ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 2025–26ನೇ ಸಾಲಿನ ಬಜೆಟ್ ಮಂಡಿಸಲು ಬಜೆಟ್ ಪ್ರತಿಯೊಂದಿಗೆ ಪಾಲಿಕೆ ಸಭಾಭವನಕ್ಕೆ ಬಂದ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮನಗುಂಡಿ
ಹುಬ್ಬಳ್ಳಿ: ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಆರೋಪಿಸಿ ವಿಪಕ್ಷ ಸದಸ್ಯರು ಧರಣಿ ನಡೆಸಿದರು. ಅವರ ಗದ್ದಲದ ನಡುವೆಯೇ 2025–26ನೇ ಸಾಲಿನ ಆರ್ಥಿಕ ವರ್ಷಕ್ಕೆ ₹1512.67 ಕೋಟಿ ಗಾತ್ರದ ಬಜೆಟ್‌ನ್ನು ಗುರುವಾರ ನಗರದ ಪಾಲಿಕೆ ಸಭಾಭವನದಲ್ಲಿ ಮಂಡಿಸಲಾಯಿತು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮನಗುಂಡಿ ಅವರು ₹30.78 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು. 45 ನಿಮಿಷ ಬಜೆಟ್ ಪ್ರತಿ ಓದಿದ ಅವರು, ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದರು. ಈ ವೇಳೆ ವಿಪಕ್ಷ ಸದಸ್ಯರು ಮೇಯರ್ ಪೀಠದ ಎದುರು ನಿಂತು ಘೋಷಣೆ ಕೂಗಿದರು. ಬಹುಮತದೊಂದಿಗೆ ಸಭೆ ಬಜೆಟ್ ಅಂಗೀಕರಿಸಿತು.
ಸತತ ಮೂರನೇ ಬಾರಿಗೆ ಬಜೆಟ‌್ ಗಾತ್ರ ₹1 ಸಾವಿರ ಕೋಟಿ ದಾಟಿತು. ಕಳೆದ ವರ್ಷ ಮೇಯರ್ ಆಗಿದ್ದ ವೀಣಾ ಬರದ್ವಾಡ ಅವರು ₹1,491.75 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು.
‘ಸ್ವಾವಲಂಬಿ ಹಾಗೂ ಸದೃಢ ಅಭಿವೃದ್ಧಿಯಡೆಗೆ’ ಪಾಲಿಕೆ ಎಂಬ ಘೋಷವಾಕ್ಯದಡಿ ಅವಳಿ ನಗರಗಳನ್ನು ಅಭಿವೃದ್ಧಿಪಡಿಸುವ ದೂರದೃಷ್ಟಿಯೊಂದಿಗೆ ‘ಪಂಚ ಸೂತ್ರ’ಗಳನ್ನೊಳಗೊಂಡ, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡುವ ಅಂಶಗಳನ್ನು ಬಜೆಟ್ ಒಳಗೊಂಡಿದೆ.
ಪಾಲಿಕೆ ಆಸ್ತಿಗಳ 3ಡಿ ಜಿಐಎಸ್ ಸರ್ವೆ ಮಾಡುವ ಮೂಲಕ ಆಸ್ತಿ ತೆರಿಗೆ ಮತ್ತು ಇತರ ಆರ್ಥಿಕ ಸಂಪನ್ಮೂಲಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ನಗರದ ಸೌಂದರ್ಯೀಕರಣಕ್ಕೆ ಪಿಪಿಪಿ ಮಾದರಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ, ಮೂಲದಲ್ಲಿಯೇ ಕಸ ವಿಂಗಡಿಸಿ, ಶೇ 100ರಷ್ಟು ಕಸ ಸಂಸ್ಕರಣೆ ಮಾಡಿ ಕಸ ಮುಕ್ತ ನಗರ ಮಾಡುವುದು, 24X7 ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು 2025–16ನೇ ಸಾಲಿನಲ್ಲಿ ಪೂರ್ಣಗೊಳಿಸಿ 24X7 ಕುಡಿಯುವ ನೀರು ಪೂರೈಸುವ ಯೋಜನೆಗಳು ಬಜೆಟ್‌ನಲ್ಲಿವೆ.
ಮಹಾನಗರ ಪಾಲಿಕೆ ಸದಸ್ಯರು, ಕಾಯಂ ಪೌರಕಾರ್ಮಿಕರು ಹಾಗೂ ಮಾಧ್ಯಮದವರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ‘ಆರೋಗ್ಯ ರಕ್ಷೆ’ ಎಂಬ ಯೋಜನೆ ಜಾರಿಗೆ ತರಲಾಗಿದ್ದು, ಇದಕ್ಕಾಗಿ ₹75 ಲಕ್ಷ ಅನುದಾನ ಮೀಸಲಿಡಲಾಗಿದೆ.
2025–26ನೇ ಸಾಲಿನಲ್ಲಿ ₹293.54 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಆಸ್ತಿಗಳ ಜಿಐಎಸ್ ಸರ್ವೆಯಿಂದ ಮುಂಬರುವ ವರ್ಷಗಳಲ್ಲಿ ₹400 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣಗೊಂಡ ಜನತಾ ಬಜಾರ್ ಸೇರಿದಂತೆ ವಿವಿಧ ಮಾರುಕಟ್ಟೆಗಳ ಸ್ಟಾಲ್‌ಗಳಿಂದ ₹20.75 ಕೋಟಿ ಮತ್ತು ಪಾಲಿಕೆ ವ್ಯಾಪ್ತಿಯ ಜಾಹೀರಾತು ಫಲಕಗಳಿಂದ ₹6.76 ಕೋಟಿ ಮತ್ತು ಪಾಲಿಕೆ ಒಡೆತನದ ಆಸ್ತಿಗಳ ಮಾರಾಟದಿಂದ ₹180 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
₹105 ಕೋಟಿ ವಾರ್ಡ್ ಅನುದಾನವನ್ನು ಮೀಸಲಿಡಲಾಗಿದ್ದು, ಪಾಲಿಕೆ ಸದಸ್ಯರ ನಿಧಿಯನ್ನು ₹1.25 ಕೋಟಿಗೆ ಹೆಚ್ಚಿಸಲಾಗಿದೆ. ನಾಮನಿರ್ದೇಶಿತ ಸದಸ್ಯರಿಗೆ ₹50 ಲಕ್ಷ ಅನುದಾನ ಒದಗಿಸಲಾಗಿದೆ. ಅದರ ಜತೆಗೆ ಪಾಲಿಕೆ ಅಭಿವೃದ್ಧಿ ಹಾಗೂ ಆಡಳಿತದ ದೃಷ್ಟಿಯಿಂದ ಮೂಲಸೌಲಭ್ಯ ಒದಗಿಸುವಿಕೆ, ಸ್ವಚ್ಛನಗರ ನಿರ್ಮಾಣ, ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ತಪ್ಪಿಸಲು ಅನಿಮಲ್ ಬರ್ತ್ ಕಂಟ್ರೋಲ್ ಮತ್ತು ಅಪಾಯಕಾರಿ ಪ್ರಾಣಿಗಳ ಸ್ಥಳಾಂತರಕ್ಕಾಗಿ ₹3 ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ಕಟ್ಟಡ ಪರವಾನಗಿ ಮತ್ತು ಮುಕ್ತಾಯ ಪ್ರಮಾಣಪತ್ರ ನೀಡುವ ವಿವಿಧ ಶುಲ್ಕಗಳಿಂದ ಮುಂದಿನ ವರ್ಷ ₹79.90 ಕೋಟಿ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ.
ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಉಪಮೇಯರ್ ದುರ್ಗಮ್ಮ ಬಿಜವಾಡ ಇದ್ದರು.
ವೈಫಲ್ಯ ಮುಚ್ಚಿಹಾಕಲು ಗದ್ದಲ
‘ರಾಜ್ಯ ಸರ್ಕಾರ ಪಾಲಿಕೆಗೆ ಅನುದಾನ ನೀಡದಿರುವ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ನವರು ಈ ರೀತಿ ಗದ್ದಲ ಮಾಡಿ ಯಾವುದೇ ಚರ್ಚೆ ನಡೆಸದೆ ಹೊರ ಹೋದರು’ ಎಂದು ಮೇಯರ್ ರಾಮಪ್ಪ ಬಡಿಗೇರ ದೂರಿದರು. ‘ಎರಡು ದಿನ ಮುನ್ನ ಬಜೆಟ್ ಪ್ರತಿ ನೀಡಲಾಗಿದೆ ಒಂದು ವಾರ ಮೊದಲೇ ನೀಡಬೇಕಾಗಿತ್ತು ಎಂದು ಗದ್ದಲ ಆರಂಭಿಸಿದರು. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಮನವೊಲಿಸಿದರೂ ಒಪ್ಪಲಿಲ್ಲ. ಬಜೆಟ್ ಮಂಡನೆಯಾದ ನಂತರ ನಾಲ್ಕು ದಿನ ಬೇಕಾದರೂ ಚರ್ಚೆ ಮಾಡಬಹುದಿತ್ತು’ ಎಂದರು. ‘ರಾಜ್ಯ ಸರ್ಕಾರಿಂದ 2016–17ರಿಂದ ಈಚೆಗೆ ₹303 ಕೋಟಿ ಅನುದಾನ ಬರಬೇಕಿದೆ. ಅನುದಾನ ಬಾರದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಾಸಕ ಪ್ರಸಾದ ಅಬ್ಬಯ್ಯ ಮುಖ್ಯಮಂತ್ರಿಗೂ ಮನವಿ ಮಾಡಲಾಗಿದೆ. ಸೌಜನ್ಯಕ್ಕೂ ಮನವಿಗೆ ಪ್ರತಿಕ್ರಿಯೆ ನೀಡಿಲ್ಲ’ ಎಂದು ಹೇಳಿದರು. ‘ಜಾಹೀರಾತುಗಳಿಂದ ₹6.67 ಕೋಟಿ ಬಾಕಿ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ 295 ಅಧಿಕೃತ ಜಾಹೀರಾತು ಫಲಕಗಳಿವೆ. ವಲಯ ಕಚೇರಿ ವ್ಯಾಪ್ತಿಯಲ್ಲಿ ಅಧಿಕೃತ ಅನಧಿಕೃತ ಖಾಸಗಿ ಜಾಹೀರಾತುಗಳ ಕುರಿತು ವರದಿ ನೀಡುವಂತೆ 10 ದಿನಗಳ ಕಾಲಾವಕಾಶ ನೀಡಲಾಗಿದೆ’ ಎಂದು ತಿಳಿಸಿದರು.
ಸಭೆ ನುಂಗಿ ಹಾಕಿದ ‘ನಾಟಕ’
ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಹಿಂದಿನ ಬಜೆಟ್ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆಗ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ‘ನಾಟಕ ಮಾಡಲು ಬಂದಿದ್ದಾರೆ’ ಎಂದು ಹೇಳಿದ್ದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮೇಯರ್ ಪೀಠದ ಎದುರು ಧರಣಿ ಆರಂಭಿಸಿದರು. ಬಿಜೆಪಿಯ ತಿಪ್ಪಣ್ಣ ಮಜ್ಜಗಿ ಬಜೆಟ್ ಮಂಡನೆಯಾಗದ ಹೊರತು ಚರ್ಚೆಗೆ ಅವಕಾಶ ಕೊಡಬಾರದು ಎಂದರು. ‘ನಾವು ನಾಟಕ ಮಾಡಲು ಬಂದಿಲ್ಲ. ಚರ್ಚೆ ಮಾಡಲು ಬಂದಿದ್ದೇವೆ’ ಎಂದು ಕಾಂಗ್ರೆಸ್‌ನ ಸುವರ್ಣಾ ಕಲ್ಲಕುಂಟ್ಲ ಕವಿತಾ ಕಬ್ಬೇರ ದೊರೆರಾದ ಮಣಿಕುಂಟ್ಲ ಹೇಳಿದರು. ಆಗ ಮೇಯರ್ ಯಾರೂ ಸರಿಯಾದ ಸಮಯಕ್ಕೆ ಸಭೆಗೆ ಹಾಜರಾಗಿಲ್ಲ. ಜನರು ನಿಮ್ಮನ್ನು ಆಯ್ಕೆ ಮಾಡಿ ಕಳಿಸಿದ್ದು ಜವಾಬ್ದಾರಿ ಇದೆ. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರೂ ಯಾರೂ ಕಿವಿಗೊಡಲಿಲ್ಲ. ಇದಕ್ಕೂ ಮುನ್ನ ಕೋರಂ ಕೊರತೆಯಿಂದ ಸಭೆ ಒಂದು ಗಂಟೆ ತಡವಾಗಿ ಆರಂಭವಾಯಿತು.
ಬಜೆಟ್‌ನ ಪ್ರಮುಖ ಅಂಶಗಳು
* ಮುಂದಿನ ವರ್ಷದಿಂದ ವಾರ್ಡ್ ಮಟ್ಟದಲ್ಲಿ ಆಸ್ತಿ ತೆರಿಗೆ ಮೇಳ ಇ–ಆಸ್ತಿ ಮೇಳ ಆಯೋಜನೆ
* ಅವಶ್ಯವಿರುವ ಪ್ರದೇಶದಲ್ಲಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ನಿರ್ಮಾಣಕ್ಕೆ ಕ್ರಮ
* ಕೆರೆ ಉದ್ಯಾನಗಳ ಅಭಿವೃದ್ಧಿಗೆ ಅಮೃತ 2.0 ಯೋಜನೆ ಅಡಿ ₹25 ಕೋಟಿ ಅನುದಾನ ನಿರೀಕ್ಷೆ
* ಪಾಲಿಕೆಯಲ್ಲಿ ವಿಲೀನಗೊಂಡ ಗ್ರಾಮಗಳ ಅಭಿವೃದ್ಧಿಗೆ ₹10 ಕೋಟಿ
* ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಾರಿಗೊಳಿಸಲಾಗಿರುವ ಯೋಜನೆಗಳ ನಿರ್ವಹಣೆಗೆ ₹41 ಕೋಟಿ
* ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ಹಾಗೂ ಮುಕ್ತಾಯ ಪ್ರಮಾಣಪತ್ರ ಪಡೆಯದೆ ಇರುವ ಪ್ರಕರಣ ಗುರುತಿಸಲು ವಿಶೇಷ ತಂಡ ರಚನೆ
* ಶೀಘ್ರ ಕಡತ ವಿಲೇವಾರಿ ಪಾರದರ್ಶಕ ಆಡಳಿತಕ್ಕೆ ವಲಯ ಕಚೇರಿ ಮತ್ತು ಕೇಂದ್ರ ಕಚೇರಿಯಲ್ಲಿ ಇ–ಆಫೀಸ್ ವ್ಯವಸ್ಥೆ ಜಾರಿಗೆ ₹1 ಕೋಟಿ
* ಪಾರಂಪರಿಕ ತ್ಯಾಜ್ಯ ಸಂಸ್ಕರಣೆ ವಿಲೇವಾರಿಗೆ ಸ್ವಚ್ಛ ಭಾರತ–2 ಯೋಜನೆಯ ಅನುದಾನ ಹಾಗೂ ಪಾಲಿಕೆ ವಂತಿಕೆ ಸೇರಿ ₹60 ಕೋಟಿ ಅನುದಾನ
* ಕಸ ವಿಂಗಡಣೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ₹5 ಕೋಟಿ ಅನುದಾನ
* ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅಡಿ ಮಂಟೂರು ರಸ್ತೆಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ₹5 ಕೋಟಿ
* ಎಸ್‌ಎಫ್‌ಸಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಶೇ 40ರಷ್ಟು ಮೊತ್ತವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ವಿನಿಯೋಗಿಸಲು ₹1.85 ಕೋಟಿ ಮತ್ತು ಸಾಮಾನ್ಯ ನಿಧಿಯಿಂದ ₹3 ಕೋಟಿ ಅನುದಾನ
ಇದು ಅಭಿವೃದ್ಧಿ ಪೂರಕ ಬಜೆಟ್. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ವಸ್ತುಸ್ಥಿತಿ ಆಧರಿಸಿ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಜಿಐಎಸ್ ಸರ್ವೆ ಮೂಲಕ ಪಾಲಿಕೆ ಆದಾಯ ಮೂರು ಪಟ್ಟು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ-ರಾಮಪ್ಪ ಬಡಿಗೇರ, ಹು–ಧಾ ಮಹಾನಗರ ಪಾಲಿಕೆ
ನಾವು ಚರ್ಚೆಗೆ ಸಿದ್ಧರಿದ್ದರೂ ಅವಕಾಶ ನೀಡಲಿಲ್ಲ. ರಾಜ್ಯ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಮಾತ್ರ ಬಿಜೆಪಿಯವರು ಮಾತನಾಡುತ್ತಾರೆ. ಕೇಂದ್ರ ಸರ್ಕಾರದ ಅನುದಾನದ ಕುರಿತು ಅವರು ತುಟಿ ಬಿಚ್ಚುವುದಿಲ್ಲ-ರಾಜಶೇಖರ ಕಮತಿ, ವಿರೋಧ ಪಕ್ಷದ ನಾಯಕ ಹು–ಧಾ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.