ADVERTISEMENT

ಹುಬ್ಬಳ್ಳಿ: ಪ್ರೌಢಶಾಲಾ ವಿದ್ಯಾರ್ಥಿಗಳ ‘ಯುವ ಸಂಸತ್‌ ಸ್ಪರ್ಧೆ’

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:57 IST
Last Updated 5 ನವೆಂಬರ್ 2025, 4:57 IST
ಹುಬ್ಬಳ್ಳಿಯ ಮಿನಿ ವಿಧಾನಸೌಧದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ‘ಯುವ ಸಂಸತ್‌ ಸ್ಪರ್ಧೆ’ ಏರ್ಪಡಿಸಲಾಗಿತ್ತು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಮಿನಿ ವಿಧಾನಸೌಧದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ‘ಯುವ ಸಂಸತ್‌ ಸ್ಪರ್ಧೆ’ ಏರ್ಪಡಿಸಲಾಗಿತ್ತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಅಭಿವೃದ್ಧಿ ಕಾಮಗಾರಿ ಕುಂಠಿತ, ಗುಂಡಿ ಬಿದ್ದ ರಸ್ತೆ ಸರಿಪಡಿಸಲು ಸರ್ಕಾರ ವಿಫಲ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷದ ನಾಯಕರು, ಆಡಳಿತ ಪಕ್ಷದವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸಮಜಾಯಿಷಿ ನೀಡಲು ಮುಂದಾದರೂ, ಮೇಜುಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು...

ಹುಬ್ಬಳ್ಳಿಯ ಪ್ರೌಢಶಾಲಾ ಮಕ್ಕಳ ‘ಯುವ ಸಂಸತ್‌ ಸ್ಪರ್ಧೆ’ಯ ಮಾದರಿ ಅಧಿವೇಶನದ ಶೂನ್ಯವೇಳೆಯಲ್ಲಿ ಕಂಡು ಬಂದ ಸನ್ನಿವೇಶವಿದು. ನಗರದ ಮಿನಿ ವಿಧಾನಸೌಧದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ತಾಲ್ಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ವಲಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿವಿಧ ಶಾಲೆಗಳ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚುನಾವಣೆ ಪ್ರಕ್ರಿಯೆ ಮೂಲಕ ಬಹುಮತ ಪಡೆದ ತಂಡ ಸರ್ಕಾರ ರಚಿಸಿತು. ಪ್ರತಿಸ್ಪರ್ಧಿ ತಂಡ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿತು. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಯಿತು. ಮೂರು ಸಾವಿರಮಠದ ಗಂಗಾಧರ ಪ್ರೌಢಶಾಲೆಯ ವಿದ್ಯಾರ್ಥಿ ಚರಣ ಗುರಗುಂಟಿ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ADVERTISEMENT

ಗ್ಯಾರಂಟಿ ಯೋಜನೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಬಿಡ್ನಾಳದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿನಿ ಆಫ್ರಿನ್‌ ತುಗ್ಗಾನಟ್ಟಿ, ‘ಉಚಿತ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಗುಂಡಿ ಬಿದ್ದ ರಸ್ತೆ ದುರಸ್ತಿ ಮಾಡಲು ಸಹ ಸರ್ಕಾರದ ಬಳಿ ಹಣವಿಲ್ಲವಾಗಿದೆ. ಈ ಕುರಿತು ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಆರ್.ಎನ್‌.ಎಸ್. ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಅಂಕಲಿ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು, ಎಲ್ಲ ವರ್ಗದವರು ಒಪ್ಪಿಕೊಂಡಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗುತ್ತಿದ್ದು, ರಸ್ತೆ ದುರಸ್ತಿಗೆ ವಿಶೇಷ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಆಡಳಿತ ಪಕ್ಷದ ಸದಸ್ಯರು ಹಾಗೂ ಸಂಬಂಧಪಟ್ಟ ಸಚಿವರು ಕೆಲವೊಮ್ಮೆ ನೀಡಿದ್ದ ಅಸಂಬದ್ದ ಉತ್ತರಕ್ಕೆ, ಸಭಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಹಾರಿಕೆ ಉತ್ತರ ನೀಡುವುದು ಸರಿಯಲ್ಲ. ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದರು. ಶಾಸಕರ ಗದ್ದಲ ಗಮನಿಸಿ, ಶಿಸ್ತು ಮೀರಿದರೆ ಅಮಾನತು ಮಾಡುವುದಾಗಿ ಎಚ್ಚರಿಸಿದರು.

ಕಲಬೆರಕೆ ಆಹಾರ, ರಾಸಾಯನಿಕಯುಕ್ತ ಪಾನೀಯ ಮತ್ತು ತಿಂಡಿ–ತಿನಿಸು, ಪಠ್ಯ–ಪುಸ್ತಕ ವಿತರಣೆಯಲ್ಲಿ ವಿಳಂಬ, ಮಕ್ಕಳ ಹಾಜರಾತಿ ಕಡಿಮೆ, ಸರ್ಕಾರಿ ಶಾಲೆಗಳ ದುಸ್ಥಿತಿ, ಭ್ರೂಣ ಹತ್ಯೆ, ರೈತರ ಆತ್ಮಹತ್ಯೆ, ಬೆಂಬಲ ಬೆಲೆ, ಪರಿಹಾರ ನೀಡುವಲ್ಲಿ ವಿಳಂಬ, ಸೈಬರ್‌ ಕ್ರೈಂ, ಎಐ ತಂತ್ರಜ್ಞಾನದ ಸಾಧಕ–ಬಾಧಕ, ಭ್ರಷ್ಟಾಚಾರ, ಪೊಲೀಸರ ದರ್ಪ ಸೇರಿದಂತೆ ಅನೇಕ ವಿಷಯಗಳ ಕುರಿತು ಎರಡು ತಾಸು ಚರ್ಚೆ ನಡೆಯಿತು.

ತಾ.ಪಂ. ಇಒ ಆರ್.ವೈ.ಹೊಸಮನಿ, ಬಿಇಒ ಎಚ್.ಎಂ. ಫಡ್ನೇಶಿ, ಸಮನ್ವಯಾಧಿಕಾರಿ ಅನುಸೂಯ ಯಕ್ಕುಂಡಿ, ವನಿತಾ ಆರ್., ಎಸ್.ಎಂ. ಅಂಕಲಿ, ಪ್ರವೀಣ ಸಿದ್ದನಗೌಡರ, ಅನುರಾಧ ಕೆ., ಶ್ರೀದೇವಿ ನಾಗಲಿಕರ, ಶಿಕ್ಷಕರಾದ ಎಸ್.ವಿ. ಪಟ್ಟಣಶೆಟ್ಟಿ, ಶ್ರೀನಿವಾಸ ವಾಲಿ, ಉಳ್ಳಿಗೇರಿ, ಚಿಕ್ಕನಗೌಡರ, ಕಿಶೋರ್ ಇದ್ದರು.

ರಾಜಕೀಯ ಕಲಾಪಗಳು ಹೇಗೆ ನಡೆಯುತ್ತವೆ ಎನ್ನುವ ಕುರಿತು ಮಕ್ಕಳಿಗೆ ಕಲಿಕಾ ಹಂತದಲ್ಲಿಯೇ ತಿಳಿವಳಿಕೆ ನೀಡುವುದು ಈ ಯುವ ಸಂಸತ್‌ ಸ್ಪರ್ಧೆಯ ಉದ್ದೇಶ
ಆರ್.ವೈ. ಹೊಸಮನಿ ಇಒ ಹುಬ್ಬಳ್ಳಿ ತಾ.ಪಂ

ಜಿಲ್ಲಾಮಟ್ಟದ ಸ್ಪರ್ಧೆ 6ರಂದು 

ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ 10 ವಿದ್ಯಾರ್ಥಿಗಳನ್ನು ಧಾರವಾಡದಲ್ಲಿ ನ. 6ರಂದು ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ನಾಗಶೆಟ್ಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಕೀರ್ತಿ ಹಂಗರಕಿ ಪೆಂಡಾರಗಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆಸ್ಮಿತಾ ಕಳಸಣ್ಣವರ ಕೇಶ್ವಾಪುರದ ಕಾನ್ವೆಂಟ್‌ ಶಾಲೆಯ ಸಂಜನಾ ಅಮರಗೊಳ ವಿದ್ಯಾನಿಕೇತನ ಪ್ರೌಢಶಾಲೆಯ ವೈಷ್ಣವಿ ಅಂಕಲಿ ವರ್ಷಾ ಬೆಟಗೇರಿ ಲ್ಯಾಮಿಂಗ್ಟನ್‌ ಬಾಲಕರ ಪ್ರೌಢಶಾಲೆಯ ಗುರುನಾಥ ಪತ್ತಾರ ಬಿಡ್ನಾಳ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಆಫ್ರಿನ್‌ ತುಗ್ಗಾನಟ್ಟಿ ಮೂರು ಸಾವಿರಮಠದ ಪ್ರೌಢಶಾಲೆಯ ಪೂಜಾ ಶಿಂಧೆ ದೀಪ್ತಿ ಹಗೆಕೇರಿ ಮತ್ತು ಲ್ಯಾಮಿಂಗ್ಟನ್‌ ಬಾಲಕಿಯರ ಪ್ರೌಢಶಾಲೆಯ ಸ್ಫೂರ್ತಿ ಶಿರನಹಳ್ಳಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.