿ. ಪುತ್ರ ಮಹಾಂತೇಶ ಸುಂಕದ ಚಾಕು ಇರಿದು ಹಲ್ಲೆ ನಡೆಸಿದ ಆರೋಪಿ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್‌ನ ವಸ್ತುಗಳನ್ನು ಹಾಳು ಮಾಡಿರುವ ಕುರಿತು ಪುತ್ರ ಮಹಾಂತೇಶ, ತಂದೆಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪದಿಂದ ಅಪ್ಪನ ಹೊಟ್ಟೆ, ಭುಜಕ್ಕೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
₹38 ಲಕ್ಷ ವಂಚನೆ: ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಗರದ ಜಿಪಿನ್‌ಕುಮಾರ್ ಅವರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ ವ್ಯಕ್ತಿಗಳು, ಅವರಿಂದ ₹38 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಸಹನಾ ಅಯ್ಯಂಗಾರ್ ಹಾಗೂ ನಿರ್ಮಯ್ ಜೋಕ್ಸಿ ಹೆಸರಿನಿಂದ ಪರಿಚಯಿಸಿಕೊಂಡ ವಂಚಕರು, ಹಣ ಹೂಡಿಕೆ ಬಗ್ಗೆ ಹೇಳಿ ನಂಬಿಸಿದ್ದಾರೆ. ಆರಂಭದಲ್ಲಿ ಎಜ್ಜೆ ಇನ್‌ವೆಸ್ಟ್‌ಮೆಂಟ್ ಗ್ರೂಪ್ ಟ್ರೇಡಿಂಗ್‌ನಲ್ಲಿ ₹90 ಸಾವಿರ ಹೂಡಿಕೆ ಮಾಡಿಸಿ ₹2 ಲಕ್ಷ ಪಾವತಿಸಿದ್ದರು. ನಂತರ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್‌ಲೈನ್‌ನಲ್ಲಿ ವಂಚನೆ: ಧಾರವಾಡದ ನಿತೇಶ ಕನೇರಿಯಾ ಅವರಿಗೆ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿದ ವ್ಯಕ್ತಿ, ಅವರಿಂದ ₹17.53 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
‘108 ಬುಲ್ಸ್ ಹಾಗೂ ಚಾಯ್’ ಗ್ರೂಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ಯೂಟ್ಯೂಬ್‌ನಲ್ಲಿ ನಿತೇಶ ಅವರು ಜಾಹೀರಾತು ನೋಡಿದ್ದರು. ಗ್ರೂಪ್ ಸೇರ್ಪಡೆಯಾದ ನಂತ ಕೆವೈಸಿ ಅಪ್‌ಡೇಟ್ ಮಾಡಿ ₹50 ಸಾವಿರ ಹೂಡಿಕೆ ಮಾಡಿದ್ದಕ್ಕೆ ಶೇ 10 ರಷ್ಟು ಲಾಭ ನೀಡಿದ್ದರು. ಅದನ್ನೇ ನಂಬಿ ಹೆಚ್ಚು ಹಣ ಹೂಡಿಕೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.