ADVERTISEMENT

ಪ್ರಗತಿ ಹಾದಿಯಲ್ಲಿ ಹುಬ್ಬಳ್ಳಿ ಏರ್ ಪೋರ್ಟ್...

ವಿಮಾನ ನಿಲ್ದಾಣ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸಲು ಸಜ್ಜಾದ ಎಎಐ

ನಾಗರಾಜ ಚಿನಗುಂಡಿ
Published 8 ಫೆಬ್ರುವರಿ 2024, 5:46 IST
Last Updated 8 ಫೆಬ್ರುವರಿ 2024, 5:46 IST
<div class="paragraphs"><p>ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರಂಭದಲ್ಲಿ ನಿರ್ಮಿಸಿದ್ದ ಮಿನಿ ಟರ್ಮಿನಲ್‌ ಕಟ್ಟಡವನ್ನು ಸರಕು ಸಾಗಣೆ ನಿರ್ವಹಿಸಲು ಬಳಕೆ ಮಾಡಲಾಗುತ್ತಿದೆ</p></div>

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರಂಭದಲ್ಲಿ ನಿರ್ಮಿಸಿದ್ದ ಮಿನಿ ಟರ್ಮಿನಲ್‌ ಕಟ್ಟಡವನ್ನು ಸರಕು ಸಾಗಣೆ ನಿರ್ವಹಿಸಲು ಬಳಕೆ ಮಾಡಲಾಗುತ್ತಿದೆ

   

ಹುಬ್ಬಳ್ಳಿ: ವಾಣಿಜ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಮೇಣ ಅಭಿವೃದ್ಧಿಯತ್ತ ಚಾಚಿಕೊಳ್ಳುತ್ತಿರುವ ಹುಬ್ಬಳ್ಳಿಗೆ ಪೂರಕವಾಗಿ ವಿಮಾನ ನಿಲ್ದಾಣವು ಕೂಡಾ ತನ್ನ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮುಂದಾಗಿರುವುದು ಗಮನಾರ್ಹ.

ಸಮಯಕ್ಕೆ ಆದ್ಯತೆ ನೀಡಿ ಸಂಚರಿಸುವ ಗಣ್ಯಾತಿಗಣ್ಯರು, ಗಣ್ಯರು, ಉದ್ಯಮಿಗಳು, ಸಂಪನ್ಮೂಲ ವ್ಯಕ್ತಿಗಳು, ವ್ಯಾಪಾರಿಗಳು, ವೈದ್ಯರು, ಸಂಗೀತಗಾರರು, ಕಲಾವಿದರು, ಪ್ರವಾಸಿಗರು, ಅನಿವಾಸಿ ಭಾರತೀಯರು ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಆಗಮಿಸುವುದು ಮತ್ತು ನಿರ್ಗಮಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಲ್ಲದೆ, ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಮಹಾನಗರವು ಆಕರ್ಷಕ ತಾಣವಾಗಿ ಮಾರ್ಪಟ್ಟಿದ್ದರಿಂದ ಬಂಡವಾಳ ಹೂಡಿಕೆದಾರರು ಭೇಟಿ ನೀಡುತ್ತಿದ್ದಾರೆ.

ADVERTISEMENT

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಮೆಟ್ರೊಪಾಲಿಟನ್‌ ನಗರಗಳಿಗೆ ಹುಬ್ಬಳ್ಳಿಯಿಂದ ಒಂದೇ ದಿನದಲ್ಲಿ ಹೋಗಿ ಬರಲು ಅಥವಾ ಬಂದು ಹೋಗಬೇಕು ಎನ್ನುವವರಿಗೆ ವಿಮಾನದ ಪ್ರಯಾಣ ಅನಿವಾರ್ಯ. ಇಂಥವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಪರಿಣಾಮ ಹುಬ್ಬಳ್ಳಿಯಿಂದ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಮುಂಗಡ ಟಿಕೆಟ್‌ ಕಾದಿರಿಸಿಕೊಳ್ಳುವ ಸ್ಥಿತಿ ಇದೆ.

2023ನೇ ಸಾಲಿನ ಆರಂಭದಿಂದಲೂ ಹುಬ್ಬಳ್ಳಿಯಿಂದ ಸಂಚರಿಸುವ ವಿಮಾನ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದಕ್ಕೆ ತಕ್ಕಂತೆ  ಸೌಲಭ್ಯ ವಿಸ್ತರಿಸಲು ವಿಶಾಲವಾದ ಹೊಸ ಟರ್ಮಿನಲ್‌ ನಿರ್ಮಿಸುವ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸುವುದಕ್ಕೆ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಸಿದ್ಧತೆ ಮಾಡಿಕೊಂಡಿದೆ.

ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನ ಸಂಚಾರ ಆರಂಭಿಸುವುದಕ್ಕೆ 2022ರ ನವೆಂಬರ್‌ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಸಿರು ನಿಶಾನೆ ತೋರಿಸಿದರು  –ಸಾಂದರ್ಭಿಕ ಚಿತ್ರ

3,600 ಚದರ ಮೀಟರ್‌ ಕಟ್ಟಡವಿರುವ ಟರ್ಮಿನಲ್‌ವೊಂದನ್ನು 2017ರಲ್ಲಿ ಲೋಕಾರ್ಪಣೆ ಮಾಡಿ, ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಏಕಕಾಲಕ್ಕೆ 300 ಆಗಮನ ಮತ್ತು 300 ನಿರ್ಗಮನವಾಗುವ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಮಾತ್ರ ಇದೆ. ಏಕಕಾಲಕ್ಕೆ ಎರಡು ವಿಮಾನಗಳಿಂದ ಬರುವ ಪ್ರಯಾಣಿಕರನ್ನು ನಿರ್ವಹಿಸುವುದು ಈಗ ಅಸಾಧ್ಯ. ಅಲ್ಲದೆ, 300 ಕ್ಕೂ ಹೆಚ್ಚು ಆಸನ ಸಾಮರ್ಥ್ಯದ ವಿಮಾನದ ಪ್ರಯಾಣಿಕರನ್ನು ನಿರ್ವಹಿಸುವುದು ಸದ್ಯಕ್ಕೆ ಅಸಾಧ್ಯ.

ಹೊಸ ಟರ್ಮಿನಲ್‌:

ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಿಮಾನ ನಿಲ್ದಾಣವನ್ನು ಉನ್ನತೀಕರಣ ಮಾಡಲಾಗುತ್ತಿದೆ. ಹೊಸದಾಗಿ ನಿರ್ಮಿಸುವ ಟರ್ಮಿನಲ್‌ 20 ಸಾವಿರ ಚದರ ಮೀಟರ್‌ ವಿಸ್ತಾರವಾಗಿ ಇರಲಿದ್ದು, 1,200 ನಿರ್ಗಮಿಸುವ ಮತ್ತು 1200 ಆಗಮಿಸುವ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.

ಹಾಲಿ ಟರ್ಮಿನಲ್‌ಗೆ ಹೊಂದಿಕೊಂಡು ಎಡ–ಬಲಭಾಗದಲ್ಲಿ ಬಹುಮಹಡಿಗಳಿರುವ ಹೊಸ ಟರ್ಮಿನಲ್‌ ತಲೆ ಎತ್ತಲಿದೆ. ವಿಮಾನ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಟರ್ಮಿನಲ್‌ನಲ್ಲಿ ನಾಲ್ಕು ಏರೋಬ್ರಿಡ್ಜ್‌ (ನಿಲ್ದಾಣದಿಂದ ನೇರ ವಿಮಾನದೊಳಗೆ ಪ್ರವೇಶಿಸುವ ವ್ಯವಸ್ಥೆ)ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಈಗಿರುವ ಟರ್ಮಿನಲ್‌ನಲ್ಲಿ ಮೂರು ವಿಮಾನಗಳು ತಂಗುವುದಕ್ಕೆ ವ್ಯವಸ್ಥೆ ಇದೆ. ಹೊಸ ಟರ್ಮಿನಲ್‌ನಲ್ಲಿ ಇನ್ನೂ ಆರು ವಿಮಾನಗಳು ತಂಗುವುದಕ್ಕೆ ವ್ಯವಸ್ಥೆ ಬರಲಿದೆ. ಒಟ್ಟು ಒಂಭತ್ತು ವಿಮಾನಗಳು ಏಕಕಾಲದಲ್ಲಿ ತಂಗಬಹುದಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಕ್ರಮೇಣ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಟರ್ಮಿನಲ್‌ ಉದ್ಘಾಟನೆ ಸಂದರ್ಭದಲ್ಲಿಯೇ ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕವಾಗಿ ₹273 ಕೋಟಿ ಮೊತ್ತದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ಜೂನ್‌ನಲ್ಲಿ ಅನುಮೋದನೆ ನೀಡಿತ್ತು. 

ಟೆಂಡರ್ ಪ್ರಕ್ರಿಯೆ:

ಹುಬ್ಬಳ್ಳಿಯಲ್ಲಿ ₹260 ಕೋಟಿ ವೆಚ್ಚದಲ್ಲಿ ಹೊಸ ಟರ್ಮಿನಲ್‌ ಕಟ್ಟಡ ನಿರ್ಮಿಸಿ ಕೊಡುವುದಕ್ಕೆ ಆಸಕ್ತ ಕಂಪೆನಿಗಳಿಂದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟೆಂಡರ್‌ ಆಹ್ವಾನಿಸಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಎಂಟು ಕಂಪೆನಿಗಳ ಪೈಕಿ ₹220 ಕೋಟಿ ಕನಿಷ್ಠ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಮತ್ತು ಮುಂದಿನ ಏಳು ವರ್ಷ ನಿರ್ವಹಿಸುವುದಾಗಿ ಉಲ್ಲೇಖಿಸಿದ್ದ ಹರ್ಷಾ ಕನ್ಸ್‌ಟ್ರಕ್ಷನ್‌ ಪ್ರೈವೆಟ್‌ ಲಿಮಿಟೆಡ್‌ (ಎಚ್‌ಸಿಪಿಎಲ್‌) ಕಂಪೆನಿಯನ್ನು ಆಯ್ಕೆ ಮಾಡಲಾಗಿದೆ.

ಇದೀಗ ಕಾಮಗಾರಿ ಆರಂಭಿಸುವುದಕ್ಕೆ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸಲು ಕೇಂದ್ರ ಸಚಿವರ ಸಚಿವರ ಸಮ್ಮತಿ ಗಾಗಿ ಕಾಯಲಾಗುತ್ತಿದೆ. ಬಹುತೇಕ ಇದೇ ಫೆಬ್ರುವರಿಯಲ್ಲಿ ಹೊಸ ಟರ್ಮಿನಲ್‌ ಕಾಮಗಾರಿ ಆರಂಭವಾಗಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ದಟ್ಟಣೆ 2022ರಲ್ಲಿ ಸರಿಸಮವಾಗಿತ್ತು. 2023ರ ಅಂಕಿಅಂಶಗಳ ಪ್ರಕಾರ, ಹುಬ್ಬಳ್ಳಿಯಿಂದ ಪ್ರಯಾಣಿಸುವವರು ಮತ್ತು ಸರಕು ಸಾಗಣೆಯಲ್ಲಿ ಹೆಚ್ಚಳವಾಗಿದೆ.

2023ರ ಅಕ್ಟೋಬರ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 30,308 ಪ್ರಯಾಣಿಕರ ಆಗಮನ–ನಿರ್ಗಮನವಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ 29,285 ಪ್ರಯಾಣಿಕರ ಆಗಮನ–ನಿರ್ಗಮನವಾಗಿದೆ. ನವೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ಮತ್ತಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು 31,447 ಕ್ಕೆ ತಲುಪಿದೆ. 2023 ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಏಳು ತಿಂಗಳಲ್ಲಿ ಹುಬ್ಬಳ್ಳಿಯಿಂದ ಒಟ್ಟು 2,10,642 ಪ್ರಯಾಣಿಕರು ಸಂಚರಿಸಿದ್ದಾರೆ. ಇದೇ ವೇಳೆ, ಬೆಳಗಾವಿಯಿಂದ ಒಟ್ಟು 1,55,712 ಪ್ರಯಾಣಿಕರು ಸಂಚರಿಸಿದ್ದಾರೆ. 

ಕಳೆದ ಸೆಪ್ಟೆಂಬರ್‌ ಚಳಿಗಾಲದಿಂದ ಹುಬ್ಬಳ್ಳಿ –ದೆಹಲಿ ಹಾಗೂ ಹುಬ್ಬಳ್ಳಿ–ಮುಂಬೈಗೆ 72 ಆಸನಗಳ ಬದಲು 180 ಆಸನಗಳ ಸಾಮರ್ಥ್ಯದ ‘ಏರ್‌ಬಸ್‌–320’ ವಿಮಾನಗಳ ಸಂಚಾರ ಆರಂಭಿಸಲಾಗಿದೆ.

ಹುಬ್ಬಳ್ಳಿಯಿಂದ ದೆಹಲಿ, ಹೈದರಾಬಾದ್‌, ಮುಂಬೈ, ಚೆನ್ನೈ ಹಾಗೂ ಬೆಂಗಳೂರಿಗೆ ಹೋಗಿ ಬರುವುದಕ್ಕೆ ವಿಮಾನ ಸೇವೆ ಲಭ್ಯವಿದೆ. ಶೀಘ್ರದಲ್ಲೇ ಪುಣೆಗೆ ವಿಮಾನ ಸೇವೆ ಆರಂಭವಾಗಲಿದ್ದು, ವಾರದಲ್ಲಿ ಎರಡು ವಿಮಾನಗಳು ಸಂಚರಿಸಲಿವೆ.

15 ಕೆ.ಜಿ ಬ್ಯಾಗೇಜ್‌ ಉಚಿತ
ವಿಮಾನ ಪ್ರಯಾಣಿಕರು ತಮ್ಮ ಆಸನಗಳ ಮೇಲಿನ ಕ್ಯಾಬಿನ್‌ನಲ್ಲಿ ಇರಿಸುವ ಬ್ಯಾಗ್‌ ತೂಕ ಗರಿಷ್ಠ 7 ಕೆಜಿ ವರೆಗೂ ಹೊಂದಲು ಅವಕಾಶವಿದೆ. ಅದಕ್ಕಿಂತ ಹೆಚ್ಚು ತೂಕ ಇರುವ ಬ್ಯಾಗೇಜ್‌ನ್ನು ಸರಕು ವಿಭಾಗದಲ್ಲಿ ಪ್ರತ್ಯೇಕವಾಗಿ ಇರಿಸಲು ಕೊಡಬೇಕಾಗಿದ್ದು, ಅದು ಗರಿಷ್ಠ 15 ಕೆಜಿವರೆಗೂ ಉಚಿತ. ಅದಕ್ಕಿಂತ ಹೆಚ್ಚು ತೂಕ ಹೊಂದಿದ್ದರೆ ಅದಕ್ಕೆ ಶುಲ್ಕ ಕೊಡಬೇಕಾಗುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪೊಲೀಸ್‌ ತಪಾಸಣೆ ಬಳಿಕ ಬೋರ್ಡಿಂಗ್‌ ಏರಿಯಾಗೆ ತೆರಳುವ ಪೂರ್ವ ಎಲ್ಲ ಬ್ಯಾಗ್‌ಗಳನ್ನು ಎಕ್ಸ್‌ರೇ ತಪಾಸಣೆ ಮಾಡುತ್ತಾರೆ. ರಾಸಾಯನಿಕ ಇರುವ ಮತ್ತು ಲೋಹದ ಸರಕುಗಳನ್ನು ಕ್ಯಾಬಿನ್‌ ಬ್ಯಾಗೇಜ್‌ನೊಂದಿಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಬೋರ್ಡಿಂಗ್‌ ಏರಿಯಾದಿಂದ ಕೋಚ್‌ ಬಸ್‌ ಮೂಲಕ ಪ್ರಯಾಣಿಕರನ್ನು ವಿಮಾನ ನಿಲುಗಡೆಯಾದ ಕಡೆಗೆ ತಲುಪಿಸುತ್ತಾರೆ. ವಿಮಾನ ದ್ವಾರಕ್ಕೆ ಹೊಂದಿಕೊಂಡು ಕೋಚ್‌ ವಾಹನ ಇರುತ್ತದೆ. ಅದರ ಮೂಲಕ ವಿಮಾನದೊಳಗೆ ಪ್ರವೇಶಿಸಬೇಕು. ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿದ ಬಳಿಕ ಪ್ರಯಾಣಿಕರು ಟರ್ಮಿನಲ್‌ ಕಟ್ಟಡದಿಂದ ಏರೋಬ್ರಿಡ್ಜ್‌ ಮೂಲಕ ನೇರವಾಗಿ ವಿಮಾನದೊಳಗೆ ಪ್ರವೇಶಿಸಲು ಸೌಲಭ್ಯ ಇರಲಿದೆ. ಒಟ್ಟು ನಾಲ್ಕು ಏರೋಬ್ರಿಡ್ಜ್‌ಗಳು ನಿರ್ಮಾಣವಾಗಲಿವೆ.

400ಕ್ಕೂ ಹೆಚ್ಚು ಸಿಬ್ಬಂದಿ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಸೇರಿ 400 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದ 66 ಅಧಿಕಾರಿಗಳು, ಕರ್ನಾಟಕ ಪೊಲೀಸ್‌ ಇಲಾಖೆಯಿಂದ ಸುಮಾರು 100 ಪೊಲೀಸರು, ಇಂಡಿಗೋ ವಿಮಾನ ಕಂಪೆನಿ ಸಿಬ್ಬಂದಿ ಸುಮಾರು 150 ಹಾಗೂ ಎಎಐನಿಂದ ವಹಿಸಿದ ಕೆಲಸ ನಿರ್ವಹಿಸಲು ಸುಮಾರು 200 ರಷ್ಟು ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೂ ನಿಲ್ದಾಣದ ಕಾರ್ಯನಿರ್ವಹಣೆ ಇದ್ದು, ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ಯಾಂಟಿನ್‌ ಸೌಲಭ್ಯವಿಲ್ಲ:

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸದ್ಯ ಕ್ಯಾಂಟಿನ್‌ ಸೌಲಭ್ಯವಿಲ್ಲ.  ಚಹಾ, ಬರ್ಗರ್‌ ಹಾಗೂ ಸಲಾಡ್‌ ಮಳಿಗೆ ಮಾತ್ರ ಇದೆ. ಕ್ಯಾಂಟಿನ್‌ ಸೌಲಭ್ಯವಿಲ್ಲದ ಕಾರಣ ಪ್ರಯಾಣಿಕರು ಮತ್ತು ನಿಲ್ದಾಣದ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಕ್ಯಾಂಟಿನ್‌ ಆರಂಭಿಸುವುದಕ್ಕೆ ಗುತ್ತಿಗೆ ವಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ವಿದ್ಯುತ್‌ ಸ್ವಾವಲಂಬಿ ನಿಲ್ದಾಣ:

ಹುಬ್ಬಳ್ಳಿ ವಿಮಾನ ನಿಲ್ದಾಣವು ವಿದ್ಯುತ್‌ ವಿಷಯದಲ್ಲಿ ಸ್ವಾವಲಂಬಿ ವ್ಯವಸ್ಥೆ ಹೊಂದಿದೆ. ನಿಲ್ದಾಣದ ಆವರಣದಲ್ಲಿ ಸುಮಾರು 24 ಎಕರೆ ವಿಸ್ತಾರದಲ್ಲಿ ₹43 ಕೋಟಿ ವೆಚ್ಚದಲ್ಲಿ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸಿದ್ದು, ಪ್ರತಿದಿನ 8 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಹೆಚ್ಚುವರಿ ವಿದ್ಯುತ್‌ನ್ನು ಹೆಸ್ಕಾಂ ಖರೀದಿಸುತ್ತಿದೆ. ಅಲ್ಲದೆ, ಹುಬ್ಬಳ್ಳಿ ವಿಮಾನ ನಿಲ್ದಾಣವು ಸಂಪೂರ್ಣ ಹಸಿರುಮಯ ಎನ್ನುವ ಖ್ಯಾತಿ ಹೊಂದಿದೆ.

ವಿಮಾನ ನಿಲ್ದಾಣ ಸ್ಥಾಪನೆ
1954ರ ಪೂರ್ವದಲ್ಲಿ ಬಾಂಬೆ ಪ್ರಾಂತದ ಭಾಗವಾಗಿದ್ದ ಹುಬ್ಬಳ್ಳಿಯು ರಾಜ್ಯಗಳ ಪುನರವಿಂಗಡನೆ ಕಾಯ್ದೆ ಜಾರಿಯಾದ ಬಳಿಕ ಈ ಕಡೆಗೆ ಬಂತು. ಈ ಸಂದರ್ಭದಲ್ಲಿಯೇ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವೊಂದನ್ನು ಸ್ಥಾಪಿಸಬೇಕೆನ್ನುವ ವಿಚಾರ ಅಧಿಕಾರಿಗಳ ಮಟ್ಟದಲ್ಲಿ ಮೊಳಕೆ ಒಡೆಯಿತು. 1974ರಲ್ಲಿ ವಿಮಾನ ನಿಲ್ದಾಣಕ್ಕಾಗಿ ಒಟ್ಟು 588 ಎಕರೆ ಸ್ವಾಧೀನ ಮಾಡಿಕೊಂಡು, ರಾಜ್ಯ ಲೋಕೋಪಯೋಗಿ ಇಲಾಖೆಯು ವಿಮಾನ ನಿಲ್ದಾಣ ನಿರ್ಮಾಣ ಮಾಡಿತು. 1996 ರಲ್ಲಿ ವಿಮಾನ ನಿಲ್ದಾಣಗಳ ಪ್ರಾಧಿಕಾರವು ತನ್ನ ವಶಕ್ಕೆ ಪಡೆಯಿತು. 2003ರಲ್ಲಿ ಏರ್‌ ಡೆಕ್ಕನ್‌ ವಿಮಾನ ಕಂಪೆನಿಯು ಸೇವೆ ಆರಂಭಿಸಿತು. ಆನಂತರ ಕಿಂಗ್‌ಫಿಶರ್‌ ಕಂಪನಿಯು ಬೆಂಗಳೂರು–ಮುಂಬೈ ವಯಾ ಹುಬ್ಬಳ್ಳಿ ವಿಮಾನಸೇವೆ ಆರಂಭಿಸಿತು. 2014–2019ರ ಮಧ್ಯೆ ಸ್ಪೈಸ್‌ಜೆಟ್‌ ಕಂಪೆನಿಯ ವಿಮಾನಗಳು ಸಂಚಾರಸೇವೆ ನೀಡಿದವು. ರನ್‌ವೇ ದುರಸ್ತಿ ಕಾರಣದಿಂದ ವಿಮಾನ ಸಂಚಾರ ಸೇವೆ ಎಲ್ಲವೂ ಸ್ಥಗಿತವಾದವು. 2018 ರಲ್ಲಿ ಇಂಡಿಗೋ ವಿಮಾನ ಕಂಪನಿಯು ಸೇವೆ ಆರಂಭಿಸಿ, ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರತಿದಿನ ಐದು ಆಗಮನ ಮತ್ತು ಐದು ನಿರ್ಗಮನ ವಿಮಾನಗಳಿವೆ. ರಾಜ್ಯ ಸರ್ಕಾರವು ಒಟ್ಟು 615 ಎಕರೆ ಭೂಮಿಯನ್ನು ಎಎಐಗೆ ಹಸ್ತಾಂತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.