
ಹುಬ್ಬಳ್ಳಿ: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿವಿಧೆಡೆಯಲ್ಲಿನ ವೆಂಕಟೇಶ್ವರ ದೇಗುಲಗಳಲ್ಲಿ ಮಂಗಳವಾರ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸುವ ಮೂಲಕ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡಿದ ಭಕ್ತರು ದೇವರುಗಳಿಗೆ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷವಾಗಿ ಅಲಂಕೃತಗೊಂಡಿದ್ದ ದೇವರ ಮೂರ್ತಿಗಳನ್ನು ಕಣ್ತುಂಬಿಕೊಂಡರು. ಇದೇ ವೇಳೆ ಕೆಲ ದೇವಸ್ಥಾನಗಳಲ್ಲಿ ಭಕ್ತರಿಗೆ ಫಲಾಹಾರವನ್ನೂ ವಿತರಿಸಲಾಯಿತು.
ನಗರದ ರಾಯಾಪುರದಲ್ಲಿನ ಇಸ್ಕಾನ್ ದೇವಸ್ಥಾನವನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸುವ ಮೂಲಕ ಸಂಭ್ರಮದಿಂದ ವೈಕುಂಠ ಏಕಾದಶಿ ಆಚರಿಸಲಾಯಿತು.
ದೇವಸ್ಥಾನದ ಪ್ರವೇಶದ್ವಾರದ ಬಳಿ 15 ಅಡಿ ಎತ್ತರ, 11 ಅಡಿ ಅಗಲ ನಿರ್ಮಿಸಿದ್ದ ಚಿನ್ನದ ಬಣ್ಣ ಲೇಪಿತವಾದ ವೈಕುಂಠ ದ್ವಾರವನ್ನು ತೆರೆಯುವ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಯಿತು. ಸರದಿಯಲ್ಲಿ ನಿಂತಿದ್ದ ನೂರಾರು ಭಕ್ತರು ‘ಲಕ್ಷ್ಮೀ ನಾರಾಯಣ ಸ್ವಾಮಿ ಗೋವಿಂದ..ಗೋವಿಂದ...’ ಎಂದು ನಾಮಸ್ಮರಣೆ ಮಾಡುತ್ತಾ ದೇವಸ್ಥಾನದೊಳಗೆ ಪ್ರವೇಶಿಸಿ, ಗರುಡ ಸೇವಾ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ, ಲಕ್ಷ್ಮೀ ದೇವಿಯ ದರ್ಶನ ಪಡೆದರು.
ದೇವಸ್ಥಾನದ ಆವರಣದಲ್ಲಿ ನಾರಾಯಣ ಸ್ವಾಮಿಯನ್ನು ಸ್ತುತಿಸುವ ಭಜನೆ ಹಾಗೂ ಕೀರ್ತನೆಗಳು ಭಕ್ತಿಯಿಂದ ನಡೆದವು. ಕೆಲ ಭಕ್ತರು ಕೀರ್ತನೆ ಹಾಡಿದರು. ಲಕ್ಷ್ಮೀ ನಾರಾಯಣ ಸ್ವಾಮಿ ಮೂರ್ತಿಯ ವಿಶೇಷ ಮಂಟಪದ ಎದುರು ಹೂವುಗಳಿಂದ ಅಲಂಕಾರಗೊಂಡ ದೀಪದ ಕಳಶಗಳಿಗೆ ಪುಷ್ಪಾರ್ಚನೆ ಮಾಡಿ, ಪಾರ್ಥಿಸಿದರು.
ಬೆಳಿಗ್ಗೆಯಿಂದ ರಾತ್ರಿಯ ತನಕ ಗರುಡ ಸೇವಾ ಲಕ್ಷ್ಮೀನಾರಾಯಣ ಸ್ವಾಮಿಗೆ ಲಕ್ಷಾರ್ಚನೆ ಸೇವೆ ನಿರಂತರವಾಗಿ ನಡೆಯಿತು. ಸಂಜೆ ವೆಂಕಟೇಶ್ವರ ಹೋಮವನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿಸಲಾಯಿತು. ಇದೇ ವೇಳೆ ಹೇಮಾ ವಾಘಮೋಡೆ ಹಾಗೂ ವಿದುಷಿ ಸಹನಾ ಭಟ್ ಅವರ ತಂಡದಿಂದ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಸ್ಕಾನ್ (ಹುಬ್ಬಳ್ಳಿ–ಧಾರವಾಡ) ಅಧ್ಯಕ್ಷ ರಾಜೀವ ಲೋಚನದಾಸ, ಉದ್ಯಮಿ ವಿ.ಎಸ್.ವಿ.ಪ್ರಸಾದ, ವಿನೋದ ಲದ್ದಾ ಸೇರಿದಂತೆ ಪ್ರಮುಖರು, ಭಕ್ತರು ಭಾಗವಹಿಸಿದ್ದರು.
ಇಲ್ಲಿನ ಅರವಿಂದ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕುಸಗಲ್ ರಸ್ತೆಯ ಕುಬೇರಪುರಂ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ನೃಪತುಂಗ ಬೆಟ್ಟದ ಬಳಿಯ ವೆಂಕಟೇಶ್ವರ ದೇಗುಲ, ದೇವಾಂಗ ಪೇಟೆಯ ವೆಂಕಟೇಶ್ವರ ದೇವಸ್ಥಾನದ ಸೇರಿದಂತೆ ನಗರದ ಎಲ್ಲಾ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯ ತನಕ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವರ ದರ್ಶನಕ್ಕಾಗಿ ಏಳು ದ್ವಾರ ನಿರ್ಮಾಣ ವಿಶೇಷ ಪೂಜೆ, ಭಜನೆ, ವಿಷ್ಣು ಸಹಸ್ರನಾಮ ಪಾರಾಯಣ ಶ್ರೀನಿವಾಸ ಗೋವಿಂದ ಹರಿನಾಮಸ್ಮರಣೆ ಭಕ್ತರಿಗೆ ಕಿಚಡಿ, ಹಣ್ಣು ಪ್ರಸಾದ ವಿತರಣೆ
ಇಸ್ಕಾನ್ ದೇವಸ್ಥಾನದಲ್ಲಿ ಈ ಬಾರಿ ಗರುಡ ವಾಹನ ಲಕ್ಷ್ಮೀ ನಾರಾಯಣ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಯಿತು. 20 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು.
-ರಾಮಗೋಪಾಲ ದಾಸ ಇಸ್ಕಾನ್ ದೇವಸ್ಥಾನದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.