ADVERTISEMENT

ಹುಬ್ಬಳ್ಳಿ | ಸಂಚಾರ ದಟ್ಟಣೆ: ಬೇಸತ್ತ ಸವಾರರು

ಬಿಸಿಲಿನಲ್ಲಿ ತಾಸುಗಟ್ಟಲೆ ಕಾಯುವ ವಾಹನ ಸವಾರರು

ಪೂರ್ಣಿಮಾ ಗೊಂದೆನಾಯ್ಕರ
Published 19 ನವೆಂಬರ್ 2025, 2:59 IST
Last Updated 19 ನವೆಂಬರ್ 2025, 2:59 IST
ಹುಬ್ಬಳ್ಳಿಯ ಲ್ಯಾಮಿಂಗ್‌ ಟನ್ ರಸ್ತೆಯಲ್ಲಿ ಉಂಟಾದ ಸಂಚಾರ ದಟ್ಟಣೆ ಪ್ರಜಾವಾಣಿ ಚಿತ್ರ–ಗುರು ಹಬೀಬ್
ಹುಬ್ಬಳ್ಳಿಯ ಲ್ಯಾಮಿಂಗ್‌ ಟನ್ ರಸ್ತೆಯಲ್ಲಿ ಉಂಟಾದ ಸಂಚಾರ ದಟ್ಟಣೆ ಪ್ರಜಾವಾಣಿ ಚಿತ್ರ–ಗುರು ಹಬೀಬ್   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ವೇಗವಾಗಿ ಬೆಳೆಯುತ್ತಿದ್ದು, ಸಂಚಾರ ದಟ್ಟಣೆ ಸಹ ಹೆಚ್ಚುತ್ತಿದೆ. ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ನೀಲಿಜಿನ್ ರಸ್ತೆ, ಬಂಕಾಪುರ ಚೌಕ್‌, ಭಾರತ್ ಮಿಲ್‌ನಿಂದ ಹೊಸೂರು ವೃತ್ತ ಸಂಪರ್ಕಿಸುವ ರಸ್ತೆ, ಕಾರವಾರ ರಸ್ತೆ, ಧಾರವಾಡ ರಸ್ತೆ, ಗಬ್ಬೂರು ರಸ್ತೆ, ವಿಜಯಪುರ ರಸ್ತೆ, ಗದಗ ರಸ್ತೆ, ಇಂಡಿ ಪಂಪ್, ದೇಸಾಯಿ ವೃತ್ತ (ದೇಶಪಾಂಡೆ ನಗರ), ಚನ್ನಮ್ಮ ವೃತ್ತ, ಗೋಕುಲ ರಸ್ತೆ, ವಿದ್ಯಾನಗರ, ಕೊಪ್ಪಿಕರ್‌ ರಸ್ತೆ, ಹಳೇಕೋರ್ಟ್‌ ಸರ್ಕಲ್‌, ಲ್ಯಾಮಿಂಗ್ಟನ್‌ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆ ವಾಹನ ಸವಾರರನ್ನು ಹೈರಾಣಾಗಿಸಿದೆ. 

ಕಚೇರಿ, ಶಾಲೆ ಆರಂಭವಾಗುವ ಬೆಳಗಿನ ಹೊತ್ತು ಮತ್ತು ಸಂಜೆ ಸಮಯದಲ್ಲಿ ಸಂಚಾರ ದಟ್ಟಣೆ ಆಗುವುದು ಸಹಜ. ಆದರೆ, ನಗರದ ಹಲವು ರಸ್ತೆಗಳು ಬೆಳಗಿನಿಂದ ರಾತ್ರಿಯ ವರೆಗೂ ದಟ್ಟಣೆಯಿಂದಲೇ ಕೂಡಿರುತ್ತವೆ.

ADVERTISEMENT

ಹಬ್ಬಗಳು ಬಂದರಂತೂ ಲಿಂಗರಾಜನಗರ, ಗೋಕುಲ ರಸ್ತೆ ಮತ್ತು ಚನ್ನಮ್ಮ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳಿಂದಲೇ ಆವರಿಸಿರುತ್ತದೆ. ಇದರಿಂದ ನೂರಾರು ವಾಹನಗಳು ಸಾಲು ಸಾಲಾಗಿ ನಿಲ್ಲುವಂತಾಗುತ್ತದೆ. ಅಷ್ಟೇ ಅಲ್ಲದೇ  ದೊಡ್ಡ ದೊಡ್ಡ ಮಾಲ್‌ಗಳು ಹೊಸದಾಗಿ ಆರಂಭವಾಗಿದ್ದರಿಂದ ಜನದಟ್ಟಣೆ ಉಂಟಾಗಿ ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಮೇಲ್ಸೇತುವೆ ಕಾಮಗಾರಿಗಾಗಿ ವಿವಿಧೆಡೆ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದ್ದು, ಇದರಿಂದಾಗಿ ಚನ್ನಮ್ಮ ವೃತ್ತ, ಹಳೇಕೋರ್ಟ್‌ ಸರ್ಕಲ್‌ ಮತ್ತು ಬಸವ ವನದ ಹತ್ತಿರ ಸಂಚಾರ ದಟ್ಟಣೆ ವಿಪರಿತವಾಗಿದ್ದರಿಂದ ವಾಹನ ಸವಾರರು ಬಿಸಿಲಿನಲ್ಲಿ ತಾಸುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚನ್ನಮ್ಮ ವೃತ್ತವು ನಗರದ ಕೇಂದ್ರ ಭಾಗವಾಗಿದ್ದು, ಧಾರವಾಡ, ಕಾರವಾರ, ಬೆಂಗಳೂರು, ವಿಜಯಪುರ, ಗದಗ, ಹಳೇ ಹುಬ್ಬಳ್ಳಿ ಹೀಗೆ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ. ಇಲ್ಲಿಗೆ ಬರುವ ವಾಹನಗಳ ಸಂಖ್ಯೆಯೂ ಹೆಚ್ಚಿದ್ದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ.

‘ಬೆಳಿಗ್ಗೆ ಹಾಗೂ ಸಂಜೆ ನಗರದ ಕೆಲ ರಸ್ತೆಗಳು ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ. ಕೆಲವು ಕಡೆ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡೋಕೆ ಹರಸಾಹಸ ಪಡುತ್ತಿರುತ್ತಾರೆ. ಹೊಸದಾಗಿ ಸಂಚಾರ ದಟ್ಟಣೆ ಎದುರಿಸುತ್ತಿರುವ ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ಗಳನ್ನ ಅಳವಡಿಸುವ ಅಗತ್ಯ ಇದೆ’ ಎಂದು ವಾಹನ ಸವಾರ ಪರಶುರಾಮ ತಿಳಿಸಿದರು.

‘ಶಿರೂರಪಾರ್ಕ್‌ನ ಚೇತನಾ ಸರ್ಕಲ್‌ನಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಈ ಮಾರ್ಗದಲ್ಲಿ ಸಿಗ್ನಲ್ ಇಲ್ಲದಿರುವುದರಿಂದ ವಾಹನಗಳು ಬೇಕಾಬಿಟ್ಟಿ ಓಡಾಡುತ್ತವೆ’ ಎಂದು ವಾಹನ ಸವಾರ ಸಂಜಯ ಸಿಂಗೇನವರ ತಿಳಿಸಿದರು.

ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಉಂಟಾದ ಸಂಚಾರ ದಟ್ಟಣೆ –ಪ್ರಜಾವಾಣಿ ಚಿತ್ರ–ಗುರು ಹಬೀಬ್

ಸಂಚಾರ ನಿಯಂತ್ರಣಕ್ಕೆ ಜನರ ಸಹಕಾರ ಅವಶ್ಯ ಹಾಳಾಗಿರುವ ಸಿಗ್ನಲ್‌ಗಳ ದುರಸ್ತಿಗೆ ಆಗ್ರಹ  ವಾಹನ, ಜನದಟ್ಟಣೆ ಪ್ರದೇಶದಲ್ಲಿ ಸಿಗ್ನಲ್‌ ಅಳವಡಿಕೆಗೆ ಮನವಿ

ಪೊಲೀಸ್‌ ಇಲಾಖೆಯಿಂದ ಸಂಚಾರ ದಟ್ಟಣೆ ಸರಳ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ಸಹಕಾರ ಮುಖ್ಯ. ಮೇಲ್ಸೇತುವೆ ಕಾಮಗಾರಿಯಿಂದ ಸಂಚಾರ ಸಮಸ್ಯೆ ಉಂಟಾಗಿದೆ
ಸಿ.ಆರ್. ರವೀಶ್ ಡಿಸಿಪಿ

ಕಾರ್ಯನಿರ್ವಹಿಸದ ಸಿಗ್ನಲ್‌..

ಸಂಚಾರ ದಟ್ಟಣೆ ತಪ್ಪಿಸಲು ಅಳವಡಿಸಿರುವ ಎಷ್ಟೋ ಮಾರ್ಗಗಳಲ್ಲಿ ಸಿಗ್ನಲ್‌ಗಳೇ ಬಂದ್ ಆಗಿದ್ದು ಸಿಗ್ನಲ್ ದೀಪಗಳು ಬೆಳಗದೇ ಎಷ್ಟೋ ದಿನಗಳಿಂದ ಬಂದ್‌ ಆಗಿವೆ. ಜನದಟ್ಟಣೆ ಪ್ರದೇಶಗಳಲ್ಲಿಯೇ ದೀಪಗಳು ಬಂದ್‌ ಆಗಿದ್ದು ಸಂಚಾರ ದಟ್ಟಣೆಗೆ ಇದೊಂದು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.