ಹುಬ್ಬಳ್ಳಿ: ‘ಬೀಡಾಡಿ ದನಗಳ ಮತ್ತು ಬೀದಿ ನಾಯಿಗಳ ಕಾಟದಿಂದ ರೋಸಿ ಹೋಗಿದ್ದೇನೆ. ಪ್ರಾಣಿ ದಯಾ ಸಂಘ ಇರುವಂತೆ ಮನುಷ್ಯ ದಯಾ ಸಂಘ ಮಾಡಿ. ಪ್ರಾಣಿಗಳೇ ಜಾಸ್ತಿಯಾದರೆ ನಮ್ಮನ್ನು ಕೊಲೆ ಮಾಡಿ’
‘ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಓಡಾಡುವಾಗ ದಾಳಿ ಮಾಡುತ್ತವೆ. ರಾತ್ರಿಯಿಡೀ ಬೊಗಳುತ್ತವೆ. ನಾನು ಬಿಪಿ ಪೇಷಂಟ್. ಇವುಗಳ ಕಾಟಕ್ಕೆ ರಾತ್ರಿಯಿಡೀ ನಿದ್ರೆ ಇಲ್ಲದಂತಾಗಿದೆ. ನಾನು ಬದುಕಬೇಕೋ? ಬೇಡವೋ?’
ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಬೀದಿ ನಾಯಿಗಳ ದಾಳಿ ಹಾಗೂ ಬೀಡಾಡಿ ದನಗಳಿಂದ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಸಾರ್ವಜನಿಕರು ತೋಡಿಕೊಂಡ ವೇದನೆ ಇದು.
‘ಕೆಲವರು ಎಲ್ಲೆಂದರಲ್ಲಿ ತ್ಯಾಜ್ಯ, ಮೌಂಸದ ತುಂಡುಗಳನ್ನು ಎಸೆಯುತ್ತಾರೆ. ಇದರಿಂದ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಕೆಲವರು ಮನೆಯಲ್ಲಿ ದನಗಳನ್ನು ಸಾಕಲಾಗದೆ ಬೀದಿಯಲ್ಲಿ ಬಿಟ್ಟಿದ್ದಾರೆ. ಪಾಲಿಕೆಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಅವಳಿ ನಗರದಲ್ಲಿ 30 ಸಾವಿರ ಬೀದಿನಾಯಿಗಳು ಇವೆ ಎಂದು ಪಾಲಿಕೆ ಪಶು ವೈದ್ಯರು ಹೇಳುತ್ತಾರೆ. ಪ್ರತಿ ತಿಂಗಳು 400 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದರೆ ಸಮಸ್ಯೆ ಆಗುತ್ತಿರಲಿಲ್ಲ. ಬೀಡಾಡಿ ದನಗಳನ್ನು ಗುರುತು ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಹೇಳಿದರು.
ಪಾಲಿಕೆ ಸದಸ್ಯರಾದ ನಜೀರ್ ಅಹ್ಮದ ಹೊನ್ಯಾಳ, ಸುವರ್ಣ ಕಲ್ಲಕುಂಟ್ಲಾ, ಆರೀಫ್ ಭದ್ರಾಪುರ, ಉಮಾ ಮುಕುಂದ, ಮಹ್ಮದ್ ಇಕ್ಬಾಲ್ ನವಲೂರ ಹಾಗೂ ಇತರರು ಬೀಡಾಡಿ ದನಗಳ ಹಾಗೂ ನಾಯಿಗಳ ಕಾಟದ ಕುರಿತು ಅಸಮಾಧಾನ ಹೊರಹಾಕಿದರು.
ಪಾಲಿಕೆ ಸದಸ್ಯರ, ಪ್ರಾಣಿ ಪ್ರಿಯರ ಸಲಹೆ ಆಲಿಸಿ ಮಾತನಾಡಿದ ಮೇಯರ್ ಜ್ಯೋತಿ ಪಾಟೀಲ, ‘ಬೀಡಾಡಿ ದನಗಳ ಹಾಗೂ ಬೀದಿ ನಾಯಿಗಳ ಹಾವಳಿ ತಡೆಗೆ ಎರಡು-ಮೂರು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದೇ ನಿಯಮ ಜಾರಿಗೆ ತಂದರೂ ಎಲ್ಲರಿಗೂ ಅನ್ವಯಿಸಲಿದೆ. ಸಾರ್ವಜನಿಕರು, ಪ್ರಾಣಿ ಪ್ರಿಯರು ಹಾಗೂ ಪಾಲಿಕೆ ಸದಸ್ಯರು ಸಹಕರಿಸಬೇಕು. ಎನ್‌ಜಿಒಗಳು ನಾಯಿಗಳ ದತ್ತು ಪಡೆಯುತ್ತೇವೆ ಎಂದರೆ ಪಾಲಿಕೆಯಿಂದ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ಪಶು ವೈದ್ಯಾಧಿಕಾರಿ ಒಬ್ಬರೇ ಇದ್ದು, ಹುಬ್ಬಳ್ಳಿ, ಧಾರವಾಡಕ್ಕೆ ಇಬ್ಬರು ಪ್ರತ್ಯೇಕ ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ಉಪಮೇಯರ್ ಸಂತೋಷ ಚವ್ಹಾಣ್, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಹಿರೇಮಠ, ಚಂದ್ರಿಕಾ ಮೇಸ್ತ್ರಿ, ಪ್ರೀತಿ ಲದವಾ, ಕವಿತಾ ಕಬ್ಬೇರ ಇದ್ದರು.
ನಾಯಿ ಹಿಡಿಯಲು 30 ಮಂದಿ ನೇಮಕ:
‘ಶೇ 90ರಷ್ಟು ಬೀಡಾಡಿ ದನಗಳು ಖಾಸಗಿ ಅವರದ್ದಾಗಿವೆ. ಅವುಗಳನ್ನು ಕರೆದೊಯ್ಯಲು ಪಾಲಿಕೆಯು 15 ದಿನಗಳಿಂದ 1 ತಿಂಗಳವರೆಗೆ ಕಾಲಾವಕಾಶ ನೀಡಲಿದೆ. ಸ್ಪಂದಿಸದಿದ್ದರೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. ‘ಬೀದಿ ನಾಯಿಗಳ ಹಾವಳಿ ತಡೆಗೆ ಎಬಿಸಿ ಒಂದೇ ಪರಿಹಾರವಾಗಿದೆ. ಅವಳಿನಗರದಲ್ಲಿ ಮೂರು–ನಾಲ್ಕು ಎಬಿಸಿ ಕೇಂದ್ರಗಳನ್ನು ಸ್ಥಾಪಿಸಿಲು ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ದಿನಕ್ಕೆ 100 ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಚಿಂತನೆ ನಡೆದಿದೆ. ಬೀದಿ ನಾಯಿಗಳನ್ನು ಹಿಡಿಯುವವರು 9 ಮಂದಿ ಮಾತ್ರ ಇದ್ದು 30 ಜನರನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಾಣಿ ಪ್ರಿಯರಿಂದ ಸಲಹೆ:
‘ನಾಯಿ ಸಾಕುವ ಕೆಲವರು ಬೇಡ ಅನ್ನಿಸಿದಾಗ ಬೀದಿಗೆ ತಂದು ಬಿಡುತ್ತಾರೆ. ಅಂಥವರ ವಿರುದ್ಧ ಶಿಸ್ತುಕ್ರಮ ಆಗಬೇಕು. ಬೀದಿನಾಯಿಗಳ ನಿಯಂತ್ರಣಕ್ಕೆ ಎಬಿಸಿ ನಿಯಮ ಸರಿಯಾಗಿ ಜಾರಿಗೆ ತರಬೇಕು. ಅವುಗಳ ಸಂರಕ್ಷಣೆಗೆ ಪ್ರತ್ಯೇಕವಾಗಿ ಜಾಗ ಮೀಸಲಿಡಬೇಕು ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ಎನಿಮಲ್ ವೆಲ್‌ಫೇರ್ ಇಂಡಿಯಾ ಸದಸ್ಯೆ ಪ್ರಿಯಾಂಕಾ ಎನ್‌ಜಿಒ ಸದಸ್ಯ ಬಾನುಚಂದ್ರ ಹೊಸಮನಿ ಹಾಗೂ ಪ್ರಾಣಿ ಪ್ರಿಯರು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.