ಹುಬ್ಬಳ್ಳಿ: ಸಮಗ್ರ ಕೃಷಿ ಹಾಗೂ ಕೃಷಿ ಉಪ ಕಸುಬುಗಳಿಂದ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಗ್ರಾಮದ ಯುವ ರೈತ ಉಮೇಶ ಗುಡ್ಡದ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರು ಬಿ.ಎ, ಬಿಪಿ.ಎಡ್ ಪದವೀಧರರು.
ಒಟ್ಟು 30 ಎಕರೆ ಜಮೀನಿದೆ. 20 ಎಕರೆಯಲ್ಲಿ ಹತ್ತಿ, ತಲಾ 2 ಎಕರೆಯಲ್ಲಿ ಹೆಸರು, ಶೇಂಗಾ ಮತ್ತು ಶ್ರೀಗಂಧ ಮರಗಳನ್ನು ಬೆಳೆದಿದ್ದಾರೆ. 3 ಎಕರೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಸಿದ್ದಾರೆ. ಇದು ಅಲ್ಲದೇ 52 ತೆಂಗು, 10 ಸೀತಾಫಲ, 10 ಪಪ್ಪಾಯ, 10–15 ಕರಿಬೇವು, ಚಿಕ್ಕು, ಸೇಬು, ನೆಲ್ಲಿ, ಪೇರಲ ಗಿಡಗಳನ್ನು ಬೆಳೆಸಿದ್ದಾರೆ.
ಆಡು ಸಾಕಾಣಿಕೆ: ಏಳು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುಂಕುಮಪಾಳ್ಯದಲ್ಲಿ ₹35 ಸಾವಿರಕ್ಕೆ ಈಯಲು ಬಂದ 5 ಆಡುಗಳನ್ನು (ಮೇಕೆ) ಖರೀದಿಸಿ, ಸಾಕಾಣಿಕೆ ಆರಂಭಿಸಿದರು. ಅದಕ್ಕೆ ₹20 ಲಕ್ಷ ವೆಚ್ಚದಲ್ಲಿ 100 ಅಡಿ ಉದ್ದದ, 400 ಅಡಿ ಅಗಲದ ಹೈಟೆಕ್ ಶೆಡ್ ನಿರ್ಮಿಸಿಕೊಂಡರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 20X20 ಅಳತೆಯ ಶೆಡ್‌ಗೆ ₹68 ಸಾವಿರ ನೆರವನ್ನೂ ಪಡೆದರು.
ಉಮೇಶ ಅವರ ಬಳಿ ಜಮುನಾಪುರಿ, ಶಿರೋಹಿ, ಸೊಜತ್ ತಳಿಯ ಗಂಡು ಮೇಕೆಗಳಿವೆ. 150 ಆಡುಗಳಿವೆ. 4 ತಿಂಗಳ ಮರಿಗೆ ₹8 ಸಾವಿರದಿಂದ ₹10 ಸಾವಿರ, 1 ವರ್ಷ ಪ್ರಾಯದ ಆಡಿಗೆ ₹15 ಸಾವಿರದಿಂದ ₹18 ಸಾವಿರ ವರೆಗೆ ದರ ಸಿಗುತ್ತದೆ. ಹಲವರು ತೋಟಕ್ಕೆ ಬಂದು ಖರೀದಿಸುತ್ತಾರೆ.
ಆಡಿನ ಗೊಬ್ಬರಕ್ಕೆ ಬೇಡಿಕೆ: ‘ತಿಂಗಳಿಗೆ 4 ಟ್ರ್ಯಾಕ್ಟರ್‌ನಷ್ಟು ಆಡಿನ ಗೊಬ್ಬರ ಉತ್ಪಾದನೆ ಆಗುತ್ತದೆ. ಅಡಿಕೆ ಬೆಳೆಗಾರರಿಂದ ಹೆಚ್ಚಿನ ಬೇಡಿಕೆ ಇದ್ದು, ಒಂದು ಟ್ರ್ಯಾಕ್ಟರ್‌ಗೆ ₹7 ಸಾವಿರದಂತೆ ಮಾರುತ್ತೇವೆ. ಆಡು ಸಾಕಣೆಯಿಂದ ವರ್ಷಕ್ಕೆ ₹ 5 ಲಕ್ಷ ಆದಾಯ ಪಡೆಯುತ್ತಿದ್ದೇವೆ’ ಎಂದು ಉಮೇಶ ಗುಡ್ಡದ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಳಿ ಸಾಕಾಣಿಕೆ: ‘50–100 ಜವಾರಿ ಕೋಳಿಗಳಿಂದ ತಿಂಗಳಿಗೆ 30 ಮೊಟ್ಟೆಗಳು ಸಿಗುತ್ತವೆ. ₹15ಕ್ಕೆ ಒಂದರಂತೆ ಮೊಟ್ಟೆ, ಅಂದಾಜು ₹1,000– 1,200ಕ್ಕೆ ಒಂದರಂತೆ ಕೋಳಿಗಳನ್ನು ಮಾರುತ್ತೇವೆ’ ಎಂದರು.
ಕೂರಿಗೆ, ಟ್ರ್ಯಾಕ್ಟರ್ ಸೇರಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯಂತ್ರೋಪಕರಣ ಹೊಂದಿದ್ದಾರೆ. 70X100X7 ಅಳತೆಯ ಕೃಷಿ ಹೊಂಡವನ್ನೂ ನಿರ್ಮಿಸಿಕೊಂಡಿದ್ದಾರೆ.
ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ. ಕೃಷಿ ಕ್ಷೇತ್ರವು ದುಡಿಮೆ ಜೊತೆಗೆ ಹತ್ತಾರು ಜನರಿಗೆ ನನ್ನ ಪ್ರಗತಿ ಪರಿಚಯಿಸಿದೆಉಮೇಶ ಗುಡ್ಡದ ಯುವ ರೈತ ಭದ್ರಾಪುರ ಅಣ್ಣಿಗೇರಿ
ತರಬೇತಿ ಪ್ರಶಸ್ತಿ
ರೈತ ಉಮೇಶ ಗುಡ್ಡದ ಅವರು ಕೃಷಿ ಕಾರ್ಯಾಗಾರಗಳಲ್ಲಿ ಉಪನ್ಯಾಸ ನೀಡುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಹೊಸ ಮಾದರಿ ತಂತ್ರಜ್ಞಾನಗಳ ಬಗ್ಗೆ ವಿವರಿಸುತ್ತಾರೆ. ಅವರು ಕೃಷಿ ಇಲಾಖೆಯ ‘ಉದಯೋನ್ಮುಖ ಕೃಷಿಕ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.