ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಎಸ್.ಎಂ. ಕೃಷ್ಣನಗರ–ನೇಕಾರನಗರದಿಂದ ವಿಂಗಡಣೆಯಾಗಿ ರಚನೆಯಾಗಿರುವ 78ನೇ ವಾರ್ಡ್ ಅಭಿವೃದ್ಧಿಯಲ್ಲಿ ಅಂಬೆಗಾಲಿಡುತ್ತಿದೆ.
1.42 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ವಾರ್ಡ್‌ನ ಈಶ್ವರನಗರದಲ್ಲಿ ಮಾತ್ರ ಕೆಲವೆಡೆ ಸಿ.ಸಿ ರಸ್ತೆಗಳನ್ನು ಕಾಣಬಹುದು. ಉಳಿದೆಡೆ ರಸ್ತೆಗಳು ಹದಗೆಟ್ಟಿದ್ದು, ತಗ್ಗು ಗುಂಡಿಗಳು ಬಿದ್ದಿವೆ. ಸ್ವಚ್ಛತೆ ಮರಿಚಿಕೆಯಾಗಿದೆ ಎಂಬುದು ನಿವಾಸಿಗಳ ದೂರು.
ಎಂಟು–ಹತ್ತು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ರಾತ್ರಿ ವೇಳೆ ಓಡಾಡಲು ಭಯಪಡಬೇಕಾದ ಸ್ಥಿತಿ ಇದೆ. ಒಟ್ಟಾರೆ, ಸೌಲಭ್ಯಗಳಿಂದ ವಂಚಿತವಾಗಿರುವ ಈ ವಾರ್ಡ್, ಅಭಿವೃದ್ಧಿಗೆ ಅನುದಾನ ನಿರೀಕ್ಷಿಸುತ್ತಿದೆ.
ಈ ವಾರ್ಡ್‌ನ ಈಶ್ವರನಗರ, ನಗರದ ದೊಡ್ಡ ಕೊಳೆಗೇರಿಗಳಲ್ಲೊಂದು. ಇದು ಒಂದು ಕಿ.ಮೀ ವ್ಯಾಪ್ತಿ ಹೊಂದಿದೆ. ಒಂದನೇ ಕ್ರಾಸ್‌ನಿಂದ 19ನೇ ಕ್ರಾಸ್‌ವರೆಗೆ 500ಕ್ಕೂ ಹೆಚ್ಚು ಮನೆಗಳಿದ್ದು, ದಿನಗೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ.
ಈಶ್ವರನಗರ ಒಂದನೇ ಕ್ರಾಸ್‌ನಿಂದ ಕಮಾನಗಾರ ನ್ಯಾಷನಲ್ ಪಾರ್ಕ್‌ವರೆಗೆ ರಾಜಕಾಲುವೆ ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಲುವೆ ಹೂಳೆತ್ತಿ, ಅಕ್ಕಪಕ್ಕ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಸಹ ಸ್ಥಗಿತವಾಗಿದೆ.
ಎಸ್.ಎಂ.ಕೃಷ್ಣ ನಗರ ಮುಖ್ಯ ಉದ್ಯಾನ, ಎಸ್.ಎಂ. ಕೃಷ್ಣನಗರ ಸಣ್ಣ ಉದ್ಯಾನ, ಕಮಾನಗಾರ ನಗರ ಉದ್ಯಾನ ಹಾಗೂ ನ್ಯಾಷನಲ್ ಪಾರ್ಕ್ ಹೆಸರಿನ ಉದ್ಯಾನಗಳಿದ್ದು, ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ.
‘ಈಶ್ವರನಗರ, ರಾಘವೇಂದ್ರ ವೃತ್ತ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮೂಲಸೌಲಭ್ಯಗಳೇ ಇರಲಿಲ್ಲ. ನೂತನ ವಾರ್ಡ್ ರಚನೆಯಾದ ನಂತರ, ಪ್ರಗತಿಯ ಕನಸು ಕಂಡಿದ್ದೇವೆ. ಕುಡಿಯುವ ನೀರು, ಬೀದಿ ದೀಪ, ರಸ್ತೆಗಳ ಅಭಿವೃದ್ಧಿ ಆಗುವ ನಿರೀಕ್ಷೆಯಿದೆ’ ಎಂದು ರಾಘವೇಂದ್ರ ವೃತ್ತದ ನಿವಾಸಿ ವೆಂಕಟೇಶ ಹಳೇಮನಿ ತಿಳಿಸಿದರು.
‘ಈ ಮೊದಲು ಐದು–ಆರು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಎಲ್ ಆ್ಯಂಡ್ ಟಿ ಕಂಪನಿ ಹೊಸ ಪೈಪ್‌ಲೈನ್ ಅಳವಡಿಸಿದ ನಂತರ, ಎಂಟು–ಹತ್ತು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಸಮಸ್ಯೆ ಏನೆಂದು ಪ್ರಶ್ನಿಸಿದರೆ ತಾಂತ್ರಿಕ ಕಾರಣ ಎನ್ನುತ್ತಾರೆ. ಹಬ್ಬ, ಮದುವೆ ಹಾಗೂ ಇನ್ನಿತರ ಸಮಾರಂಭದ ಸಂದರ್ಭದಲ್ಲಿ ಕುಡಿಯುವ ನೀರಿಗೆ ಪರದಾಡುತ್ತೇವೆ. 20ಕ್ಕೂ ಹೆಚ್ಚು ಕಡೆ ಸರ್ಕಾರಿ ಕೊಳವೆಬಾವಿ ಇದ್ದು, ದಿನಬಳಕೆಯ ನೀರಿಗೆ ಸಮಸ್ಯೆಯಿಲ್ಲ’ ಎಂದು ರಾಜಲಕ್ಷ್ಮೀ ಬೀರಬಂದ ಹೇಳುತ್ತಾರೆ.
ಪ್ರಮುಖ ಬಡಾವಣೆಗಳು: ಈಶ್ವರನಗರ, ರಣದಮ್ಮ ಕಾಲೊನಿ, ರಾಘವೇಂದ್ರ ವೃತ್ತ, ಹೂಗಾರ ಪ್ಲಾಟ್, ಶಿವಸೋಮೇಶ್ವರ ನಗರ, ಕಮಾನಗಾರ ಪ್ಲಾಟ್, ಟೊಂಗಲಿ ಪ್ಲಾಟ್, ನೇಕಾರನಗರ.
ನೂತನ ವಾರ್ಡ್‌ಗೆ ಒಂದೊಂದಾಗಿ ಸೌಲಭ್ಯಗಳು ದೊರೆಯುತ್ತಿದ್ದು ಪಾಲಿಕೆಯಿಂದಲೂ ಅನುದಾನ ಸಿಗುತ್ತಿದೆ. ಸ್ವಚ್ಛತೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದುಶಿವಗಂಗಾ ಮಾನಶೆಟ್ಟರ್ ವಾರ್ಡ್ ಸದಸ್ಯೆ
ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ರಸ್ತೆ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ಕಸ ಸಂಗ್ರಹ ವಾಹನಗಳು ಮನೆಮನೆಗೆ ಬರುತ್ತಿಲ್ಲವಿನಾಯಕ ಸ್ಥಳೀಯ ನಿವಾಸಿ
‘ಆರೋಗ್ಯ ಕೇಂದ್ರಕ್ಕೆ ಜಾಗ ಗುರುತು’
ಜ್ವರ ನೆಗಡಿ ಬಂದರೂ ಕೆಎಂಸಿ–ಆರ್‌ಐ ಆಸ್ಪತ್ರೆ ಅಥವಾ ಚಿಟಗುಪ್ಪಿ ಆಸ್ಪತ್ರೆಗೆ ತೆರಳಬೇಕು. ಪಾಲಿಕೆಯಿಂದ ಕ್ಲಿನಿಕ್ ಆದರೂ ತೆರೆಯಿರಿ ಎಂದು ಸಾಕಷ್ಟು ಬಾರಿ ಅಧಿಕಾರಿಗಳಿಗೆ ವಿನಂತಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಗಟಾರ ರಸ್ತೆಪಕ್ಕ ತ್ಯಾಜ್ಯ ಬಿಸಾಡಿ ಹೋಗುತ್ತಾರೆ. ಕಸ ಸಂಗ್ರಹಿಸುವ ವಾಹನಗಳು ಬರುವುದಿಲ್ಲ ಎನ್ನುವುದು ಸ್ಥಳೀಯರ ಆರೋಪ. ‘ಆರೋಗ್ಯ ಕೇಂದ್ರ ಸ್ಥಾಪನೆಗೆ ಸಿದ್ದಿವಿನಾಯಕ ಬಡಾವಣೆಯಲ್ಲಿ ಜಾಗ ಗುರುತಿಸಲಾಗಿದೆ. ಆ ಕುರಿತು ಕಾಗದ ಪತ್ರಗಳ ಪರಿಶೀಲನೆ ನಡೆಯುತ್ತಿದೆ’ ಎಂದು ವಾರ್ಡ್ ಸದಸ್ಯೆ ಶಿವಗಂಗಾ ಮಾನಶೆಟ್ಟರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.