ADVERTISEMENT

ಅಹಿಂಸೆ, ಶಾಂತಿ ಸಾರುವ ಜೈನ ಧರ್ಮ: ಸಚಿವ ಪ್ರಲ್ಹಾದ ಜೋಶಿ

ಜೈನ ಸಮಾಜದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 8:34 IST
Last Updated 24 ಜನವರಿ 2021, 8:34 IST
ಹುಬ್ಬಳ್ಳಿಯಲ್ಲಿ ಭಾನುವಾರ 108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ 108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.   

ಹುಬ್ಬಳ್ಳಿ: ದಕ್ಷಿಣ ಭಾರತ ಜೈನ ಸಭಾ, ಪ್ರಭಾವತಿ ಮತ್ತು ಸುರೇಂದ್ರ ಶಾಂತಪ್ಪ ನಾವಳ್ಳಿ ಅಕಾಡೆಮಿ ಹಾಗೂ ದಿಗಂಬರ ಜೈನ ಬೋರ್ಡಿಂಗ್ ಮತ್ತು ಸಾಂಗ್ಲಿಯ ಪದವೀಧರ ಸಂಘಟನೆ ಸಹಯೋಗದಲ್ಲಿ, ಹುಬ್ಬಳ್ಳಿಯಲ್ಲಿ ಭಾನುವಾರ 108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜೈನ ಬೋರ್ಡಿಂಗ್ ಹಲವು ವರ್ಷಗಳಿಂದ ಆರ್ಥಿಕವಾಗಿ ತೊಂದರೆ ಇರುವವರಿಗೆ ನೆರವಾಗುತ್ತಾ ಲ, ಅವರ ಬದುಕಿನಲ್ಲಿ ಬೆಳಕು ಮೂಡಿಸಿದೆ. ಜೈನ ಧರ್ಮವು ಸಮಾಜದಲ್ಲಿ ಅಹಿಂಸೆ ಮತ್ತು ಶಾಂತಿಯನ್ನು ಸಾರುತ್ತಾ ಬಂದಿದೆ ಎಂದರು.

ದಾನ ನೀಡಲು ವಿಶಾಲ ಮನಸ್ಸು ಮುಖ್ಯ. ಕೆಲವರಿಗೆ ಕೋಟ್ಯಂತರ ರೂಪಾಯಿ ಇರುತ್ತದೆ. ಆದರೆ, ದಾನ ಮಾಡುವ ಮನಸ್ಸಿರುವುದಿಲ್ಲ. ಇಟ್ಟಿದ್ದು ಎನಗೆ, ಮುಚ್ಚಿಟ್ಟಿದ್ದು ಪರರಿಗೆ ಎಂಬ ಮಾತಿನಂತೆ, ದುಡಿಮೆಯ ಒಂದು ಭಾಗವನ್ನು ದಾನ ಮಾಡಬೇಕು. ನಮ್ಮ ದಾನ ಮತ್ತು ಧರ್ಮ ನಮ್ಮನ್ನು ಕಾಯುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ವ್ಯಾಪಾರವನ್ನೇ ಮುಖ್ಯ ವೃತ್ತಿಯಾಗಿಸಿಕೊಂಡಿರುವ ಜೈನ ಸಮಾಜ, ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲು ಮುಂದಾಗಿರುವುದು ಒಳ್ಳೆಯ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಮುಂದಕ್ಕೆ ಸಾಗಬೇಕು ಎಂದು ಹೇಳಿದರು.

ಅಕಾಡೆಮಿಯ ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಭಯ ಪಾಟೀಲ, ಸಮಾಜದಲ್ಲಿ ಕೇವಲ ಒಂದೇ ದೃಷ್ಟಿಯಿಂದ ಕೆಲಸಗಳು ಆಗುತ್ತವೆ. ಹಾಗಾಗಿ, ನಾನು ಬಹುತೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುವುದಿಲ್ಲ. ಈ ದೃಷ್ಟಿಕೋನ ಬದಲಾಗಬೇಕು. ಪಂಚ ಕಲ್ಯಾಣ ಪಂಚರ ಕಲ್ಯಾಣವಷ್ಟೇ ಆಗುತ್ತಿದೆ.‌ ಅಕಾಡೆಮಿಯಂತಹ ಕಾರ್ಯ ಹತ್ತು ಪಂಚ ಕಲ್ಯಾಣಕ್ಕೆ ಸಮವಾಗಿದ್ದು, ಹೆಚ್ಚಿನ ಪುಣ್ಯ ಬರುತ್ತದೆ. ಸ್ವಾಮೀಜಿಗಳು ಸಹ ಗುಂಪು ಮಾಡುವ ಕೆಲಸ ಮಾಡುತ್ತಾರೆ. ವಿವಿಧ ರಾಜಕೀಯ ಪಕ್ಷದದಲ್ಲಿರುವ ನಾವು ಒಂದೇ ಕಡೆ ಸೇರುವಾಗ, ಭಟ್ಟಾರಕರು ಯಾಕೆ ಸೇರುವುದಿಲ್ಲ? ಎಂದು ಪ್ರಶ್ನಿಸಿದರು.

ವಿವಿಧ ಧರ್ಮಗಳ ಬೆಳವಣಿಗೆ ಹಾಗೂ ಜನರ ಅಭಿವೃದ್ಧಿಯನ್ನು ಗಮನಿಸಿ, ಜೈನ ಸಮಾಜವನ್ನು ಸಮಾಜಮುಖಿಯಾಗಿ ಮುಂದಕ್ಕೆ ಒಯ್ಯಬೇಕಿದೆ. ನಮ್ಮ ಸಮಾಜದಲ್ಲಿ ಇರುವಷ್ಟು ಹಣ ಬೇರೆಯವರ ಬಳಿ ಇಲ್ಲ. ಆದರೆ, ಅದರಿಂದ ಸಮಾಜಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜವಾಗುತ್ತಿದೆ ಎಂಬುದು ಮುಖ್ಯ. ನಮ್ಮ ಸಮಾಜ ಅಧಿಕಾರ ಪಡೆಯುವತ್ತ ಸಾಗಬೇಕಿದೆ ಎಂದರು.

ಐದು ಸಲ ಚುನಾವಣೆಗೆ ಸ್ಪರ್ಧಿಸಿದ ನಾನು, ಮೂರು ಸಲ ಶಾಸಕನಾಗಿದ್ದೇನೆ. ಇದಕ್ಕೆ ನನ್ನ ತಂದೆ-ತಾಯಿ ಕಲಿಸಿಕೊಟ್ಟ ಸಂಸ್ಕಾರ ಹಾಗೂ ಬಿಜೆಪಿಯು ನಾಯಕರಾಗಿದ್ದ ಅನಂತಕುಮಾರ್ ಕಾರಣ. ಅಕಾಡೆಮಿಯು ಒಳ್ಳೆಯ ಅಧಿಕಾರಿಗಳನ್ನು ನೀಡಿ, ಉತ್ತರ ಕರ್ನಾಟಕದಲ್ಲಿ ಮೈಲಿಗಲ್ಲು ಸೃಷ್ಟಿಸಲಿ ಎಂದು ಹೇಳಿದರು.

ದಾನಿಗಳಾದ ಮಮತಾ ಪಾಟೀಲ ಮತ್ತು ರಾಜೇಂದ್ರ ಬೀಳಗಿ ಅವರನ್ನು ಸನ್ಮಾನಿಸಲಾಯಿತು.

ಹುಬ್ಬಳ್ಳಿ ದಿಗಂಬರ ಜೈನ ಬೋರ್ಡಿನಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ₹1 ಲಕ್ಷ ದೇಣಿಗೆಯನ್ನು ಸಚಿವ ಜೋಶಿ ಅವರಿಗೆ ನೀಡಲಾಯಿತು.

ರಾವ್ ಸಾಹೇಬ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಸನ್ನಯ್ಯ, ದತ್ತಾ ಡೋರ್ಲೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.