ADVERTISEMENT

ಹುಬ್ಬಳ್ಳಿ |ಆರ್‌ಟಿಒ: 3 ವರ್ಷದಲ್ಲಿ ₹1.22 ಕೋಟಿ ದಂಡ ವಸೂಲಿ

ಗೌರಮ್ಮ ಕಟ್ಟಿಮನಿ
Published 12 ಅಕ್ಟೋಬರ್ 2025, 7:28 IST
Last Updated 12 ಅಕ್ಟೋಬರ್ 2025, 7:28 IST
ಶ್ರೀಕಾಂತ ಬಡಿಗೇರ
ಶ್ರೀಕಾಂತ ಬಡಿಗೇರ   

ಹುಬ್ಬಳ್ಳಿ: ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಎಲ್ಲ ವಾಹನಗಳಿಗೆ ವಾಯುಮಾಲಿನ್ಯ ತಪಾಸಣೆ ಕಡ್ಡಾಯಗೊಳಿಸಿದೆ. ತಪಾಸಣೆ ಮಾಡಿಸದ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. 2023ರಿಂದ 2025ರ ಸೆಪ್ಟೆಂಬರ್‌ವರೆಗೆ 5,082 ಪ್ರಕರಣ ದಾಖಲಾಗಿದ್ದು, ₹1.22 ಕೋಟಿ ದಂಡ ಸಂಗ್ರಹಿಸಿದೆ.‌

ಜಿಲ್ಲೆಯಲ್ಲಿ ಧಾರವಾಡ ಪಶ್ಚಿಮ ಮತ್ತು ಪೂರ್ವ ವ್ಯಾಪ್ತಿಯಲ್ಲಿ ತಲಾ ಒಂದು ಆರ್‌ಟಿಒ ಕಚೇರಿಯಿದೆ. ಧಾರವಾಡ ಪಶ್ಚಿಮ ವ್ಯಾಪ್ತಿಯಲ್ಲಿ  39 ಹಾಗೂ ಧಾರವಾಡ ಪೂರ್ವ ವ್ಯಾಪ್ತಿಯಲ್ಲಿ 36 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. 

2022ರಿಂದ ವಿವಿಧ ವಾಹನಗಳ ವಾಯು ಮಾಲಿನ್ಯ ತಪಾಸಣಾ ದರವನ್ನು ಪರಿಷ್ಕರಿಸಲಾಗಿದೆ. ದ್ವಿಚಕ್ರ ವಾಹನ– ₹65, ತ್ರಿಚಕ್ರ ವಾಹನ– ₹75, ನಾಲ್ಕು ಚಕ್ರದ ಪೆಟ್ರೋಲ್‌, ಎಲ್‌ಪಿಜಿ/ಸಿಎನ್‌ಜಿ ಚಾಲಿತ ವಾಹನ–₹115 ಮತ್ತು ಎಲ್ಲಾ ಮಾದರಿಯ ಡಿಸೇಲ್‌ ಚಾಲಿತ ವಾಹನಗಳಿಗೆ ₹160 ದರ ನಿಗದಿಪಡಿಸಲಾಗಿದೆ. ಬಿಎಸ್‌–4 ವಾಹನಗಳಿಗೆ ಒಂದು ವರ್ಷ, ಬಿಎಸ್‌–3 ವಾಹನಗಳನ್ನು ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು.

ADVERTISEMENT
ಹುಬ್ಬಳ್ಳಿಯಲ್ಲಿ ಬಸ್‌ವೊಂದು  ಹೊಗೆ ಬಿಡುತ್ತಾ ಸಾಗಿತು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

‘ವಾಹನಗಳ ವಾಯು ಮಾಲಿನ್ಯ ತಪಾಸಣೆ ಮಾಡಿಸಿದ ಪ್ರಮಾಣ ಪತ್ರದ ಅವಧಿ ಮುಗಿದಲ್ಲಿ ದಂಡ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ₹1000 ಹಾಗೂ ಉಳಿದ ಪೆಟ್ರೋಲ್‌, ಡಿಸೇಲ್‌ ಚಾಲಿತ ಎಲ್ಲ ವಾಹನಗಳಿಗೆ ₹ 3,000 ದಂಡ ವಿಧಿಸಲಾಗುತ್ತಿದೆ. ವಾಹನ ಸವಾರರು ನಿಗದಿತ ಅವಧಿಗೆ ವಾಹನಗಳ ವಾಯು ಮಾಲಿನ್ಯದ ಪ್ರಮಾಣವನ್ನು ತಪಾಸಣೆ ಮಾಡಿಸಬೇಕು. ಇದರಿಂದ ಪ್ರಕೃತಿ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಡೆಯಬಹುದು ಎನ್ನುತ್ತಾರೆ’ ಎಂದು ಆರ್‌ಟಿಒ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ‘ಪ್ರಜಾವಾಣಿ’ಗೆ ತಳಿಸಿದರು.

ಹುಬ್ಬಳ್ಳಿಯ ವಾಯು ಮಾಲಿನ್ಯ ತಪಾಸಣಾ ಕೇಂದ್ರವೊಂದರಲ್ಲಿ ದ್ವಿಚಕ್ರ ವಾಹನದ ವಾಯು ಮಾಲಿನ್ಯ ತಪಾಸಣೆ ಮಾಡಲಾಯಿತು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

’ಹೆಚ್ಚಿನ ಹಣ ವಸೂಲಿ’ 

‘ಜಿಲ್ಲೆಯ ವಿವಿಧ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನಗಳ ವಾಯು ಮಾಲಿನ್ಯ ತಪಾಸಣೆಗೆ  ನಿಗದಿತ ದರಗಿಂತ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಬಿಎಸ್‌4 ಮಾದರಿಯ ದ್ವಿಚಕ್ರ ವಾಹನ ತಪಾಸಣೆಗೆ ₹65 ಬದಲಿಗೆ ₹140 ಪಡೆದಿದ್ದಾರೆ. ಅದಕ್ಕೆ ರಶೀದಿಯೂ ನೀಡುತ್ತಿಲ್ಲ. ಕೆಲವೆಡೆ ಆನ್‌ಲೈನ್‌ ಪೇಮೆಂಟ್‌ಗೂ ಅವಕಾಶವಿಲ್ಲ. ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ನಿಗದಿತ ದರ ಮಾತ್ರ ಪಡೆಯುವಂತೆ ಮಾಡಬೇಕು’ ಎಂಬುದು ಹುಬ್ಬಳ್ಳಿಯ ಅನೇಕ ವಾಹನ ಸವಾರರ ಆಗ್ರಹ.

‘ಸವಾರರಲ್ಲಿ ಅರಿವಿನ ಕೊರತೆ’

‘ಬಹುತೇಕ ಸವಾರರಲ್ಲಿ ಅರಿವಿನ ಕೊರತೆಯಿದೆ. ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಒಂದು ವರ್ಷದ ಪ್ರಮಾಣ ಪತ್ರ ನೀಡಲಾಗುತ್ತದೆ. ಆದರೆ ಕೆಲವೆಡೆ ದ್ವಿಚಕ್ರ ವಾಹನ ಸವಾರರಿಗೆ ಕೆಲವರು ಆರು ತಿಂಗಳ ಬದಲಾಗಿ ಒಂದು ವರ್ಷದ ‍ಪ್ರಮಾಣ ಪತ್ರ ನೀಡುವುದಾಗಿ ಹೇಳಿ ಹೆಚ್ಚಿನ ಹಣ ಪಡೆದುಕೊಳ್ಳುತ್ತಾರೆ. ಪೊಲೀಸರು ವಾಹನ ಹಿಡಿಯುತ್ತಾರೆ ಎಂದು ವಾಯು ಮಾಲಿನ್ಯ ತಪಾಸಣೆ ಮಾಡಿಸುವವರೇ ಅಧಿಕ. ಆರ್‌ಟಿಒ ನಿಗದಿ‍‍ಪಡಿಸಿದ ದರವನ್ನೇ ನೀಡಬೇಕು’ ಎಂದು ಹುಬ್ಬಳ್ಳಿಯ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಸಿಬ್ಬಂದಿ ತಿಳಿಸಿದರು.

’ದೂರು ನೀಡಿದರೆ ಕ್ರಮ‘
ಜಿಲ್ಲೆಯಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಕುರಿತು ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ವಾಹನ ಸವಾರರು ನಿಗದಿತ ದರ ಮಾತ್ರ ನೀಡಬೇಕು. ಹೆಚ್ಚಿನ ಹಣ ಪಡೆದಲ್ಲಿ ಅವರಿಂದ ರಶೀದಿ ಪಡೆಯಬೇಕು. ಇಲ್ಲವೇ ಹೆಚ್ಚಿನ ಹಣ ಕೇಳಿದ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಮಾಹಿತಿಯನ್ನು ಸಾಕ್ಷಿ ಸಮೇತ ನೀಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ವಿವರಗಳೊಂದಿಗೆ rtodharwadeast.63@gmail.comಗೆ ದೂರು ಸಹ ನೀಡಬಹುದು  ಎಂದು ಧಾರವಾಡ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.