ADVERTISEMENT

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಆರೋಪ: ಸಿಐಡಿ ತನಿಖೆ ಆರಂಭ

ಸಿಐಡಿ ಎಸ್ಪಿ ಶಾಲೂ ನೇತೃತ್ವದಲ್ಲಿ ಮಾಹಿತಿ ಸಂಗ್ರಹ, ಇನ್‌ಸ್ಪೆಕ್ಟರ್‌ ಹೇಳಿಕೆ ಪಡೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 20:11 IST
Last Updated 10 ಜನವರಿ 2026, 20:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಹುಬ್ಬಳ್ಳಿ: ಮಹಿಳೆ ವಿವಸ್ತ್ರ ಆರೋಪದ ಪ್ರಕರಣ ಮತ್ತು ಕೇಶ್ವಾಪುರ ಠಾಣೆಯಲ್ಲಿ ಈ ಬಗ್ಗೆ ದಾಖಲಾಗಿದ್ದ ದೌರ್ಜನ್ಯ ಹಾಗೂ ಇತರೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದರು.

ADVERTISEMENT

ಬೆಂಗಳೂರಿನ ಸಿಐಡಿ ವಿಶೇಷ ವಿಚಾರಣಾ ವಿಭಾಗ (ಎಸ್‌ಇಡಿ)ದ ಎಸ್‌ಪಿ ಶಾಲೂ ನೇತೃತ್ವದ ಎಂಟು ಮಂದಿ ಅಧಿಕಾರಿಗಳು ಎರಡು ತಂಡಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಎಸಿಪಿ ಶಿವರಾಜ ಕಟಕಬಾವಿ ಅವರಿಂದ ಪ್ರಕರಣ ಹಸ್ತಾಂತರಿಸಿಕೊಂಡು, ಈವರೆಗೆ ನಡೆದ ತನಿಖೆಯ ಮಾಹಿತಿ ಸಂಗ್ರಹಿಸಿದರು.

ಒಂದು ತಂಡ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಅವರಿಂದ ಮಾಹಿತಿ ಪಡೆಯಿತು. ಮತ್ತೊಂದು ತಂಡ ಕೇಶ್ವಾಪುರ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಯಿಂದ ಪ್ರಕರಣದ ವಿವರ ಪಡೆಯಿತು.

ಪ್ರಕರಣದ ನಂತರ ಕಮಿಷನರ್‌ ಕಚೇರಿಗೆ ವರ್ಗಾವಣೆಯಾಗಿದ್ದ ಇನ್‌ಸ್ಪೆಕ್ಟರ್‌ ಕೆ.ಎಸ್‌.ಹಟ್ಟಿ ಅವರಿಂದ ಪ್ರಕರಣದ ಮಾಹಿತಿ ಪಡೆದು, ಹೇಳಿಕೆ ದಾಖಲಿಸಿಕೊಂಡಿತು.

ವಿವಸ್ತ್ರ ಆರೋಪ ಪ್ರಕರಣ ದಾಖಲಾಗಿಲ್ಲ: ಗಲಾಟೆಗೆ ಸಂಬಂಧಿಸಿ ಆರು ಪ್ರಕರಣಗಳು ದಾಖಲಾಗಿವೆ. ಮಹಿಳೆ ವಿವಸ್ತ್ರಗೊಂಡ ಆರೋಪಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿಲ್ಲ. ಅವರನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ, ವಿವಸ್ತ್ರ ವಿಡಿಯೊ ಪ್ರಸಾರ ಕುರಿತು ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ. ಹಲ್ಲೆ, ಜೀವ ಬೆದರಿಕೆ, ಕೊಲೆಯತ್ನ, ದೌರ್ಜನ್ಯ ಅಡಿಯಲ್ಲಿ ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲ ಹಾಗೂ ಸುಜಾತಾ ಹಂಡಿ ಅವರ ಕುಟುಂಬದಿಂದ ಉಳಿದ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.