ADVERTISEMENT

ಹುಬ್ಬಳ್ಳಿ: ತಾಯಿಯ ಗುರುತು ಪತ್ರ ಹಾಕಿಕೊಂಡು ಸಮೀಕ್ಷೆಗೆ ಬಂದ ಪುತ್ರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 12:50 IST
Last Updated 1 ಅಕ್ಟೋಬರ್ 2025, 12:50 IST
   

ಹುಬ್ಬಳ್ಳಿ: ಹಿಂದುಳಿದ ವರ್ಗದ ಆಯೋಗ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಿಯೋಜಿತ ಸರ್ಕಾರಿ ಸಿಬ್ಬಂದಿ ಹೊರತಾಗಿ, ಅವರ ಮಕ್ಕಳು ಹಾಗೂ ಪರಿಚಯದವರು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಇಂತಹ ಪ್ರಕರಣವೊಂದು ನಗರದ ಮನೋಜ್ ಎಸ್ಟೇಟ್‌ನ ಬಿ.ಎಂ. ರಾಯಲ್ ಗಾರ್ಡನ್ ಅಪಾರ್ಟಮೆಂಟ್‌ನಲ್ಲಿ ಬುಧವಾರ ನಡೆದಿದೆ. ಮನೆಯವರು ಮಾಹಿತಿ ನೀಡದೆ, ಅವರನ್ನು ವಾಪಸ್ ಕಳುಹಿಸಿದ್ದಾರೆ.

ಸಮೀಕ್ಷೆಗೆ ಬಂದಿರುವ ವ್ಯಕ್ತಿ, ನಿಯೋಜಿತ ಸರ್ಕಾರಿ ಸಿಬ್ಬಂದಿಯ ಪುತ್ರ ಎಂದು ಹೇಳುತ್ತಿರುವ ಹಾಗೂ ಅದೇ ಸಿಬ್ಬಂದಿಯ, ಜಿಲ್ಲಾಧಿಕಾರಿ ಸಹಿ ಮಾಡಿರುವ ಗುರುತು ಪತ್ರ ಹಾಕಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ‌.

ADVERTISEMENT

'ಸಮೀಕ್ಷೆಗೆ ಬಂದ ಯುವಕ ಮಾಹಿತಿ ಕೇಳಲು ಮುಂದಾದಾಗ ಅನುಮಾನ ಬಂದು, ಗುರುತಿನ ಪತ್ರ ತೋರಿಸುವಂತೆ ಹೇಳಿದೆ. ಮಹಿಳೆಯ ಭಾವಚಿತ್ರ ಅಂಟಿಸಿರುವ ಗುರುತಿನ ಪತ್ರ ತೋರಿಸಿ, ಅವರ ಮಗ ತಾನೆಂದು ಪರಿಚಯಿಸಿಕೊಂಡ. ಸರ್ಕಾರದ ಸಮೀಕ್ಷೆ ಹೆಸರಲ್ಲಿ ಯಾರ್ಯಾರೋ ಬಂದು ಮಾಹಿತಿ ಕೇಳುತ್ತಿದ್ದಾರೆ' ಎಂದು ಅಪಾರ್ಟ್ ನಿವಾಸಿ ಹೇಳಿದರು.

'ಸಮೀಕ್ಷಾದಾರರಿಗೆ ಗುರಿ ನಿಗದಿಪಡಿಸಿ, ಅ. 7ರ ಒಳಗೆ ಪೂರ್ಣಗೊಳಿಸುವಂತೆ ಒತ್ತಡ ಹೇರಲಾಗುತ್ತಿದೆ. ಕೆಲವು ಸಮೀಕ್ಷಾ ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ, ಅವರ ಮಕ್ಕಳು, ಪರಿಚಯದವರು ಸಮೀಕ್ಷೆಗೆ ಬರುತ್ತಿದ್ದಾರೆ. ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಯುತ್ತಿದೆ' ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಘಾಸ್ತಿ, 'ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಮೇಲ್ವಿಚಾರಕರ ಜೊತೆ ಸಭೆ ನಡೆಸಿ, ಅಶಿಸ್ತಿನಿಂದ ವರ್ತಿಸದಂತೆ ಸಮೀಕ್ಷಾದಾರರಿಗೆ ಎಚ್ಚರಿಕೆ ನೀಡುವಂತೆ ಸೂಚಿಸಲಾಗುವುದು' ಎಂದರು.

'ಸಮೀಕ್ಷೆಗೆ ನೇಮಕ ಮಾಡಿರುವ ಸಿಬ್ಬಂದಿಯೇ ಮನೆಗಳಿಗೆ ತೆರಳಿ ದತ್ತಾಂಶ ಸಂಗ್ರಹಿಸಬೇಕು. ಸಿಬ್ಬಂದಿ ಹೊರತಾಗಿ, ಅವರ ಹೆಸರಲ್ಲಿ ಬೇರೆಯವರು ಸಮೀಕ್ಷೆ ನಡೆಸಲು ಅವಕಾಶವಿಲ್ಲ. ಸಮೀಕ್ಷಾದಾರರಿಗೆ ಜಿಲ್ಲಾಧಿಕಾರಿ ಸಹಿ ಮಾಡಿರುವ ಗುರುತು ಪತ್ರ ನೀಡಲಾಗಿದೆ. ಸಾರ್ವಜನಿಕರು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.