ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ಜಾಧವ್‌ ಅವಿರೋಧ ಆಯ್ಕೆ

‘ರೈತ ಭವನ’ದಲ್ಲಿ ಕ್ಯಾಂಟೀನ್‌ ಆರಂಭಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 16:30 IST
Last Updated 11 ನವೆಂಬರ್ 2019, 16:30 IST
ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಾಮಚಂದ್ರ ಜಾಧವ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮತ್ತು ಎಪಿಎಂಸಿ ಸದಸ್ಯರು ಅಭಿನಂದಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಾಮಚಂದ್ರ ಜಾಧವ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮತ್ತು ಎಪಿಎಂಸಿ ಸದಸ್ಯರು ಅಭಿನಂದಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಊಣಕಲ್‌ ಕ್ಷೇತ್ರದ ಬಿಜೆಪಿ ಸದಸ್ಯ ರಾಮಚಂದ್ರ ಜಾಧವ ಅವಿರೋಧವಾಗಿ ಆಯ್ಕೆಯಾದರು.

ಎಪಿಎಂಸಿ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ರಾಮಚಂದ್ರ ಜಾಧವ್‌ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಘೋಷಣೆ ಮಾಡಿದರು.

ಅಭಿವೃದ್ಧಿಗೆ ಕ್ರಮ:

ADVERTISEMENT

‘ಹುಬ್ಬಳ್ಳಿ ಎಪಿಎಂಸಿಯು ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿದೆ. ಪಕ್ಷ ಬೇಧವಿಲ್ಲದೇ ಎಲ್ಲ ಸದಸ್ಯರ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಎಪಿಎಂಸಿ ಪ್ರಾಂಗಣದಲ್ಲಿ ಅಗತ್ಯವಿರುವ ನೀರು ಪೂರೈಕೆಗೆ ಹಾಗೂ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು‘ ಎಂದು ಜಾಧವ್‌ ಹೇಳಿದರು.

‘ಎಪಿಎಂಸಿಗೆ ಬರುವ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಕೃಷಿ ಉತ್ಪನ್ನ ಮಾರಾಟಕ್ಕೆ ರಾತ್ರಿ ವೇಳೆ ಬಂದು ತಂಗುವ ರೈತರ ಅನುಕೂಲಕ್ಕಾಗಿ ರೈತ ಭವನದಲ್ಲಿ ರಿಯಾಯಿತಿ ದರದ ಕ್ಯಾಂಟೀನ್‌ ಆರಂಭಿಸುವ ಯೋಜನೆ ಇದೆ’ ಎಂದರು.

ಈರುಳ್ಳಿಗೆ ಬೆಂಬಲ ಬೆಲೆ:

‘ಮಳೆ ಮತ್ತು ಪ್ರವಾಹದಿಂದಾಗಿ ಈರುಳ್ಳಿ ಬೆಳೆ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿ ಇದ್ದಾರೆ. ಈ ನಡುವೆ ಬೆಲೆಯೂ ಕುಸಿತವಾಗಿದೆ. ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಬೆಳೆಗಾರರಿಗೆ ನೆರವಾಗುವಂತೆ ರಾಜ್ಯ ಸರ್ಕಾರವನ್ನು ಕೋರಲಾಗುವುದು’ ಎಂದು ಹೇಳಿದರು.

‘ರೈತರ ನಿರಾಸಕ್ತಿಯಿಂದ ಪಾಳು ಬಿದ್ದಿರುವ ‘ರೈತ ಸಂತೆ’ ಪುನರಾರಂಭಕ್ಕೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಎಪಿಎಂಸಿ ಉಪಾಧ್ಯಕ್ಷೆ ಗಿರಿಜಾ ಬೆಂಗೇರಿ, ಸದಸ್ಯರಾದ ಈಶ್ವರಪ್ಪ ಕಿತ್ತೂರ, ನೀಲವ್ಬ ರಾಯನಗೌಡ್ರ, ಶಂಕರಗೌಡ ಪಾಟೀಲ, ಬಸವರಾಜ ನಾಯ್ಕರ, ಸುರೇಶ ಕಿರೇಸೂರ, ಜಗನ್ನಾಥಗೌಡ ಸಿದ್ದನಗೌಡ್ರ, ಶಂಕ್ರಪ್ಪ ಬಿಜವಾಡ, ಚನ್ನಬಸಪ್ಪ ಹೊಸಮನಿ, ರಘುನಾಥಗೌಡ ಕೆಂಪಲಿಂಗನಗೌಡ್ರ, ಮಂಜುನಾಥ ಮುದರೆಡ್ಡಿ, ನಾಮನಿರ್ದೇಶಿತ ಸದಸ್ಯರಾದ ಕಮಲಾಕ್ಷಿ ಬಸಾಪುರ,ಶಿವಯೋಗಿ ಮಂಟೂರಶೆಟ್ರ, ಪರಸಪ್ಪ ಮುಳಗುಂದ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಉಪಾಧ್ಯಕ್ಷ ಶಂಕರ ನೇಗಿನಾಳ, ಗೌರವ ಕಾರ್ಯದರ್ಶಿ ಪ್ರಭು ಲಿಂಗಪ್ಪ ಅಂಕಲಕೋಟೆ, ಬಿಜೆಪಿ ಮುಖಂಡ ಸಂತೋಷ ಜೀವನಗೌಡ್ರ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.