ADVERTISEMENT

ಹುಬ್ಬಳ್ಳಿ: ತುಳಜಾಭವಾನಿ ದೇಗುಲದಲ್ಲಿ ನವರಾತ್ರಿ ವೈಭವ

ಪ್ರತಿ ದಿನ ದೇವಿಗೆ ಮಹಾ ಮಂಗಳಾರತಿ, ವಿಜಯದಶಮಿಯಂದು ಕಾಕಡಾರತಿ

ಸತೀಶ ಬಿ.
Published 28 ಸೆಪ್ಟೆಂಬರ್ 2022, 19:30 IST
Last Updated 28 ಸೆಪ್ಟೆಂಬರ್ 2022, 19:30 IST
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನಕ್ಕೆ ನವರಾತ್ರಿ ಅಂಗವಾಗಿ ವಿಶೇಷ ದೀಪಾಲಂಕಾರ ಮಾಡಲಾಗಿದೆ –ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನಕ್ಕೆ ನವರಾತ್ರಿ ಅಂಗವಾಗಿ ವಿಶೇಷ ದೀಪಾಲಂಕಾರ ಮಾಡಲಾಗಿದೆ –ಪ್ರಜಾವಾಣಿ ಚಿತ್ರ/ಗುರು ಹಬೀಬ   

ಹುಬ್ಬಳ್ಳಿ: ನಗರದ ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದಲ್ಲಿ ದಸರಾ ಆಚರಣೆ ಪುರಾತನ ಇತಿಹಾಸ ಹೊಂದಿದೆ. ಕೋವಿಡ್‌ನಿಂದಾಗಿ ಎರಡು ವರ್ಷ ಆಚರಣೆ ಕಳೆಗುಂದಿತ್ತು. ಈ ಬಾರಿ ವೈಭವ ಮರುಕಳಿಸಿದೆ.

ಇಲ್ಲಿನ ದೇವಿ ಮೂರ್ತಿಯ ಮಸ್ತಕ ದಲ್ಲಿ ಈಶ್ವರ ಲಿಂಗ ಇರುವುದು ವಿಶೇಷ. ಮಹಿಷಾಸುರ ಮರ್ದಿನಿ ಅವತಾರದಲ್ಲಿ ಈ ಮೂರ್ತಿ ಇದೆ. ಎಸ್‌ಎಸ್‌ಕೆ ತುಳಜಾಭವಾನಿ ದೇವಸ್ಥಾನ ಪಂಚ ಸಮಿತಿ ವತಿಯಿಂದ ದೇವಸ್ಥಾನವನ್ನು 2007ರಲ್ಲಿ ಜೀರ್ಣೋದ್ಧಾರ ಮಾಡಿ ಹೊಸ ಕಟ್ಟಡ ನಿರ್ಮಿಸಲಾಗಿದೆ.

ಮಹಾಲಯ ಅಮಾವಾಸ್ಯೆಯ ಮರುದಿನ ರುದ್ರಾಭಿಷೇಕದ ನಂತರ ಅಲಂಕಾರ ಮಾಡಿ ಘಟ ಸ್ಥಾಪನೆ ಬಳಿಕ ವಿಜಯದಶಮಿವರೆಗೆ ಮೂರ್ತಿಯನ್ನು ಮುಟ್ಟಲು ಅವಕಾಶ ಇರುವುದಿಲ್ಲ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಮಹಾ ಮಂಗಳಾರತಿ ನಡೆಯಲಿದೆ. ವಿಜಯದಶಮಿ ದಿನ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ADVERTISEMENT

ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನ ದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾ ಗುತ್ತದೆ. ಸಂತಾನ ಪ್ರಾಪ್ತಿಗಾಗಿ ದೇವಸ್ಥಾನ
ದಲ್ಲಿ ಉಡಿ ತುಂಬಿಸಿಕೊಂಡು ಹೋಗುವ ಸಂಪ್ರದಾಯ ಇದೆ.

ದೇವಸ್ಥಾನದಲ್ಲಿ ಘಟ ಸ್ಥಾಪನೆ ನಂತರ ಸಮಾಜದ ಎಲ್ಲರ ಮನೆಯ ಲ್ಲಿಯೂ ಘಟ ಸ್ಥಾಪನೆ ಮಾಡಲಾಗುತ್ತದೆ. ಸಮಾಜದ ಮಹಿಳೆಯರು, ಹಿರಿಯರು ಒಂಬತ್ತು ದಿನ ಉಪವಾಸ ಮಾಡು ತ್ತಾರೆ. ಘಟ ಸ್ಥಾಪನೆಯ ಐದನೇ ದಿನ ಲಲಿತಾ ಪಂಚಮಿ (ಪಾಚಿ ಫುಲಾರೊ) ಆಚರಣೆ ನಡೆಯುತ್ತದೆ. ಈ ಸಂದರ್ಭ ದಲ್ಲಿ ವಿಶೇಷ ಸಿಹಿ ಖಾದ್ಯದ ನೈವೇದ್ಯ ಮಾಡಲಾಗುತ್ತದೆ. ವಿಜಯದಶಮಿ ಯಂದು ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ ನಡೆಯುತ್ತದೆ.

‘ಮಹಿಷಾಸುರ ಸಂಹಾರವಾದ ನಂತರವೂ ದೇವಿ ಶಾಂತಳಾಗಿರುವು ದಿಲ್ಲ. ಹೀಗಾಗಿ ವಿಜಯದಶಮಿಯ ಮೊದಲ ಅಥವಾ ಎರಡನೇ ಮಂಗಳವಾರ ದೇವಸ್ಥಾನದಲ್ಲಿ ಭಂಡಾರ ಕಾರ್ಯಕ್ರಮ ನಡೆಸುವ ಸಂಪ್ರದಾಯ ಇದೆ. ಅಸುರರ ಸಂಹಾರದಲ್ಲಿ ದೇವಿಗೂ ಗಾಯಗಳಾಗಿರುತ್ತವೆ. ‌‌‌ಮೂರ್ತಿಗೆ ಭಂಡಾರ ಲೇಪನ ಮಾಡುವುದರಿಂದ ಗಾಯಗಳು ವಾಸಿಯಾಗುತ್ತವೆ ಎಂಬುದು ನಂಬಿಕೆ’ ಎನ್ನುತ್ತಾರೆ ಎಸ್‌ಎಸ್‌ಕೆ ತುಳಜಾ ಭವಾನಿ ದೇವಸ್ಥಾನ ಪಂಚ ಸಮಿತಿಯ ಜಂಟಿ ಮುಖ್ಯ ಟ್ರಸ್ಟಿ ಭಾಸ್ಕರ ಎನ್‌. ಜಿತೂರಿ, ಗೌರವ ಕಾರ್ಯದರ್ಶಿ ಎನ್‌.ಎನ್‌. ಖೋಡೆ ಹಾಗೂ ಟ್ರಸ್ಟಿ ಪಿ.ಎಲ್‌. ಹಬೀಬ.

‘ಭಂಡಾರ ಪೂಜೆಯ ಮರುದಿನ ದಿನ ಬುತ್ತಿ ಪೂಜೆ ಮಾಡಲಾಗು ತ್ತದೆ. ಆಗ ದೇವಿ ಸಂಪೂರ್ಣವಾಗಿ ಶಾಂತ ಳಾಗುತ್ತಾಳೆ. ಬುತ್ತಿ ಪೂಜೆಯೊಂದಿಗೆ ದಸರಾ ಸಮಾರೋಪಗೊಳ್ಳುತ್ತದೆ’ ಎಂದು ವಿವರಿಸಿದರು.

ದೇಗುಲದ ಹಿನ್ನೆಲೆ: ದೇವಸ್ಥಾನವು 500ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಮೊದಲಿನಿಂದಲೂ ಹಬೀಬ (ಮೆಹ್ತರ) ಕುಟುಂಬದವರು ದೇವಿಗೆ ಪೂಜೆ ಮಾಡಿಕೊಂಡು ಬರುತ್ತಿ ದ್ದಾರೆ. ಶಿವಾಜಿ ಮಹಾರಾಜ, ಶಂಕರಾಚಾರ್ಯರು ದೇವಿಯ ದರ್ಶನ ಪಡೆದಿದ್ದರು. ಸಿದ್ಧಾರೂಢ ಸ್ವಾಮೀಜಿ ಸಹ ದೇವ ಸ್ಥಾನಕ್ಕೆ ಭೇಟಿ ನೀಡುತ್ತಿದ್ದರು ಎಂದು ಸಮಾಜದ ಹಿರಿಯರು ಹೇಳಿದರು.

ಮೂಲ ಮೂರ್ತಿ ದರ್ಶನ

ಪ್ರತಿವರ್ಷ ಘಟ ಸ್ಥಾಪನೆಯ ದಿನ ಮಾತ್ರ, ಮಹಿಷಾಷುರ ಮರ್ದಿನಿ ರೂಪದಲ್ಲಿರುವ ದೇವಿಯ ಮೂಲ ಮೂರ್ತಿಯ ದರ್ಶನದ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ ಎಂದು ದೇವಸ್ಥಾನದ ಅರ್ಚಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.