ಹುಬ್ಬಳ್ಳಿ: ನಗರದ ಚಿನ್ಮಯ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ನದಾಫ್ ಚೆಸ್ ಸ್ಪರ್ಧೆಯಲ್ಲಿ ಛಾಪು ಮೂಡಿಸಿದ್ದು, ಸ್ಟ್ಯಾಂಡರ್ಡ್ ವಿಭಾಗದಲ್ಲಿ 1715 ರೇಟಿಂಗ್ ಹೊಂದಿದ್ದಾಳೆ.
ಸಿಮ್ರಾಳ ತಂದೆ ಆದಂ ಅಲಿ ನದಾಫ್ ಕೆಎಂಸಿಆರ್‌ಐಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದು, ತಾಯಿ ಸಾಯಿಬ್ಬಿ ನರ್ಸಿಂಗ್ ಕಾಲೇಜಿನಲ್ಲಿ ಬೋಧಕರಾಗಿದ್ದಾರೆ.
ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್‌ನಿಂದ ಮಂಗಳೂರಿನಲ್ಲಿ ಇದೇ ವರ್ಷ ಮೇ ತಿಂಗಳಲ್ಲಿ ನಡೆದ ಎರಡನೇ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ 5.5 ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನ, ಜೂನ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ 19ವರ್ಷದೊಳಗಿನವರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದಾಳೆ.
2023ರ ಅಕ್ಟೋಬರ್‌ನಲ್ಲಿ ಅನೇಕಲ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಾಲ್ಕು, ಅದೇ ವರ್ಷ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ 67ನೇ ರಾಷ್ಟ್ರೀಯ ಸ್ಕೂಲ್‌ಗೇಮ್ಸ್‌ನಲ್ಲಿ 10ನೇ ಸ್ಥಾನ ಮತ್ತು 2024ರ ಸೆಪ್ಟೆಂಬರ್‌ನಲ್ಲಿ ಹಾಸನದಲ್ಲಿ 15 ವರ್ಷದೊಳಗಿನ ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 6.5 ಪಾಯಿಂಟ್‌ನೊಂದಿಗೆ ಏಳನೇ ಸ್ಥಾನ ಗಳಿಸಿದ್ದಾಳೆ.
‘ನಾಲ್ಕನೇ ತರಗತಿಯಲ್ಲಿದ್ದಾಗ ಚೆಸ್ ಕಲಿತೆ. ಶಿಕ್ಷಕ ಚಂದ್ರಶೇಖರ ಯತ್ನಟ್ಟಿ, ಶ್ರೀಪಾದ್ ಕೆ.ವಿ ಅವರು ತರಬೇತಿ ನೀಡಿದರು. ಇದೇ ತಿಂಗಳು ಜುಲೈ 25ರಿಂದ ರಾಜ್ಯಮಟ್ಟದ ಚಾಂಪಿಯನ್‌ಷಿಪ್ ಹಾಸನದಲ್ಲಿ ನಡೆಯಲಿದೆ. ಅದರಲ್ಲಿ ಉತ್ತಮ ಸಾಧನೆಗಾಗಿ ಸಿದ್ಧತೆ ನಡೆಸಿದ್ದೇನೆ’ ಎಂದು ಸಿಮ್ರಾ ಹೇಳಿದಳು.
‘ಕೋವಿಡ್ ಸಮಯದಲ್ಲಿ ಆನ್‌ಲೈನ್ ತರಗತಿಗಾಗಿ ಸಿಮ್ರಾ ಹೆಚ್ಚು ಮೊಬೈಲ್ ಬಳಸುತ್ತಿದ್ದಳು. ಅದರಿಂದ ಹೊರತರಲು ಆಕೆಗೆ ಚೆಸ್ ಹೇಳಿಕೊಟ್ಟೆ. ನಂತರ ಶಾಲೆಯಲ್ಲಿ ಶಿಕ್ಷಕ ಚಂದ್ರಶೇಖರ ಯತ್ನಟ್ಟಿ ಆಕೆಯ ಪ್ರತಿಭೆ ಗುರುತಿಸಿ ತರಬೇತಿ ನೀಡಿದರು’ ಎಂದು ಸಿಮ್ರಾ ತಂದೆ ಆದಮಲಿ ನದಾಫ್ ಹೇಳಿದರು.
‘ಸಿಮ್ರಾ ಓದಿನಲ್ಲೂ ಮುಂದೆ ಇದ್ದಾಳೆ. ದೇಹದ ಜತೆಗೆ ಮಿದುಳಿಗೂ ವ್ಯಾಯಾಮ ಬೇಕು. ಅದು ಚೆಸ್‌ನಿಂದ ಸಿಗುತ್ತದೆ’ ಎಂದರು.
ಪ್ರತಿ ದಿನ ನಾಲ್ಕರಿಂದ ಐದು ಗಂಟೆ ತರಬೇತಿ ಪಡೆಯುತ್ತೇನೆ. ಆನ್‌ಲೈನ್ ತರಬೇತಿಯೂ ಇರುತ್ತದೆ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವುದರ ಜೊತೆಗೆ 2000 ರೇಟಿಂಗ್ ತಲುಪುವುದು ನನ್ನ ಗುರಿಸಿಮ್ರಾ ನದಾಫ್ ಚೆಸ್ ಪಟು
ಸಿಮ್ರಾ ನದಾಫ್ ಅಲ್ಪ ಅವಧಿಯಲ್ಲಿ ಉತ್ತಮ ರೇಟಿಂಗ್ ಪಡೆದಿದ್ದಾಳೆ. ಅವಳು ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ಆಕೆಗೆ ಉತ್ತಮ ಭವಿಷ್ಯವಿದೆಶ್ರೀಪಾದ್ ಕೆ.ವಿ ಫಿಡೆ ಇನ್‌ಸ್ಟ್ರಕ್ಡರ್/ಇಂಟರ್‌ನ್ಯಾಷನಲ್ ಆರ್ಬಿಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.