ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಭಾನುವಾರ ನಗರದಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಕೇಶ್ವಾಪುರದ ಕನ್ಯಾನಗರದಿಂದ ಸ್ಟೇಷನ್ ರಸ್ತೆಯ ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು.
ಸಮಿತಿ ಅಧ್ಯಕ್ಷ ತಮ್ಮು ನರಸಿಂಹಲು, ‘ಕುಟುಂಬದವರ ಜತೆ ಪ್ರವಾಸಕ್ಕೆ ತೆರಳಿದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ, ಅಮಾಯಕರ ಜೀವ ತೆಗೆದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.
ನಾಗೇಶ ಕಲ್ಲು, ಶಕ್ತಿ ವೆಂಕಟರಾವ್, ಶ್ರೀಕಾಂತ ಮೇಸ್ತ್ರಿ, ಜಾನ್ ಪೀಟರ್, ವಿಕ್ಟರ್ ಪಾಲ್ ಪಾಲ್ಗೊಂಡಿದ್ದರು.
ಪ್ರತಿಭಟನೆ: ಪಹಲ್ಗಾಮ್‌ನಲ್ಲಿ ನಡೆದ ದಾಳಿ ಖಂಡಿಸಿ ಭಾನುವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಮಠಾಧೀಶರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಒಕ್ಕೂಟದ ಸದಸ್ಯರು, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.
‘ಭದ್ರತಾ ವೈಫಲ್ಯದಿಂದಾಗಿ ಉಗ್ರರು ಅಮಾಯಕರ ಪ್ರಾಣ ತೆಗೆದಿದ್ದಾರೆ. ಕಾಶ್ಮೀರ ಸೂಕ್ಷ್ಮ ಪ್ರದೇಶವೆಂದು ಗೊತ್ತಿದ್ದರೂ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸದೆ ಇದ್ದದ್ದು ಅಕ್ಷಮ್ಯ. ಅಮಾಯಕರ ಸಾವಿಗೆ ನ್ಯಾಯ ಸಿಗಬೇಕೆಂದರೆ, ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಲೇಬೇಕಿದೆ’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ನಿಂಗಪ್ಪ ಕೆಳಗೇರಿ, ರಘು ಬಳ್ಳಾರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.